ADVERTISEMENT

ಅಸಮಾಧಾನ ಬಿಟ್ಟು ಪಕ್ಷ ಸಂಘಟಿಸಿ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 11:21 IST
Last Updated 6 ಫೆಬ್ರುವರಿ 2022, 11:21 IST
ನಾಯಕನಹಟ್ಟಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸಾರಿಗೆ ಸಚಿವ ಬಿ. ಶ್ರೀರಾಮುಲು ಬಿಜೆಪಿ ಕಾರ್ಯಕರ್ತರ ಕುಂದುಕೊರತೆ ಆಲಿಸಿದರು.
ನಾಯಕನಹಟ್ಟಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸಾರಿಗೆ ಸಚಿವ ಬಿ. ಶ್ರೀರಾಮುಲು ಬಿಜೆಪಿ ಕಾರ್ಯಕರ್ತರ ಕುಂದುಕೊರತೆ ಆಲಿಸಿದರು.   

ನಾಯಕನಹಟ್ಟಿ: ಪಕ್ಷದ ಕಾರ್ಯಕರ್ತರ ಎಲ್ಲ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು. ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ಬಿಟ್ಟು ಪಕ್ಷ ಸಂಘಟನೆಯ ಕಡೆಗೆ ಗಮನ ಹರಿಸಬೇಕು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಪಕ್ಷ ಸಂಘಟನೆ ಹಾಗೂ ವಿವಿಧ ಚುನಾವಣೆಗಳಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ಸುತ್ತಾಟ ಹಾಗೂ ಕಾರ್ಯಭಾರದ ಒತ್ತಡದಲ್ಲಿ ಕ್ಷೇತ್ರ ಹಾಗೂ ಕ್ಷೇತ್ರದ ಕಾರ್ಯಕರ್ತರಿಗೆ ಸಮಯವನ್ನು ಕೊಡಲು ಸಾಧ್ಯವಾಗಿಲ್ಲ. ಅದರ ಪರಿಣಾಮ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿ ಸೋಲಬೇಕಾಯಿತು ಎಂದರು.

ADVERTISEMENT

‘ಕಾಂಗ್ರೆಸ್‌ ಪಕ್ಷದ ಕೆಲವರು ಮುಂದಿನ ಚುನಾವಣೆಯಲ್ಲಿ ಶ್ರೀರಾಮುಲು ಕ್ಷೇತ್ರವನ್ನು ಬಿಟ್ಟು ಹೋಗುತ್ತಾರೆ. ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ ಎಲ್ಲಿಯೂ ಹೋಗದೇ ಮೊಳಕಾಲ್ಮುರು ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಕ್ಷೇತ್ರದಲ್ಲಿ ನಿರಂತರವಾಗಿ ಸುತ್ತಾಡಿ ಪಕ್ಷ ಸಂಘಟಿಸಿ ಕಾರ್ಯಕರ್ತರಿಗೆ ಬಲತುಂಬುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ಮುಖಂಡ ಎಂ.ವೈ.ಟಿ. ಸ್ವಾಮಿ ಮಾತನಾಡಿ, ‘ಕ್ಷೇತ್ರದಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರಿದ್ದಾರೆ. ಪಕ್ಷದ ಮುಖಂಡರು ಸಾಮಾನ್ಯ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿರುವ ಮೂಲ ಸೌಕರ್ಯಗಳ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

ಮಂಡಲ ಅಧ್ಯಕ್ಷ ಇ. ರಾಮರೆಡ್ಡಿ ಮಾತನಾಡಿ, ‘ಕ್ಷೇತ್ರದಲ್ಲಿ ಯಾವ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ಅದರಲ್ಲೂ ಚಳ್ಳಕೆರೆ ತಾಲ್ಲೂಕು ತಹಶೀಲ್ದಾರ್ ಕಾಂಗ್ರೆಸ್ ಎಜೆಂಟರಂತೆ ವರ್ತಿಸುತ್ತಿದ್ದಾರೆ’ ಎಂದು ದೂರಿದರು.

‘ಕ್ಷೇತ್ರಕ್ಕೆ ಯಾವುದೇ ಅನುದಾನಗಳು ಬಂದರೂ ಸಚಿವರು ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.
ನಾಯಕನಹಟ್ಟಿ ಮತ್ತು ತಳಕು ಹೋಬಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಕುಂದುಕೊರತೆಗಳು ಆಲಿಸುವವರೇ ಇಲ್ಲವಾಗಿದೆ. ಇದರಪರಿಣಾಮ ನಾಯಕನಹಟ್ಟಿ ಪಟ್ಟಣಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಅನುಭವಿಸಿತು. ಕಾರ್ಯಕರ್ತರನ್ನು ಕಡೆಗಣಿಸಿದ್ದೇ ಆದರೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸೋಲಬೇಕಾಗುತ್ತದೆ. ತಿಂಗಳಿಗೆ ಎರಡು ಬಾರಿಯಾದರೂ ಶಾಸಕರು ಕ್ಷೇತ್ರಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಬೇಕು’ ಎಂದು ಹಲವು ಕಾರ್ಯಕರ್ತರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.