ADVERTISEMENT

ಭೂ ಕಬಳಿಕೆ ಆರೋಪ ಸಾಬೀತಾದರೆ ನಿವೃತ್ತಿ: ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 23:40 IST
Last Updated 20 ಡಿಸೆಂಬರ್ 2025, 23:40 IST
<div class="paragraphs"><p>ಎಂ.ಚಂದ್ರಪ್ಪ</p></div>

ಎಂ.ಚಂದ್ರಪ್ಪ

   

ಚಿತ್ರದುರ್ಗ: ‘ಹೊಳಲ್ಕೆರೆ ತಾಲ್ಲೂಕು ಹಿರೇಕಂದವಾಡಿ ಗ್ರಾಮದಲ್ಲಿ ದಲಿತರಿಗೆ ಮಂಜೂರಾಗಿದ್ದ ಭೂಮಿಯನ್ನು ನಾವು ಖರೀದಿ ಮಾಡಿಲ್ಲ. ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ ಅವರ ಆರೋಪಗಳಲ್ಲಿ ಹುರುಳಿಲ್ಲ. ನಾನು ಮತ್ತು ಕುಟುಂಬದ ಸದಸ್ಯರು ಒಂದು ಇಂಚು ಭೂಮಿ ಕಬಳಿಸಿರುವುದನ್ನು ಅವರು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಶಾಸಕ ಎಂ.ಚಂದ್ರಪ್ಪ ಸವಾಲು ಹಾಕಿದರು.

‘ಆಂಜನೇಯ ಆರೋಪಿಸಿರುವಂತೆ ಸರ್ವೆ ನಂಬರ್‌ 98ರಲ್ಲಿ ಯಾವ ಭೂಮಿಯನ್ನೂ ಖರೀದಿಸಿಲ್ಲ. 91/1ಬಿ2 ಸರ್ವೆ ನಂಬರ್‌ನ 12 ಎಕರೆ ಜಮೀನನ್ನು ನನ್ನ ಮಗ ಎಂ.ಸಿ.ದೀಪ್‌ಚಂದನ್‌ ಹೆಸರಿನಲ್ಲಿ ಶುದ್ಧ ಕ್ರಯಕ್ಕೆ ಪಡೆಯಲಾಗಿದೆ. ಇದು ಪಿಟಿಸಿಎಲ್‌ ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೂ ಸುಳ್ಳು ಆರೋಪ ಮಾಡಿರುವುದು ಖಂಡನೀಯ’ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಜಮೀನು ಖರೀದಿ ಸಂಬಂಧ 1910ರಿಂದಲೂ ಕೈ ಬದಲಾವಣೆಯಾದ ಮಾಲೀಕರ ವಿವರ ನಮ್ಮ ಬಳಿ ಇದೆ. ಐ.ಜಿ.ವೆಂಕಟೇಶ್‌ ಎಂಬುವವರಿಂದ ನಾವು 2021ರಲ್ಲಿ ಖರೀದಿ ಮಾಡಿದ್ದೇವೆ. ವೆಂಕಟೇಶ್‌ ಅವರು 2007ರಲ್ಲಿ ಆರ್‌.ಜಿ.ಬಸಪ್ಪ ಎಂಬುವವರಿಂದ ಖರೀದಿ ಮಾಡಿದ್ದರು. ಬೇರೊಬ್ಬ ವ್ಯಕ್ತಿಯ ಹೆಸರಿನಲ್ಲಿ ಮೊದಲು ಖರೀದಿಸಿ ನಂತರ ಮಗನ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ ಎಂಬ ಆರೋಪ ಶುದ್ಧ ಸುಳ್ಳು’ ಎಂದರು.

‘ಗುಡ್ಡದ ಜಾಗದಲ್ಲಿ ಗಣಿಗಾರಿಕೆ ಮಾಡಿದ್ದಾರೆ, ಮಣ್ಣು ತೆಗೆದಿದ್ದಾರೆ ಎಂದೆಲ್ಲಾ ಆಂಜನೇಯ ಆರೋಪಿಸಿ ದ್ದಾರೆ. ಅದನ್ನು ಸಾಬೀತು ಮಾಡಿದರೆ ಈಗಲೇ ರಾಜೀನಾಮೆ ನೀಡುತ್ತೇನೆ. ನಮ್ಮ ಒಡೆತನದ ಭೂಮಿಯಲ್ಲಿ ನೀರಿಗಾಗಿ ತೊಟ್ಟಿ ಕಟ್ಟಿದ್ದೇವೆ. ಕಾರ್ಮಿಕರಿಗಾಗಿ ಮನೆ ನಿರ್ಮಿಸಿದ್ದೇವೆ, ಅದು ತಪ್ಪಾ? ಪೂರ್ವಪರ ಪರಿಶೀಲಿಸದೇ, ಸಂಬಂಧವೇ ಇಲ್ಲದ ಸರ್ವೆ ನಂಬರ್‌ ತಂದು ಭೂಮಿ ಕಬಳಿಸಿರುವುದಾಗಿ ಆರೋಪಿಸಿದ್ದಾರೆ’ ಎಂದು ದೂರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.