
ಚಿತ್ರದುರ್ಗ: ಐತಿಹಾಸಿಕ ಕಲ್ಲಿನಕೋಟೆ ಆವರಣಕ್ಕೆ ಕಳೆದೊಂದು ವಾರದಿಂದ ನೀರು ಸರಬರಾಜು ಸ್ಥಗಿತಗೊಂಡಿದ್ದು ಶೌಚಾಲಯ, ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ. ಇದರಿಂದಾಗಿ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರು, ಶಾಲಾ ವಿದ್ಯಾರ್ಥಿಗಳು ನೀರಿಲ್ಲದೇ ಪರದಾಡುತ್ತಿದ್ದಾರೆ. ನೀರಿನ ಹಾಹಾಕಾರ ಸೃಷ್ಟಿಯಾಗಿದೆ.
ವರ್ಷಾಂತ್ಯದಲ್ಲಿ ರಾಜ್ಯ, ಹೊರರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ನಿತ್ಯ ಕೋಟೆಗೆ ಭೇಟಿ ನೀಡುತ್ತಿದ್ದಾರೆ. ಡಿ.30ರವರೆಗೂ ಶೈಕ್ಷಣಿಕ ಪ್ರವಾಸಕ್ಕೆ ಸರ್ಕಾರದಿಂದ ಅವಕಾಶ ನೀಡಲಾಗಿದೆ. ಕೋಟೆಯೊಳಗೆ ನೀರು ಸಿಗುತ್ತದೆ ಎಂಬ ವಿಶ್ವಾಸದಿಂದ ಟಿಕೆಟ್ ಪಡೆದು ಪ್ರವೇಶ ಪಡೆಯುವ ಪ್ರವಾಸಿಗರಿಗೆ ಬೇಸರ ಉಂಟಾಗುತ್ತಿದೆ. ನೀರಿನ ಘಟಕಗಳಲ್ಲಿ ಕುಡಿಯುವ ನೀರು ಬಾರದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ.
ಕೋಟೆ ಆವರಣದಲ್ಲಿ ನಾಲ್ಕೈದು ಶೌಚಾಲಯಗಳಿದ್ದು ನೀರು ಸರಬರಾಜು ಇಲ್ಲದೇ ಅವುಗಳ ಬಾಗಿಲು ಬಂದ್ ಮಾಡಲಾಗಿದೆ. ಕಾಮನ ಬಾಗಿಲು ಬಳಿಯೇ ಈಚೆಗೆ ಹೊಸದಾಗಿ ಶೌಚಾಲಯ ನಿರ್ಮಾಣ ಮಾಡಿ ಉದ್ಘಾಟನೆ ನೆರವೇರಿಸಲಾಗಿತ್ತು. ಆರಂಭದಲ್ಲಿ ಕೆಲವು ದಿನ ಮಾತ್ರ ಅದರ ಬಾಗಿಲು ತೆರೆಯಲಾಗಿತ್ತು. ಆದರೆ ಈಗ ಕಾರಣವಿಲ್ಲದೇ ನೂತನ ಶೌಚಾಲಯದ ಬಾಗಿಲು ಮುಚ್ಚಲಾಗಿದೆ.
ಬಂದಿಖಾನೆಗೆ ತೆರಳುವ ರಸ್ತೆಯಲ್ಲಿ ಹಳೆಯದಾದ ಶೌಚಾಲಯಕ್ಕೆ ಹೈಟೆಕ್ ರೂಪ ನೀಡಲಾಗಿತ್ತು. ಏಕನಾಥೇಶ್ವರಿ ದೇವಾಲಯದ ಬಲಭಾಗದಲ್ಲಿರುವ ಇನ್ನೊಂದು ಶೌಚಾಲಯವನ್ನು ದುರಸ್ತಿಗೊಳಿಸಲಾಗಿತ್ತು. ಇವೆರಡು ಶೌಚಾಲಯ ಸದಾ ಚಾಲನೆಯಲ್ಲಿದ್ದ ಕಾರಣ ಪ್ರವಾಸಿಗರಿಗೆ ಅನುಕೂಲವಾಗುತ್ತಿತ್ತು. ಆದರೆ ಈಗ ನೀರು ಬಾರದ ಕಾರಣ ಇವುಗಳನ್ನೂ ಬಳಕೆ ಮಾಡಲಾಗುತ್ತಿಲ್ಲ.
ಶೌಚಾಲಯ ಅರಸಿ ಬರುವ ಪ್ರವಾಸಿಗರು ಗೊಂದಲಕ್ಕೀಡಾಗುತ್ತಿದ್ದಾರೆ. ಕೆಲವರು ಶೌಚಾಲಯದ ಸಮೀಪ, ಗೋಡೆ ಬಳಿಯೇ ಶೌಚ ಮಾಡುತ್ತಿರುವ ಕಾರಣ ಅಕ್ಕಪಕ್ಕದಲ್ಲಿ ದುರ್ವಾಸನೆ ಮಿತಿ ಮೀರಿದೆ. ಕೋಟೆಯ ಸ್ವಚ್ಛತಾ ಸಿಬ್ಬಂದಿ ಪ್ರವಾಸಿಗರಿಗೆ ಉತ್ತರಿಸಲು ಸಾಧ್ಯವಾಗದೇ ಶೌಚಾಲಯಗಳಿಗೆ ಬೀಗ ಹಾಕಿ ಬಂದ್ ಮಾಡಿದ್ದಾರೆ.
ಕುಡಿಯುವ ನೀರಿಗೆ ಪರದಾಟ: ಪ್ರವಾಸಿಗರಿಗೆ ಕುಡಿಯುವ ನೀರು ಒದಗಿಸಲು ಏಕನಾಥೇಶ್ವರಿ ದೇವಾಲಯದ ಬಳಿ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಅಲ್ಲಿಂದ ಏಳೆಂಟು ಕಡೆಗಳಲ್ಲಿ ನಳದ ವ್ಯವಸ್ಥೆ ಮಾಡಿದ್ದು ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಈಗ ನೀರು ಸರಬರಾಜು ಇಲ್ಲದ ಕಾರಣ ಯಾವ ನಳದಲ್ಲೂ ನೀರು ಬರುತ್ತಿಲ್ಲ.
ವಾಟರ್ ಬಾಟಲಿ ಹಿಡಿಕೊಂಡು ಪ್ರವಾಸಿಗರು, ಶಾಲಾ ಮಕ್ಕಳು ನಳದಿಂದ ನಳಕ್ಕೆ ಓಡಾಡುತ್ತಿದ್ದಾರೆ. ಮಧ್ಯಾಹ್ನದ ಉರಿ ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದು ಕುಡಿಯುವ ನೀರು ಸಿಗದಂತಾಗಿದೆ. ನೀರು ಸಿಗುವ ಬಗ್ಗೆ ಯಾವುದೇ ಮಾಹಿತಿಯನ್ನೂ ಪ್ರವಾಸಿಗರಿಗೆ ನೀಡದ ಕಾರಣ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
‘ಕೋಟೆಯೊಳಿಗೆ ನೀರು ದೊರೆಯುತ್ತದೆ ಎಂಬ ಕಾರಣದಿಂದ ನಾವು ಬಾಟಲಿಯನ್ನೂ ತರಲಿಲ್ಲ. ನೀರು ಸಿಗದ ಕಾರಣ ಕೋಟೆಯ ಸ್ಮಾರಕ ವೀಕ್ಷಣೆ ಮಾಡಲೂ ಸಾಧ್ಯವಾಗುತ್ತಿಲ್ಲ. ಇಷ್ಟೊಂದು ದೊಡ್ಡ ಸ್ಮಾರಕದ ಆವರಣದಲ್ಲಿ ಕನಿಷ್ಠ ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವುದು ದುರುದೃಷ್ಟಕರ’ ಎಂದು ಪ್ರವಾಸಿಗರೊಬ್ಬರು ಹೇಳಿದರು.
ಮೋಟರ್ ಕೆಟ್ಟಿದೆ...
ಕೋಟೆ ಆವರಣಕ್ಕೆ ನೀರು ಪೂರೈಸುವ ಎರಡೂ ಮೋಟರ್‌ಗಳು ಏಕ ಕಾಲದಲ್ಲಿ ಕೆಟ್ಟಿರುವ ಕಾರಣ ನೀರು ಪೂರೈಕೆ ಸ್ಥಗಿತಗೊಂಡಿದೆ. ಪ್ರವಾಸಿಗರಿಗೆ ತೊಂದರೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು. 2 ದಿನದಲ್ಲಿ ಮೋಟರ್ ರಿಪೇರಿ ಮಾಡಿ ಮೊದಲಿನಂತೆ ನೀರು ಸರಬರಾಜು ಮಾಡಲಾಗುವುದು’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಇಲಾಖೆಯ ಹಿರಿಯ ಸಹಾಯಕ ಸಂರಕ್ಷಣಾಧಿಕಾರಿ ಹರೀಶ್ ರಾಮ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.