ADVERTISEMENT

ಚುನಾವಣೆಯಲ್ಲಿ ಮೂರು ಪಕ್ಷಗಳು ಹಣ, ಮದ್ಯ ಹಂಚುತ್ತಿವೆ: ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 7:31 IST
Last Updated 28 ಅಕ್ಟೋಬರ್ 2020, 7:31 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಚಿತ್ರದುರ್ಗ: ಮತದಾರರು, ರಾಜಕಾರಣಿಗಳು ಕೆಟ್ಟಿದ್ದಾರೆ. ನನ್ನನ್ನೂ ಸೇರಿದಂತೆ ಯಾರಲ್ಲೂ ನೈತಿಕತೆ ಉಳಿದಿಲ್ಲ. ಚುನಾವಣೆ ಸಂದರ್ಭದಲ್ಲಿ ಮೂರು ಪಕ್ಷಗಳು ಮತದಾರರಿಗೆ ಹಣ ಹಾಗೂ ಮದ್ಯ ಹಂಚುತ್ತಿವೆ ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ವಿಧನಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿದ ಮತಗಟ್ಟೆಗೆ ಬುಧವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಮತದಾರರೊಬ್ಬರು ಕರೆ ಮಾಡಿ ಪಕ್ಷವೊಂದು ₹1,500, ಮತ್ತೊಬ್ಬ ಅಭ್ಯರ್ಥಿ ₹1,000 ನೀಡುತ್ತಿದ್ದಾರೆ. ನೀವು ಎಷ್ಟು ಕೊಡುತ್ತೀರಿ ಎಂದು ಪ್ರಶ್ನಿಸಿದರು. ವಿದ್ಯಾವಂತ ಮತದಾರರು ಹಣ ಕೇಳುವುದು ಸರಿಯಲ್ಲ. ಹೀಗಾಗಿ, ರಾಜಕಾರಣ ಬೇಸರ ತರಿಸಿದೆ. ಗೆದ್ದವರು ಅಧಿಕಾರ ನಡೆಸಿದರೆ ಉಳಿದವರು ಟೋಪಿ ಹಾಕಿಸಿಕೊಂಡು ಮನೆಯಲ್ಲಿ ಕೂರುತ್ತಾರೆ. ಮೌಲ್ಯಾಧಾರಿತ ರಾಜಕಾರಣ ರಾಮಕೃಷ್ಣ ಹೆಗಡೆ ಅವರ ಹಿಂದೆಯೇ ಹೋಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಜೆಡಿಎಸ್‌ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಪದವೀಧರರ ಪರವಾಗಿ ಸಾಕಷ್ಟು ಕೆಲಸ ಮಾಡಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಏನು ಮಾಡಿವೆ ಎಂಬುದನ್ನು ಹೇಳಲಿ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಸತ್ಯನಾರಾಯಣ ಅವರು ಅಭಿವೃದ್ಧಿ ಕೆಲಸ ಮಾಡಿದ್ದು, ಗೆಲ್ಲುವ ವಿಶ್ವಾಸವಿದೆ. ಆರ್‌.ಆರ್‌.ನಗರದ ಬಗ್ಗೆ ಗೊತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಶಾಸಕ ಬಸವನಗೌಡ ಪಾಟೀಲ ಯತ್ನಾಳ್‌ ಮಾತನಾಡಲು ಬಿಜೆಪಿ ಹೈಕಮಾಂಡ್‌ ಕುಮ್ಮಕ್ಕು ನೀಡಿದೆ. ಇಲ್ಲವಾದರೆ ಈ ಹೊತ್ತಿಗೆ ಅವರು ಅಮಾನತು ಆಗಬೇಕಿತ್ತು. ಯಡಿಯೂರಪ್ಪ ಅವಧಿ ಪೂರ್ಣಗೊಳ್ಳುವ ಮೊದಲು ಅಥವಾ ನಂತರ ಮುಖ್ಯಮಂತ್ರಿಯಾಗುವುದಾಗಿ ಯತ್ನಾಳ್‌ ಹೇಳಿಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.