ಚಿತ್ರದುರ್ಗ: ಪುಣೆಯ ಬಾಲಗಂಧರ್ವ ಸಂಗೀತ ರಸಿಕ ಮಂಡಳಿ ಕೊಡಮಾಡುವ ಪ್ರತಿಷ್ಠಿತ ‘ಕೊಹಿನೂರ್ ಗಂಧರ್ವ’ ಪ್ರಶಸ್ತಿಗೆ ಧಾರವಾಡದ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಕೈವಲ್ಯ ಕುಮಾರ್ ಗುರವ ಆಯ್ಕೆಯಾಗಿದ್ದಾರೆ.
ಸಂಗೀತ ಮತ್ತು ನಾಟಕ ಕಲೆಯಲ್ಲಿ ಅಪೂರ್ವ ಸಾಧನೆ ಮಾಡಿದ ಕಲಾವಿದರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪುಣೆಯ ಮರಾಠಿ ಗಾಯಕ, ರಂಗ ನಟ, ಬಾಲ ಗಂಧರ್ವರ ಸ್ಮರಣೆಯಲ್ಲಿ 50 ವರ್ಷಗಳಿಂದ ಪ್ರಶಸ್ತಿ ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ಹೊರಗಿನ ಕಲಾವಿದರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿಯು ₹ 1,11,111 ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
ಮಂಡಳಿಯು ವಿದುಷಿ ಮಂಜೂಷಾ ಕುಲಕರ್ಣಿ ಪಾಟೀಲ ಅವರಿಗೆ ‘ಬಾಲಗಂಧರ್ವ ಗುಣಗೌರವ’ ಪುರಸ್ಕಾರವನ್ನೂ ಪ್ರಕಟಿಸಿದೆ. ಜುಲೈ 15ರಂದು ಪುಣೆಯ ಬಾಲಗಂಧರ್ವ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಿರಾಣಾ ಘರಾಣೆಯಲ್ಲಿ ಉನ್ನತ ಸಾಧನೆ ಮಾಡಿರುವ ಕೈವಲ್ಯ ಕುಮಾರ್ ಗುರವ ಅವರು ಪ್ರಬುದ್ಧ ಗಾಯನ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಗುರುವಾಗಿ ನೂರಾರು ಶಿಷ್ಯರನ್ನು ಹೊಂದಿದ್ದಾರೆ.
‘ಮರಾಠಿ ಕಲಾವಿದರ ವಲಯದಲ್ಲಿ ಪ್ರತಿಷ್ಠಿತ ಎನಿಸಿರುವ ಪ್ರಶಸ್ತಿಗೆ ಕರ್ನಾಟಕದ, ಅದರಲ್ಲೂ ಧಾರವಾಡದ ನನ್ನನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಕಲೆಗೆ ಭಾಷೆಗಳ ಬೇಲಿ ಇಲ್ಲ. ನಿರಂತರವಾದ ಸಂಗೀತ ಸಾಧನೆಗೆ ಮನ್ನಣೆ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ’ ಎಂದು ಪಂ.ಕೈವಲ್ಯ ಕುಮಾರ್ ಗುರವ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.