
ಚಿತ್ರದುರ್ಗ: ‘ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕನ್ನಡದ ಬಳಕೆ ಅಧ್ವಾನವಾಗಿದೆ. ತ್ರಿಭಾಷಾ ಸೂತ್ರದ ಅಡಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕನ್ನಡ ಅನುಷ್ಠಾನದ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
‘ರಾಜ್ಯದ 1.10 ಲಕ್ಷ ಊರುಗಳ ಹೆಸರುಗಳನ್ನು ಇಂಗ್ಲಿಷ್‌ನಲ್ಲಿ ಬರೆಯುವಾಗ ಆಗುವ ಉಚ್ಚಾರಣಾ ದೋಷಗಳನ್ನು ಸರಿಪಡಿಸಲು ಬೃಹತ್ ಅಭಿಯಾನ ಆರಂಭಿಸಲಾಗಿದೆ. ನಾಮಫಲಕಗಳಲ್ಲಿನ ತಪ್ಪುಗಳನ್ನು ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.
‘ಕಂದಾಯ ಇಲಾಖೆಯಲ್ಲಿ ಸುಮಾರು 70 ಸಾವಿರ ಊರುಗಳ ಹೆಸರನ್ನು ಅಕ್ಷರ ಹಾಗೂ ಆಡಿಯೊ ಫೈಲ್‍ಗಳನ್ನು ಸಂಗ್ರಹಿಸಿ ಇಡಲಾಗಿದೆ. ಇದು ಶ್ಲಾಘನೀಯ ವಿಷಯವಾಗಿದೆ. ಬ್ಯಾಂಕಿಂಗ್ ಹಾಗೂ ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ನಡೆಸುತ್ತಿರುವುದರಿಂದ ಕನ್ನಡಿಗರಿಗೆ ಉದ್ಯೋಗಾವಕಾಶಗಳು ತಪ್ಪುತ್ತಿವೆ. ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸುವಂತೆ ಒತ್ತಾಯಿಸಿ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆಯಲು ಪ್ರಾಧಿಕಾರ ತೀರ್ಮಾನಿಸಿದೆ’ ಎಂದು ತಿಳಿಸಿದರು.
‘ಬ್ಯಾಂಕ್‌ಗಳಲ್ಲಿ ಕನ್ನಡ ಬಾರದ ಅಧಿಕಾರಿಗಳ ನೇಮಕದಿಂದ ಜನರಿಗೆ ತೊಂದರೆಯಾಗುತ್ತಿದೆ. ಎಲ್ಲ ಅರ್ಜಿ ಮತ್ತು ಚಲನ್‌ಗಳು ಕನ್ನಡದಲ್ಲಿ ಲಭ್ಯವಾಗಬೇಕು. ಜತೆಗೆ ಕನ್ನಡ ಬಲ್ಲ ಅಧಿಕಾರಿಯನ್ನು ನೇಮಿಸಲು ಪ್ರಾಧಿಕಾರದಿಂದ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.
‘ಮದರಸಾಗಳಲ್ಲಿ ಕನ್ನಡ ಕಲಿಕೆ, ಲಿಂಗತ್ವ ಅಲ್ಪಸಂಖ್ಯಾತರ ಪದಕೋಶ ರಚನೆಗೆ ಪ್ರಾಧಿಕಾರ ಮುಂದಾಗಿದೆ. ಪ್ರಾಯೋಗಿಕ ಹಂತವಾಗಿ 180 ಮದರಸಾಗಳಲ್ಲಿ ಈಗಾಗಲೇ ಮೂರು ತಿಂಗಳ ಮೂಲ ಕನ್ನಡ ಕಲಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿದೆ. ಶೈಕ್ಷಣಿಕ ಸಾಲಿನಲ್ಲಿ 1,200 ಮದರಸಾಗಳಿಗೆ ಯೋಜನೆ ವಿಸ್ತರಿಸಲು ನಿರ್ಧರಿಸಲಾಗಿದೆ’ ಎಂದರು.
‘ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆ ಹೋಗಲಾಡಿಸಲು ಮತ್ತು ಅವರ ಸಂವಹನವನ್ನು ಸುಲಭಗೊಳಿಸಲು ವಿಶೇಷ ಪದಕೋಶವೊಂದು ಸಿದ್ಧವಾಗುತ್ತಿದೆ. ಸುಮಾರು 300 ಪದಗಳ ‘ಸಾಂಸ್ಕೃತಿಕ ವಿವರಣಾ ಕೋಶ’ವನ್ನು ಸಿದ್ಧಪಡಿಸಲಾಗುತ್ತಿದೆ. ಈ ಕಾರ್ಯಕ್ಕೆ ಅಕ್ಕೈ ಪದ್ಮಶಾಲಿ, ರೂಬಿ ಹರೀಶ್ ಹಾಗೂ ವಸುಧೇಂದ್ರ ಅವರಂತಹ ತಜ್ಞರೊಂದಿಗೆ ನೆರವು ಪಡೆಯಲಾಗಿದೆ’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿನ ಶಿಕ್ಷಕರ ಕೊರತೆ ಮತ್ತು ವಿದ್ಯಾರ್ಥಿಗಳ ಅನುಪಾತದ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಇದನ್ನು ಆಧರಿಸಿ ಶಿಕ್ಷಣ ಸಚಿವರು ಮತ್ತು ಆಯುಕ್ತರೊಂದಿಗೆ ಚರ್ಚಿಸಲಾಗುವುದು. ವಿದ್ಯಾರ್ಥಿಗಳಲ್ಲಿ ಭಾಷಾ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಅರಿವು ಮೂಡಿಸಲು ಸರ್ಕಾರಿ ಶಾಲೆಗಳಿಗೆ ಕನ್ನಡ ದಿನಪತ್ರಿಕೆಗಳನ್ನು ಪೂರೈಸುವ ಬಗ್ಗೆಯೂ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುತ್ತದೆ’ ಎಂದರು.
ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್, ನಾಮನಿರ್ದೇಶಿತ ಸದಸ್ಯ ಎ.ಬಿ. ರಾಮಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಚಿಕ್ಕಪ್ಪನಹಳ್ಳಿ ಷಣ್ಮುಖ, ಸಂಗೇನಹಳ್ಳಿ ಅಶೋಕ್ ಕುಮಾರ್, ಚಿತ್ತಯ್ಯ, ವೇದಾಂತ ಇದ್ದರು.
ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು ‘ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಶೇ.5 ರಷ್ಟು ಇರುವ ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ’ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು. ‘ಸರ್ಕಾರಿ ಹಾಗೂ ಖಾಸಗಿ ವಲಯಗಳ ಉದ್ಯೋಗದಲ್ಲಿ ಕನ್ನಡಿಗರ ಪ್ರಾತಿನಿಧ್ಯ ಕಡಿಮೆಯಾಗಿದೆ. ಈ ಕುರಿತು ಜಿಲ್ಲಾ ಕನ್ನಡ ಅನುಷ್ಠಾನ ಸಮಿತಿ ಸದಸ್ಯರೊಂದಿಗೆ ಚರ್ಚಿಸಿದ್ದೇನೆ. ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂಬುದು ಬಹುದಿನಗಳ ಕೂಗಾಗಿದೆ. ಪ್ರಾಧಿಕಾರ ಸರೋಜಿನಿ ಮಹಿಷಿ ವರದಿ ಖಾಸಗಿ ಕಂಪನಿಗಳಲ್ಲಿ ಅನುಷ್ಠಾನವಾಗಿವೇ ಎಂದು ಪರಿಶೀಲನೆ ನಡೆಸಲಿದೆ’ ಎಂದರು.
ಸರ್ಕಾರಕ್ಕೆ ವಿವರವಾದ ವರದಿ ಪ್ರಾಥಮಿಕ ಹಂತದಿಂದ ಪದವಿವರೆಗೆ ಕನ್ನಡ ಪಠ್ಯಪುಸ್ತಕಗಳಲ್ಲಿ ನಿರಂತರತೆ ಇಲ್ಲವಾಗಿದೆ. ಶಿಕ್ಷಕರನ್ನು ಒಳಗೊಂಡ ಸಮಿತಿ ಮೂಲಕ ಪಠ್ಯಕ್ರಮದ ಸುಧಾರಣೆಗೆ ಕ್ರಮ ಕೈಗೊಳ್ಳಲಿದೆ. ಇದರೊಂದಿಗೆ ನಲಿ–ಕಲಿ ಯೋಜನೆಯ ಕುರಿತು ಸರ್ಕಾರಕ್ಕೆ ವಿವರವಾದ ವರದಿ ನೀಡಲಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.