ADVERTISEMENT

ಸಮಾನತೆಯ ಸಮಾಜ ನಿರ್ಮಾಣಕ್ಕೆ ಕನಕ ಯತ್ನ: ಸಚಿವ ಡಿ.ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:18 IST
Last Updated 9 ನವೆಂಬರ್ 2025, 6:18 IST
ಹೊಳಲ್ಕೆರೆ ರಸ್ತೆಯ ಕನಕ ವೃತ್ತದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ ನಡೆದ ಕನಕ ಜಯಂತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಉದ್ಘಾಟಿಸಿದರು
ಹೊಳಲ್ಕೆರೆ ರಸ್ತೆಯ ಕನಕ ವೃತ್ತದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ ನಡೆದ ಕನಕ ಜಯಂತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಉದ್ಘಾಟಿಸಿದರು   

ಚಿತ್ರದುರ್ಗ: ‘ಕವಿಯಾಗಿ, ಕೀರ್ತನಾಕಾರರಾಗಿ, ತತ್ವಜ್ಞಾನಿಯಾಗಿ, ಸಮಾಜ ಸುಧಾರಕರಾಗಿ, ದಾರ್ಶನಿಕರಾಗಿ ಕನಕದಾಸರು ಸಮ ಸಮಾಜ ನಿರ್ಮಿಸಲು ಯತ್ನಿಸಿದ್ದಾರೆ. ಮೇಲು– ಕೀಳು ಎಂಬ ಭಾವನೆ ಬಿಟ್ಟು ಸಾಮರಸ್ಯದಿಂದ ಬದುಕುವಂತೆ ದಾರಿ ತೋರಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್‌ ಹೇಳಿದರು.

ನಗರದ ಹೊಳಲ್ಕೆರೆ ರಸ್ತೆಯ ಕನಕವೃತ್ತದಲ್ಲಿ ಶನಿವಾರ ಜಿಲ್ಲಾಡಳಿತದ ವತಿಯಿಂದ ನಡೆದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಭಕ್ತಿ ಸಾಹಿತ್ಯ ಪರಂಪರೆಯಲ್ಲಿ ಕನಕದಾಸರದು ಪ್ರಮುಖ ಸ್ಥಾನ ಪಡೆದಿದ್ದಾರೆ. ಅವರು ಬರೀ ಕವಿಯಷ್ಟೇ ಆಗಿರಲಿಲ್ಲ. ಸಮಾಜ ಸುಧಾರಕರೂ ಆಗಿದ್ದರು. ಪ್ರಸಿದ್ದ ಕೀರ್ತನಕಾರರು, ಹರಿದಾಸರೂ ಆಗಿದ್ದರು. ಅವರ ಕೃತಿಗಳು ಭಕ್ತಿಯ ಪರಮೋನ್ನತ ಸ್ಥಿತಿಯ ಬಗ್ಗೆ ಮಾರ್ಗದರ್ಶನ ಮಾಡುತ್ತವೆ. ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳು ಮತ್ತು ದೈವಭಕ್ತಿ ಸಾರ್ಥಕತೆಯ ಸಂದೇಶ ಸಾರುತ್ತವೆ’ ಎಂದರು.

ADVERTISEMENT

‘ಕನಕದಾಸರು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು. ಕೀರ್ತನಾ ಲೋಕದಲ್ಲಿ ದೈವೀಕ ಸ್ಥಾನದಲ್ಲಿದ್ದಾರೆ. ಹರಿಭಕ್ತಸಾರ, ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯಚರಿತ್ರೆ ಮೊದಲಾದ ಕಾವ್ಯಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಕನಕದಾಸರು ತನ್ನ ಹರಿಭಕ್ತರ ಸಾರದ ಮೂಲಕ ನೀತಿ, ನೇಮ, ಭಕ್ತಿ, ವೈರಾಗ್ಯಳನ್ನು ಕುರಿತು ಚಿಂತನೆ ನಡೆಸಿದ್ದಾರೆ’ ಎಂದರು.

‘ಕನಕದಾಸರ ಸಮನ್ವಯತೆಯ ಗುಣ ಈ ಲೋಕವೇ ಮೆಚ್ಚುವಂತಹದ್ದು, ಈ ಶೈಲಿಯು ಅವರನ್ನು ನಿತ್ಯಕಾಲೀನ ಸಂತ ಕವಿಯಾಗಿ ಮನುಕುಲಕ್ಕೆ ಕಾಣಿಸಿದೆ. ಕನಕದಾಸರ ದಾರ್ಶನಿಕ ಕವಿತ್ವದ ಮಾರ್ಗದರ್ಶನ ಸಮ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಒದಗಿಸಿದೆ. ನಾಳಿನ ಯುವಪೀಳಿಗೆ ಕನಕದಾಸರ ಹಾದಿಯಲ್ಲಿ ಮುನ್ನಡೆಯಬೇಕು’ ಎಂದರು.

ಸಂಸದ ಗೋವಿಂದ ಎಂ ಕಾರಜೋಳ ಮಾತನಾಡಿ ‘ಮಹನೀಯರ ಜಯಂತಿ ಆಚರಣೆಗಳು ಆಯಾ ಸಮುದಾಯಗಳಿಗೆ ಮಾತ್ರ ಸೀಮಿತವಾಗಬಾರದು. ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಜಯಂತಿ ಆಚರಿಸುವಂತಾಗಬೇಕು’ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿ.ಪ್ರಶಾಂತ ನಾಯಕ ಉಪನ್ಯಾಸ ನೀಡಿ ‘ಮಹನೀಯರ ಜಯಂತಿಗಳು ಆತ್ಮಾವಲೋಕನದ ಆಚರಣೆ ಆಗಬೇಕು. ಸಮುದಾಯಕ್ಕೆ ಮಹನೀಯರು ಕೊಟ್ಟಂತಹ ಕೊಡುಗೆಗಳು ಮಾರ್ಗದರ್ಶನದ ಶಕ್ತಿಯಾಗಬೇಕು. ನಮ್ಮ ಆತ್ಮಶಕ್ತಿ, ವ್ಯಕ್ತಿತ್ವ, ಘನತೆ, ಸ್ವಾಭಿಮಾನಕ್ಕೆ ಪ್ರೇರಣೆಯಾಗಬೇಕು’ ಎಂದರು. 

ಕನಕದಾಸರ ಜಯಂತಿ ಅಂಗವಾಗಿ  ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಜಿಲ್ಲಾ ಕುರುಬರ ಸಂಘದ ಕಚೇರಿವರೆಗೆ ವಿವಿಧ ಜಾನಪದ ಕಲಾ ತಂಡಗೊಂದಿಗೆ ಕನಕದಾಸರ ಭಾವಚಿತ್ರದ  ಮೆರವಣಿಗೆ ನಡೆಸಲಾಯಿತು. ಕಾಶಿವಿಶ್ವನಾಥ ಶೆಟ್ಟಿ, ಬಿ.ಎಸ್.ಸುರೇಶ್ ಬಾಬು, ಕೆ.ಟಿ.ಶಿವಕುಮಾರ್, ಇ.ಅಶೋಕ್, ಎನ್.ಅಶೋಕ್ ಅವರಿಗೆ ಕನಕಶ್ರೀ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳ  10 ಜನರನ್ನು ಗೌರವಿಸಲಾಯಿತು. ಕೆ.ಲಿಂಗಯ್ಯ ಅವರ ಕನಕದಾಸರ ಚರಿತ್ರೆ ಮತ್ತು ಜ್ಞಾನಾಂಮೃತಸಾರ ಕೃತಿಗಳ ಬಿಡುಗಡೆ ಮಾಡಲಾಯಿತು.

ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಕಂಠೀರವ ಸ್ಟುಡಿಯೊ ಅಧ್ಯಕ್ಷ ಮೆಹಬೂಬ್ ಪಾಷಾ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ, ಕುರುಬರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಶ್ರೀರಾಮ್, ಕಾರ್ಯದರ್ಶಿ ಬಿ.ಟಿ. ಜಗದೀಶ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಕೆ. ಓಂಕಾರಪ್ಪ, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಇದ್ದರು.

ಕನಕದಾಸರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು

ಎಸ್‌.ಟಿಗೆ ಸೇರಿಸಲು ಒತ್ತಾಯ

ಕುರುಬ ಸಮಾಜವನ್ನು ಎಸ್.ಟಿ ವರ್ಗಕ್ಕೆ ಸೇರಿಸುವುದೂ ಸೇರಿದಂತೆ ಸಮುದಾಯವರ ಶವ ಸಂಸ್ಕಾರಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ಪ್ರತ್ಯೇಕ 5 ಎಕರೆ ಭೂಮಿ ಮಂಜೂರು ತಾಲ್ಲೂಕು ಕೇಂದ್ರದಲ್ಲಿ 2 ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಸಮುದಾಯದ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್‌ ಅವರಿಗೆ ಮನವಿ ಸಲ್ಲಿಸಿದರು. ಸಮಾಜದ ಶೈಕ್ಷಣಿಕ ಚಟುವಟಿಕೆ ಉದ್ದೇಶಕ್ಕೆ ಜಿಲ್ಲೆಯ ಆರೂ ತಾಲ್ಲೂಕು ಕೇಂದ್ರಗಳಲ್ಲಿ ತಲಾ 5 ಎಕರೆ ಭೂಮಿ ಮಂಜೂರು ಮಾಡಬೇಕು. ಈ ಜಾಗದಲ್ಲಿ ಶಾಲೆ ಕಾಲೇಜು ವಿದ್ಯಾರ್ಥಿ ನಿಲಯ ನಿರ್ಮಿಸಲು ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.