ADVERTISEMENT

ಚಿತ್ರದುರ್ಗ | ಮಗಳಿಗೆ ಮಿದುಳು ರಕ್ತಸ್ರಾವ: ದಯಾಮರಣ ಕೋರಿದ ತಂದೆ

ವೈದ್ಯಕೀಯ ಸಂಶೋಧನೆಗೆ ಗರ್ಭಿಣಿ ಬಳಕೆಯಿಂದ ಮಗುವಿಗೆ ಸಮಸ್ಯೆ; ಆರೋಪ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 16:12 IST
Last Updated 11 ಜನವರಿ 2025, 16:12 IST
<div class="paragraphs"><p>ದಯಾಮರಣ</p></div>

ದಯಾಮರಣ

   

ಚಿತ್ರದುರ್ಗ: ‘ವೈದ್ಯರು ಗರ್ಭಿಣಿ ಪತ್ನಿಯನ್ನು ವೈದ್ಯಕೀಯ ಸಂಶೋಧನೆಗೆ ಬಳಸಿಕೊಂಡ ಕಾರಣ ಮಗುವಿಗೆ ಮಿದುಳು ರಕ್ತಸ್ರಾವ (ಬ್ರೇನ್‌ ಹೆಮರೇಜ್‌) ಸಮಸ್ಯೆ ಕಾಣಿಸಿಕೊಂಡಿದೆ. ಈ ಕುರಿತು ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಮಗು ಹಾಗೂ ತನಗೆ ದಯಾಮರಣ ನೀಡಬೇಕು’ ಎಂದು ಒತ್ತಾಯಿಸಿ ಇಲ್ಲಿನ ನೆಹರೂ ನಗರದ ನಿವಾಸಿ ಎ.ಗೋಪಾಲ್‌ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಕುರಿತು ಅವರು ವಿಡಿಯೊ ಕೂಡ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘2023ರ ಅ.18ರಂದು ಸಾಮಾನ್ಯ ತಪಾಸಣೆಗಾಗಿ ದಾವಣಗೆರೆಯ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ತೆರಳಿದ್ದಾಗ ವೈದ್ಯರು ಮೋಸದಿಂದ ಪತ್ನಿಯನ್ನು ಸಂಶೋಧನೆಗೆ ಬಳಸಿಕೊಂಡಿದ್ದಾರೆ. ಯಾವುದೇ ಮಾಹಿತಿ ನೀಡದೇ ಪತ್ರಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ. ಪತ್ನಿಗೆ ವಿವಿಧ ಇಂಜೆಕ್ಷನ್‌ ನೀಡಿದ್ದ ಕಾರಣ ಅ. 19ರಂದು ಅವಧಿ ಪೂರ್ವವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಬಳಿಕ ಆಸ್ಪತ್ರೆಯ ಕಾಗದ– ಪತ್ರ ಪರಿಶೀಲಿಸಿದಾಗ ಪತ್ನಿಯನ್ನು ಸಂಶೋಧನೆಗೆ ಬಳಸಿಕೊಂಡ ವಿಚಾರ ತಿಳಿಯಿತು. ತಕ್ಷಣವೇ ನಾನು ಆಸ್ಪತ್ರೆ ಅಧೀಕ್ಷಕರಿಗೆ ದೂರು ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಡಿ. 12ರಂದು ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗೂ ದೂರು ಕೊಟ್ಟಿದ್ದೇನೆ. ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಮಗುವಿಗೆ 1.3 ವರ್ಷ ತುಂಬಿದ ನಂತರ ಬೆಳವಣಿಗೆಯಲ್ಲಿ ವ್ಯತ್ಯಾಸ ಕಾಣಿಸಿತು. ಆದ್ದರಿಂದ  ಈಚೆಗೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ತೋರಿಸಿದೆವು. ಮಗುವಿಗೆ ಮಿದುಳಿನ ರಕ್ತಸ್ರಾವ ಸಮಸ್ಯೆ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನನ್ನ ಮಗಳಿಗೆ ಈ ಸಮಸ್ಯೆ ಉಂಟಾಗಲು ಪತ್ನಿಯನ್ನು ವೈದ್ಯಕೀಯ ಸಂಶೋಧನೆಗೆ ಬಳಸಿಕೊಂಡಿದ್ದೇ ಕಾರಣ’ ಎಂದು ಆರೋಪಿಸಿದ್ದಾರೆ.

‘ಕಳೆದೊಂದು ವರ್ಷದಿಂದ ನನ್ನ ಹೋರಾಟಕ್ಕೆ ಯಾವುದೇ ಸ್ಪಂದನೆ ಸಿಗದಿರುವ ಕಾರಣ ಮಗಳು ಹಾಗೂ ನನಗೆ ದಯಾಮರಣ ನೀಡಬೇಕು ಎಂದು ಜ. 6ರಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ’ ಎಂದು ಎ.ಗೋಪಾಲ್‌ ತಿಳಿಸಿದ್ದಾರೆ.

‘ವೈದ್ಯಕೀಯ ಕಾಲೇಜುಗಳಲ್ಲಿ ಗರ್ಭಿಣಿಯ ಅನುಮತಿ ಪಡೆದು ಸಂಶೋಧನೆಗೆ ಬಳಸಿಕೊಳ್ಳುವುದು ವಾಡಿಕೆ. ಗರ್ಭಿಣಿಯರ ಕ್ಲಿನಿಕಲ್‌ ಟ್ರಯಲ್‌, ಕೇಸ್‌ ಸ್ಟಡಿ ಮಾಡಲಾಗುತ್ತದೆ. ಇದರಿಂದ ತೊಂದರೆ ಆಗುವ ಸಾಧ್ಯತೆ ಕಡಿಮೆ. ಸಮಸ್ಯೆಯಾಗಿದ್ದರೆ ಅದರ ಬಗ್ಗೆ ಸಮಗ್ರ ಪರಿಶೀಲನೆಯಾಗಬೇಕು’ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಅಭಿನವ್‌ ತಿಳಿಸಿದರು. ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಪ್ರತಿಕ್ರಿಯೆಗೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.