ADVERTISEMENT

ಚಿತ್ರದುರ್ಗ: ಆಕರ್ಷಣೆ ಕಳೆದುಕೊಳ್ಳುತ್ತಿವೆ ಇಂದಿರಾ ಕ್ಯಾಂಟೀನ್‌

ಎರಡು ಕೇಂದ್ರಕ್ಕೆ ಒಂದೇ ಅಡುಗೆ ಮನೆ; ಇದ್ದೂ ಇಲ್ಲದಂತಾಗಿವೆ ಅತ್ಯಾಧುನಿಕ ಅಡುಗೆ ಪರಿಕರ; ಕಸದ ತೊಟ್ಟಿಯಾದ ಊಟದ ಸ್ಥಳ

ಕೆ.ಪಿ.ಓಂಕಾರಮೂರ್ತಿ
Published 2 ಡಿಸೆಂಬರ್ 2024, 6:58 IST
Last Updated 2 ಡಿಸೆಂಬರ್ 2024, 6:58 IST
ಚಿತ್ರದುರ್ಗದ ಪ್ರವಾಸಿ ಮಂದಿರ ಆವರಣದ ಇಂದಿರಾ ಕ್ಯಾಂಟೀನ್‌ನ ಅಡುಗೆ ಮನೆಯಲ್ಲಿ ಅತ್ಯಾಧುನಿಕ ಅಡುಗೆ ಪರಿಕರಗಳು ಬಳಕೆಯಾಗದೇ ಇರುವುದು  ಪ್ರಜಾವಾಣಿ ಚಿತ್ರ: ವಿ.ಚಂದ್ರಪ್ಪ 
ಚಿತ್ರದುರ್ಗದ ಪ್ರವಾಸಿ ಮಂದಿರ ಆವರಣದ ಇಂದಿರಾ ಕ್ಯಾಂಟೀನ್‌ನ ಅಡುಗೆ ಮನೆಯಲ್ಲಿ ಅತ್ಯಾಧುನಿಕ ಅಡುಗೆ ಪರಿಕರಗಳು ಬಳಕೆಯಾಗದೇ ಇರುವುದು  ಪ್ರಜಾವಾಣಿ ಚಿತ್ರ: ವಿ.ಚಂದ್ರಪ್ಪ    

ಚಿತ್ರದುರ್ಗ: ‘ಹಸಿವು ಮುಕ್ತ ಕರ್ನಾಟಕ’ ಘೋಷವಾಕ್ಯದಡಿ 2018ರಲ್ಲಿ ಜಿಲ್ಲೆಯಲ್ಲಿ ಪ್ರಾರಂಭವಾದ ‘ಇಂದಿರಾ ಕ್ಯಾಂಟೀನ್‌’ಗಳು ಅಧೋಗತಿಗೆ ತಲುಪಿವೆ. ಈ ಕ್ಯಾಂಟೀನ್‌‌ಗಳಲ್ಲಿ ಸ್ವಚ್ಛತೆ, ರುಚಿ ಹಾಗೂ ನಿರ್ವಹಣೆ ಮರೆಯಾಗಿವೆ. 

ಚಿತ್ರದುರ್ಗದ ಪ್ರವಾಸಿ ಮಂದಿರ ಹಾಗೂ ಯೂನಿಯನ್‌ ಉದ್ಯಾನದಲ್ಲಿ ಕ್ಯಾಂಟೀನ್‌ಗಳಿವೆ. 2018ರ ಮಾರ್ಚ್‌ 8ರ ವಿಶ್ವ ಮಹಿಳಾ ದಿನಾಚರಣೆಯಂದು ಪ್ರವಾಸಿ ಮಂದಿರ, ಮಾರ್ಚ್‌ 24ರಂದು ತೀವ್ರ ಗೊಂದಲ, ವಾಗ್ವಾದದ ನಡುವೆಯೇ ಯೂನಿಯನ್‌ ಉದ್ಯಾನದ ಕ್ಯಾಂಟೀನ್‌ಗಳು ಉದ್ಘಾಟನೆಗೊಂಡಿದ್ದವು.

ಅಡುಗೆ ತಯಾರಿಕೆಗೆ ಬಳಸಬೇಕಿದ್ದ ಆತ್ಯಾಧುನಿಕ ಪರಿಕರಗಳು ಈಗ ಮೂಲೆ ಸೇರಿವೆ. ಕ್ಯಾಂಟೀನ್‌ನ ಸಿಬ್ಬಂದಿ ಗ್ಲೌಸ್, ಮಾಸ್ಕ್, ಸಮವಸ್ತ್ರ ಮರೆತಿದ್ದಾರೆ. ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ ಇಲ್ಲವಾಗಿದೆ. ಇಡೀ ಆವರಣ ಕಸದ ತೊಟ್ಟಿಯಾಗಿ ಬದಲಾಗಿದೆ.

ADVERTISEMENT

ಯೂನಿಯನ್‌ ಉದ್ಯಾನದ ಕ್ಯಾಂಟೀನ್‌ನಲ್ಲಿ ಅಡುಗೆ ತಯಾರಿ ಸ್ಥಗಿತಗೊಳಿಸಿ ವರ್ಷಗಳೇ ಕಳೆದಿವೆ. ಅಡುಗೆ ಮನೆಯು ಇಲಿ, ಹೆಗ್ಗಣಗಳ ತಾಣವಾಗಿದೆ. ನೀರೆತ್ತುವ ಮೋಟಾರ್‌ ಪಂಪ್‌ ಹಾಳಾಗಿದೆ. ಇಡೀ ವಾತಾವರಣದಲ್ಲಿ ಶುಚಿತ್ವ ಮಾಯವಾಗಿದ್ದು,  ಮೆಲ್ನೋಟಕ್ಕೆ ಕ್ಯಾಂಟೀನ್‌ ಮುಚ್ಚಿ ಹೋಗಿರುವಂತೆ ಭಾಸವಾಗುತ್ತಿದೆ.

‘ಅತ್ಯಾಧುನಿಕ ಅಡುಗೆ ಪರಿಕರಗಳಿಗೆ ಈವರೆಗೂ ಪೈಪ್ಡ್‌ ಗ್ಯಾಸ್‌ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ಅವು ಇದ್ದೂ ಇಲ್ಲದಂತಾಗಿವೆ. ಅವುಗಳ ಬದಲಿಗೆ, 20 ಕೆ.ಜಿ. ಅನ್ನ ಸಿದ್ಧಗೊಳಿಸುವಷ್ಟು ಸಾಮರ್ಥ್ಯದ ಎರಡು ಪಾತ್ರೆ, ಚಿಕ್ಕದೊಂದು ಇಡ್ಲಿ ಪಾತ್ರೆ, ಎರಡು ಗ್ಯಾಸ್‌ ಒಲೆ, ಒಂದು ಸಿಲಿಂಡರ್‌ ಇಟ್ಟುಕೊಂಡು ಅಡುಗೆ ಸಿದ್ಧಗೊಳಿಸಲಾಗುತ್ತಿದೆ’ ಎನ್ನುತ್ತಾರೆ ಪ್ರವಾಸಿ ಮಂದಿರ ಆವರಣದ ಕ್ಯಾಂಟೀನ್‌ ಸಿಬ್ಬಂದಿ.

‘ಪ್ರತಿ ಕ್ಯಾಂಟೀನ್‌ನಲ್ಲಿ ನಿತ್ಯ 400 ರಿಂದ 500 ಜನ ತಿಂಡಿ, ಊಟ ಮಾಡುತ್ತಿದ್ದಾರೆ. ಗುತ್ತಿಗೆ ತೆಗೆದುಕೊಂಡಿರುವ ಸಂಸ್ಥೆಯು ಪ್ರವಾಸಿ ಮಂದಿರದ ಕ್ಯಾಂಟೀನ್‌ನಲ್ಲಿ ಅಡುಗೆ ಸಿದ್ಧಗೊಳಿಸಿ ಯೂನಿಯನ್‌ ಉದ್ಯಾನದ ಕ್ಯಾಂಟೀನ್‌ಗೂ ಪೂರೈಸುತ್ತಿದೆ’ ಎನ್ನುತ್ತಾರೆ ಸಿಬ್ಬಂದಿ.

ಸರ್ಕಾರವು ಗ್ರಾಹಕರಿಗೆ ತಿಂಡಿಗೆ ₹5 (ಬೆಳಿಗ್ಗೆ), ಊಟಕ್ಕೆ (ಮಧ್ಯಾಹ್ನ ಹಾಗೂ ರಾತ್ರಿ) ₹ 10 ದರ ನಿಗದಿಪಡಿಸಿದೆ. ಏಜೆನ್ಸಿಯವರು ಗುತ್ತಿಗೆ ಪಡೆದು ಆಹಾರ ಪೂರೈಸುತ್ತಾರೆ. ಆಟೊದವರು, ವ್ಯಾಪಾರಿಗಳು, ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು, ಪೌರಕಾರ್ಮಿಕರು, ಇಂದಿರಾ ಕ್ಯಾಂಟೀನ್‌ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.

‘ನಿತ್ಯ ಬೆಳಿಗ್ಗೆ 7.30ರಿಂದ ಉಪಾಹಾರ, ಮಧ್ಯಾಹ್ನ 12ಕ್ಕೆ ಊಟ ಹಾಗೂ ರಾತ್ರಿ 7ರಿಂದ ಊಟ ನೀಡಲಾಗುತ್ತದೆ. ಉಪಾಹಾರಕ್ಕೆ ಇಡ್ಲಿ, ಚಟ್ನಿ, ಪುಳಿಯೊಗರೆ, ಪೊಂಗಲ್‌, ತರಕಾರಿ ಪಲಾವ್‌, ಖಾರಾ ಬಾತ್‌, ಚಿತ್ರಾನ್ನ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಅನ್ನ, ಸಾಂಬಾರ್‌, ಮುದ್ದೆ, ಮೊಸರನ್ನ ಒಳಗೊಂಡ ‘ಮೆನು’ವನ್ನು ಕ್ಯಾಂಟೀನ್‌ನಲ್ಲಿ ಹಾಕಲಾಗಿದೆ. ಆದರೆ ದಿನವೂ ಚಿತ್ರಾನ್ನ, ಚಟ್ನಿ, ಅನ್ನ ಸಾಂಬಾರ್‌ ಮಾಮೂಲಿಯಾಗಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳು.

ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟಕ್ಕೆ ಮಾತ್ರ ಹೆಚ್ಚು ಬೇಡಿಕೆ ಇದೆ. ರಾತ್ರಿ ನಿಗದಿಗಿಂತ ಕಡಿಮೆ ಗ್ರಾಹಕರು ಊಟ ಮಾಡುತ್ತಾರೆ. ಸ್ವಚ್ಛತೆಯಿಲ್ಲದ ಕಾರಣ ಕ್ಯಾಂಟೀನ್‌ ತನ್ನ ಆಕರ್ಷಣೆ ಕಳೆದುಕೊಳ್ಳುತ್ತಿದೆ.

ಜಿಲ್ಲಾಧಿಕಾರಿ ಖುದ್ದು ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕರಿಗೆ ಒದಗಿಸುವ ಆಹಾರದ ಗುಣಮಟ್ಟ, ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸೂಚನೆ ನೀಡುವುದು ಸಾಮಾನ್ಯವಾಗಿದೆ. ಆದರೆ ಬದಲಾವಣೆ ಮಾತ್ರ ಕಾಣುತ್ತಿಲ್ಲ.

ಪ್ರವಾಸಿ ಮಂದಿರದ ಕ್ಯಾಂಟೀನ್‌ನಲ್ಲಿ ಕ್ಯಾನ್‌ ನೀರು ಕುಡಿಯುತ್ತಿರುವ ವಿದ್ಯಾರ್ಥಿಗಳು
ಚಿತ್ರಚದುರ್ಗ ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರದ ಗುಣಮಟ್ಟ ಸ್ವಚ್ಛತೆ ಮೂಲಸೌಲಭ್ಯದ ಬಗ್ಗೆ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಕ್ರಮ ವಹಿಸಿ ಸಮಸ್ಯೆ ಬಗೆಹರಿಸಲಾಗುತ್ತದೆ
ಬಿ.ಎನ್‌.ಸುಮಿತಾ ಅಧ್ಯಕ್ಷೆ ನಗರಸಭೆ
ಕ್ಯಾಂಟೀನ್‌ನಲ್ಲಿ ಶುದ್ಧ ಕುಡಿಯುವ ನೀರಿಲ್ಲ. ಇತ್ತೀಚಿಗೆ ಉಪಾಹಾರ ಊಟ ಬೇಗ ಖಾಲಿಯಾಗುತ್ತಿದೆ. ಕಡಿಮೆ ದರಕ್ಕೆ ನೀಡುತ್ತಾರೆ ಎಂದು ನಾವು ಯಾವುದನ್ನೂ ಪ್ರಶ್ನಿಸುವುದಿಲ್ಲ
ಲೋಕೇಶ್‌ ಗ್ರಾಹಕ ಚಿತ್ರದುರ್ಗ
6 ತಿಂಗಳಿಂದ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಸ್ಥಗಿತವಾಗಿದ್ದು ಕಡಿಮೆ ಹಣದಲ್ಲಿ ಹಸಿವು ನೀಗಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಸಾವಿರಾರು ಬಡವರು ಕೂಲಿಕಾರ್ಮಿಕರ ಆಸೆಗೆ ತಣ್ಣೀರು ಎರಚಿದಂತಾಗಿದೆ
ಎನ್‌.ಸಿ.ತಿಪ್ಪೇಸ್ವಾಮಿ ಉಪಾಧ್ಯಕ್ಷ ಕಟ್ಟಡ ಕಾರ್ಮಿಕರ ಸಂಘ ನಾಯಕನಹಟ್ಟಿ
ಸ್ಥಳಿಯ ಪ್ರಭಾವಿ ವ್ಯಕ್ತಿಗಳು ಇಂದಿರಾ ಕ್ಯಾಂಟೀನ್‌ ಮುಂದೆ ಗೂಡಂಗಂಡಿಗಳನ್ನು ತೆರೆದಿದ್ದಾರೆ. ಅಕ್ರಮವಾಗಿ ತಲೆ ಎತ್ತಿರುವ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ
ಬಿ.ಟಿ.ಪ್ರಕಾಶ್‌ ಅಧ್ಯಕ್ಷರು ರಾಷ್ಟ್ರೀಯ ಕಿಸಾನ್ ಸಂಘ ನಾಯಕನಹಟ್ಟಿ
8 ಮಂಜೂರು 6 ಕಾರ್ಯಾರಂಭ
ಜಿಲ್ಲೆಗೆ ಮಂಜೂರಾಗಿದ್ದ ಎಂಟು ‘ಇಂದಿರಾ ಕ್ಯಾಂಟೀನ್‌’ಗಳಲ್ಲಿ ಆರು ಕಾರ್ಯಾರಂಭವಾಗಿವೆ. ಮೊಳಕಾಲ್ಮುರು ಹಾಗೂ ನಾಯಕನಹಟ್ಟಿಯಲ್ಲಿ ಕ್ಯಾಂಟೀನ್‌ ಆರಂಭ ವಿಳಂಬವಾಗುತ್ತಿದೆ. ಹೊಸದುರ್ಗ ಹೊಳಲ್ಕೆರೆ ಚಳ್ಳಕೆರೆ ಹಿರಿಯೂರಿನಲ್ಲಿ ತಲಾ ಒಂದು ಹಾಗೂ ಚಿತ್ರದುರ್ಗದಲ್ಲಿ ಎರಡು ಕ್ಯಾಂಟೀನ್‌ಗಳಿವೆ.  ಹೊಳಲ್ಕೆರೆಯಲ್ಲಿ ಕ್ಯಾಂಟೀನ್‌ ನಿರ್ವಹಣೆ ಸರಿ ಇಲ್ಲ. ಆದ್ದರಿಂದ ಪ್ರತಿಭಟನೆ ಸಾಮಾನ್ಯವಾಗಿವೆ. ಆದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಇನ್ನೂ ಚಿತ್ರದುರ್ಗದ ಯೂನಿಯನ್‌ ಪಾರ್ಕ್‌ನ ಕ್ಯಾಂಟೀನ್‌ನ ಸ್ಥಳಾಂತರದ ಕೂಗು ಪ್ರಾರಂಭದಿಂದಲೂ ಕೇಳಿ ಬರುತ್ತಿದೆ.
ಐದು ತಿಂಗಳಿಂದ ಬಾರದ ವೇತನ
ಪ್ರವಾಸಿ ಮಂದಿರದ ಆವರಣದ ಕ್ಯಾಂಟೀನ್‌ನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ 5 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂಬ ದೂರು ಕೇಳಿಬಂದಿದೆ. ‘ಕಳೆದ ಮೂರು ವರ್ಷದಿಂದ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ. ಇದೇ ಸಂಬಳ ನಂಬಿದ್ದೇವೆ. ಆದರೆ ಐದು ತಿಂಗಳಿಂದ ಒಂದು ರೂಪಾಯಿ ನೋಡಿಲ್ಲ. ಸಂಬಳ ಕೊಟ್ಟರೆ ಸಾಕು ಕೆಲಸ ಬಿಟ್ಟು ಹಳ್ಳಿಯಲ್ಲಿ ಕೂಲಿ ಮಾಡಿಕೊಂಡು ಜೀವನ ಮಾಡುತ್ತೇವೆ’ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
‘ಮೆನು’ ಪ್ರಕಾರ ಇಲ್ಲ ಉಪಾಹಾರ ಸುವರ್ಣಾ ಬಸವರಾಜ್‌
ಹಿರಿಯೂರು: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 2019ರಲ್ಲಿ ಆರಂಭಗೊಂಡಿದ್ದ ಇಂದಿರಾ ಕ್ಯಾಂಟೀನ್‌ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅನುದಾನದ ಕೊರತೆಯಿಂದ ಕೆಲವು ದಿನ ಬಂದ್ ಆಗಿತ್ತು. ನಗರಸಭೆ ಪೌರಕಾರ್ಮಿಕರಿಗೆ ಕೆಲವು ತಿಂಗಳು ಇಲ್ಲೇ ಉಪಾಹಾರ ಒದಗಿಸಲಾಗುತ್ತಿತ್ತು. ಉಪಾಹಾರದ ಗುಣಮಟ್ಟದ ಕೊರತೆ ಕಾರಣಕ್ಕೆ ನಗರಸಭೆಯವರು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕ್ಯಾಂಟೀನ್‌ ಒಳಗೆ ಸ್ವಚ್ಛತೆ ಇಲ್ಲವಾಗಿದೆ. ಆ ಕಾರಣಕ್ಕೆ ಬಹಳಷ್ಟು ಜನ ಅಲ್ಲಿಂದ ಬೇರೆಡೆಗೆ ತೆಗೆದುಕೊಂಡು ಹೋಗಿ ಊಟ–ತಿಂಡಿ ಮಾಡುತ್ತಿದ್ದಾರೆ. 8 ಗಂಟೆಗೇ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಈ ಕ್ಯಾಂಟೀನ್‌ ಅನ್ನು ಅವಲಂಬಿಸಿದ್ದಾರೆ. ಆದರೆ ಗುಣಮಟ್ಟ ರುಚಿ ಇಲ್ಲದ ಕಾರಣ ಅವರ ಸಂಖ್ಯೆಯೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ‘ಮೆನು ಪ್ರಕಾರ ಉಪಾಹಾರ ಒದಗಿಸಬೇಕೆಂಬ ನಿಯಮ ಪಾಲಿಸುವುದು ಕಷ್ಟ. ಬಿಸಿಬೇಳೆ ಬಾತ್ ಪೊಂಗಲ್ ತಯಾರಿಸಿದ ದಿನ ಅವು ಖಾಲಿಯಾಗುವುದೇ ಇಲ್ಲ’ ಎನ್ನುತ್ತಾರೆ ಇಂದಿರಾ ಕ್ಯಾಂಟೀನ್‌ ಸಿಬ್ಬಂದಿ ಕಿರಣ್‌.
ಸಾರ್ವಜನಿಕ ಶೌಚಾಲಯವಾದ ಕ್ಯಾಂಟೀನ್ ವಿ.ಧನಂಜಯ
ನಾಯಕನಹಟ್ಟಿ: ಕಡಿಮೆ ಹಣದಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಸ್ಥಗಿತವಾದ ಪರಿಣಾಮ ಅದು ಸಾರ್ವಜನಿಕ ಶೌಚಾಲಯವಾಗಿ ಮಾರ್ಪಾಡಾಗಿದೆ. ಜಿಲ್ಲೆಯ ಮಟ್ಟಿಗೆ ನಾಯಕನಹಟ್ಟಿಯು ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರವಾಗಿದೆ. ನಿತ್ಯವೂ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಯಾತ್ರಾರ್ಥಿಗಳು ಪ್ರವಾಸಿಗರು ಭೇಟಿ ನೀಡುತ್ತಾರೆ. ಹಾಗೇ ಪಟ್ಟಣವು ಸುತ್ತಮುತ್ತಲ 48 ಹಳ್ಳಿಗಳಿಗೆ ಕೇಂದ್ರಸ್ಥಾನವಾಗಿದೆ. ಸಾರ್ವಜನಿಕರು ರೈತರು ಶಾಲಾ ಕಾಲೇಜು ವಿದ್ಯಾರ್ಥಿಗಳ ದಟ್ಟಣೆಯೂ ಹೆಚ್ಚಿರುತ್ತದೆ. ತೇರು ಬೀದಿ ಪಾದಗಟ್ಟೆ ರಾಜ್ಯ ಹೆದ್ದಾರಿ-45 ವಾಲ್ಮೀಕಿ ವೃತ್ತ ಪಟ್ಟಣ ಪಂಚಾಯಿತಿ ಬಸ್ ನಿಲ್ದಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆಯ ಪ್ರವೇಶ ಮಾರ್ಗದಲ್ಲಿದ್ದ ಸರ್ಕಾರಿ ಜಾಗದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಲಾಗುತ್ತಿದೆ. ಒಳಾಂಗಣ ಮತ್ತು ಹೊರಾಂಗಣಕ್ಕೆ ಅಂತಿಮ ಸ್ಪರ್ಶ ನೀಡುವ ಕೆಲಸ ಬಾಕಿ ಇದೆ. ಅಡುಗೆ ತಯಾರಿಕೆಯ ಸಾಮಗ್ರಿ ಇನ್ನೂ ಬಂದಿಲ್ಲ. ಈ ಮಧ್ಯೆ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತವಾದ ಹಿನ್ನೆಲೆಯಲ್ಲಿ ಕಟ್ಟಡವು ಸಾರ್ವಜನಿಕ ಶೌಚಕ್ಕೆ ಬಳಕೆಯಾಗುತ್ತಿದೆ. ಸದ್ಯದ ಸ್ಥಿತಿ ಗಮನಿಸಿದರೆ ಕ್ಯಾಂಟೀನ್ ಕಾಮಗಾರಿ ಆರಂಭವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಇನ್ನೂ ಕೆಲ ತಿಂಗಳವರೆಗೆ ಕ್ಯಾಂಟೀನ್ ಸೌಲಭ್ಯ ಮರೀಚಿಕೆಯಾಗಿದೆ.
ಎದುರಾಗಿದೆ ಸಿಬ್ಬಂದಿ ಕೊರತೆ ಶಿವಗಂಗಾ ಚಿತ್ತಯ್ಯ
ಚಳ್ಳಕೆರೆ: ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗದ ಇಂದಿರಾ ಕ್ಯಾಂಟೀನ್ ಹಲವು ಸಮಸ್ಯೆಗಳಿಗೆ ಸಿಲುಕಿದೆ. ಹೀಗಾಗಿ ನೂರಾರು ನಿರಾಶ್ರಿತರು ಆಟೊ ಚಾಲಕರು ಆತಂಕಕ್ಕೊಳಗಾಗಿದ್ದಾರೆ. ಅಡುಗೆ ತಯಾರಕರಿಗೆ ಮತ್ತು ಸ್ವಚ್ಛತಾ ಸಿಬ್ಬಂದಿಗೆ ವೇತನ ಪಾವತಿ ವಿಳಂಬವಾಗುತ್ತಿರುವುದೇ ಎಲ್ಲದಕ್ಕೂ ಕಾರಣ ಎನ್ನಲಾಗಿದೆ.  ನಿತ್ಯ ಬೆಳಿಗ್ಗೆ ಮಧ್ಯಾಹ್ನ ಹಾಗೂ ಸಂಜೆ ಅಡುಗೆ ತಯಾರಿಕೆ ಮತ್ತು ಸ್ವಚ್ಛತೆಗೆ 5 ರಿಂದ 6 ಸಿಬ್ಬಂದಿಯ ಅವಶ್ಯಕತೆಯಿದೆ. ಆದರೆ ಕೇವಲ ಮೂರು ಜನ ಎಲ್ಲ ಕೆಲಸವನ್ನೂ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆ ಕಾರಣಕ್ಕೆ ತಿಂಗಳಲ್ಲಿ 15 ರಿಂದ 20 ದಿನ ಬಾಗಿಲು ಮುಚ್ಚಲಾಗುತ್ತಿದೆ. ‘ದೊಡ್ಡ ಹೋಟೆಲ್‍ಗೆ ಹೋಗಿ ಊಟ ಮಾಡುವಷ್ಟು ಹಣ ನಮ್ಮ ಬಳಿ ಇಲ್ಲ. ಹಾಗಾಗಿ ನಿತ್ಯ ತಿಂಡಿ-ಊಟಕ್ಕೆ ತೀವ್ರ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಜನತಾ ಕಾಲೊನಿಯ ನಿರಾಶ್ರಿತ ಗೋವಿಂದಪ್ಪ. ‘ವಿದ್ಯಾರ್ಥಿಗಳಿಗೆ ಮತ್ತು ನಿರಾಶ್ರಿತರಿಗೆ ಕ್ಯಾಂಟೀನ್‌ನಿಂದ ಅನುಕೂಲವಾಗಿದೆ. ನಿರ್ವಹಣೆಗೆ ಹೆಚ್ಚು ಗಮನಹರಿಸಬೇಕು’ ಎಂಬುದು ರೈತ ಮುಖಂಡ ಕೆ.ಪಿ.ಭೂತಯ್ಯ ಅವರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.