
ಹಿರಿಯೂರು: ಬೇರೆ ಬೇರೆ ಕಾರಣಗಳಿಂದ ಸ್ಥಗಿತಗೊಂಡಿದ್ದ ತಾಲ್ಲೂಕಿನ ಯಲ್ಲದಕೆರೆ ಗ್ರಾಮದ ಹಾಲಿನ ಡೇರಿಯನ್ನು ಗುರುವಾರ ಕೆಎಂಎಫ್‌ನಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿಮುಲ್ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಮರಳಿ ಕಾರ್ಯಾರಂಭ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು.
‘ಹಾಲು ಸಂಗ್ರಹಣ ಕೇಂದ್ರ ಮಂಜೂರು ಮಾಡುವಂತೆ ರೈತರು ದುಂಬಾಲು ಬೀಳುತ್ತಿದ್ದಾರೆ. ಹೈನುಗಾರಿಕೆ ಇಂದು ಕುಟುಂಬಕ್ಕೆ ಹೆಚ್ಚಿನ ಆದಾಯ ತಂದುಕೊಡುವ ನೆಚ್ಚಿನ ಉದ್ಯೋಗವಾಗಿದೆ. ಕೃಷಿಗೂ ಇದರಿಂದ ಲಾಭವಾಗುತ್ತದೆ. ಡೇರಿಯನ್ನು ಮರಳಿ ಆರಂಭಿಸಿದ ದಿನವೇ 150 ಲೀಟರ್ ಹಾಲು ಸಂಗ್ರಹವಾಗಿದೆ. ಈ ಹಿಂದೆ ಕೇಂದ್ರ ಏಕೆ ನಿಂತು ಹೋಯಿತು ಎಂದು ಕೆದಕುತ್ತ ಕೂರುವುದು ಬೇಡ. ಸಹಕಾರ ತತ್ವದಡಿ ರೈತರು ಸಂಘಟಿತರಾಗಿ ಸಂಘವನ್ನು ಬೆಳೆಸಬೇಕು. ಜೊತೆಗೆ ತಾವೂ ಬೆಳೆಯಬೇಕು’ ಎಂದು ಮನವಿ ಮಾಡಿದರು.
‘ಡೇರಿಗೆ ನೀಡುವ ಹಾಲು ಗುಣಮಟ್ಟದಿಂದ ಕೂಡಿದ್ದರೆ, ಉತ್ಪಾದಕರಿಗೆ ಉತ್ತಮ ಬೆಲೆ ಸಿಗುತ್ತದೆ. ತಾಲ್ಲೂಕಿನಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿವೆ. ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ಆ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಕೊಡಬೇಡಿ. ಶಿಮುಲ್‌ನಿಂದ ಎಲ್ಲ ರೀತಿಯ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.
ಚಳ್ಳಕೆರೆ ಉಪ ವಿಭಾಗಾಧಿಕಾರಿ ಎಂ. ಪುಟ್ಟರಾಜು, ಮಾರ್ಗ ವಿಸ್ತರಣಾಧಿಕಾರಿ ಕೃಷ್ಣಕುಮಾರ್, ಯಲ್ಲದಕರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷೆ ಲಕ್ಷ್ಮೀದೇವಿ, ನಿರ್ದೇಶಕರಾದ ತಿಪ್ಪೇಸ್ವಾಮಿ, ಕೃಷ್ಣಮೂರ್ತಿ, ಲಲಿತಮ್ಮ, ಕರಿಯಪ್ಪ, ಚಂದ್ರಮ್ಮ, ರೇಣುಕಮ್ಮ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.