ADVERTISEMENT

ಚಿತ್ರದುರ್ಗ: ಕೋಟೆಗೆ ಬರುವವರಿಗೆ ಚಿರತೆ ಭಯದ ಕಿರಿಕಿರಿ!

ಸ್ಮಾರಕಗಳ ಬಳಿ ದರ್ಶನ ನೀಡುತ್ತಿರುವ ಕಾಡುಪ್ರಾಣಿ; ಪ್ರವಾಸಿಗರ ಉತ್ಸಾಹಕ್ಕೆ ತಣ್ಣೀರು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:56 IST
Last Updated 10 ಡಿಸೆಂಬರ್ 2025, 4:56 IST
ಕಲ್ಲಿನ ಕೋಟೆಯ ಹೆಬ್ಬಂಡಿಯ ಮೇಲೆ ಚಿರತೆ ಕಾಣಿಸಿಕೊಂಡಿರುವುದು (ಸಂಗ್ರಹ ಚಿತ್ರ)
ಕಲ್ಲಿನ ಕೋಟೆಯ ಹೆಬ್ಬಂಡಿಯ ಮೇಲೆ ಚಿರತೆ ಕಾಣಿಸಿಕೊಂಡಿರುವುದು (ಸಂಗ್ರಹ ಚಿತ್ರ)   

ಚಿತ್ರದುರ್ಗ: ದುರ್ಗದ ಐತಿಹಾಸಿಕ ಕಲ್ಲಿನಕೋಟೆ ನೋಡಲು ರಾಜ್ಯ, ಹೊರರಾಜ್ಯಗಳಿಂದ ನಿತ್ಯ ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಕೋಟೆಯ ಆವರಣದಲ್ಲಿ ಪ್ರವಾಸಿಗರಿಗೆ ಚಿರತೆ ಭಯ ಕಾಡುತ್ತಿದ್ದು ಸ್ಮಾರಕಗಳ ವೀಕ್ಷಣೆಗೆ ಅಡ್ಡಿಯುಂಟಾಗಿದೆ.

ಕೋಟೆಯ ಆವರಣ ಪ್ರವೇಶಿಸುತ್ತಿದ್ದಂತೆ ಮುಖ್ಯ ದ್ವಾರದಲ್ಲಿಯೇ ವೀಕ್ಷಿಸಬಹುದಾದ 25 ತಾಣಗಳ ಪಟ್ಟಿ ನೀಡಲಾಗಿದೆ. ಪ್ರವಾಸಿಗರು ಎಲ್ಲಾ ಸ್ಮಾರಕಗಳ ವೀಕ್ಷಣೆಗೆ ಉತ್ಸಾಹ ತೋರಿಸುತ್ತಾರೆ. ಕಲ್ಲುಬಂಡೆ, ಬುರುಜು, ಬತ್ತೇರಿಗಳನ್ನು ಹತ್ತಿ ಸಾಹಸ ಮೆರೆಯುತ್ತಾರೆ. ಆದರೆ ಅಲ್ಲಿರುವ ಭದ್ರತಾ ಸಿಬ್ಬಂದಿ ‘ಚಿರತೆಯ ಭಯ’ ಕಾರಣ ನೀಡಿ ಪ್ರವಾಸಿಗರ ಉತ್ಸಾಹಕ್ಕೆ ತಣ್ಣೀರು ಎರಚುತ್ತಾರೆ. ಕೋಟೆಯ ಅಂಚಿನಲ್ಲಿರುವ ಕೆಲವು ಅಪರೂಪದ ಸ್ಮಾರಕಗಳ ಬಳಿ ತೆರಳದಂತೆ ಪ್ರವಾಸಿಗರನ್ನು ಭದ್ರತಾ ಸಿಬ್ಬಂದಿ ತಡೆಯುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಚಿರತೆಯ ಭಯ ತೀವ್ರಗೊಳ್ಳುತ್ತಿದ್ದು ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹಲವು ಕಡೆಗಳಲ್ಲಿ ಚಿರತೆ ಕಾಣಿಸಿಕೊಂಡು ಭಯ ಸೃಷ್ಟಿಸಿದೆ. ಕೋಟೆಯ ಅತೀ ಎತ್ತರದ ನೆಲ್ಲಿಕಾಯಿ ಸಿದ್ದಪ್ಪನ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ. ದೂರದ ಪ್ರದೇಶದಲ್ಲಿ ಮಾತ್ರವಲ್ಲದೇ ಸಾಹಸಿಗ ಜ್ಯೋತಿರಾಜ್‌ ಹತ್ತುವ ಬಂಡೆಯ ಹಿಂಬದಿಯಲ್ಲೂ ಈಚೆಗೆ ಚಿರತೆ ದರ್ಶನ ನೀಡಿತ್ತು.

ಕೋಟೆಯ ಪ್ರವೇಶದ್ವಾರದಿಂದ ಕೂಗಳತೆ ದೂರದಲ್ಲಿರುವ ಬನಶಂಕರಿ ದೇವಾಲಯದ ಬಳಿಯೂ ಚಿರತೆಯೊಂದು ನಾಯಿಯನ್ನು ಕಚ್ಚಿಕೊಂಡು ಓಡಿಹೋಗುವ ದೃಶ್ಯವನ್ನು ಕಂಡು ಪ್ರವಾಸಿಗರು ಭಯಭೀತರಾಗುತ್ತಿದ್ದರು. ಈ ಘಟನೆಗಳ ನಂತರ ಕೋಟೆ ಪ್ರವೇಶಿಸುವ ಪ್ರವಾಸಿಗರಿಗೆ ಭದ್ರತಾ ಸಿಬ್ಬಂದಿ ಹೆಜ್ಜೆಹಜ್ಜೆಗೂ ಚಿರತೆಯ ಎಚ್ಚರಿಕೆ ನೀಡುತ್ತಿದ್ದು ಅವರು ಭಯದಿಂದಲೇ ಸ್ಮಾರಕ ವೀಕ್ಷಿಸುವಂತಾಗಿದೆ.

ಕಲ್ಲಿನಕೋಟೆಯಿರುವ ಬೆಟ್ಟಗಳ ಸರಣಿ ಜೋಗಿಮಟ್ಟಿ ವನ್ಯಜೀವಿಧಾಮಕ್ಕೆ ಹೊಂದಿಕೊಂಡಂತಿದೆ. ಜೊತೆಗೆ ಕೋಟೆ ಆವರಣದಲ್ಲಿ ಗಿಡಗಂಟಿ, ಮರಗಿಡಗಳು ಹೆಚ್ಚಾಗಿ ಬೆಳೆದುಕೊಂಡಿವೆ. ಈ ಕಾರಣದಿಂದ ಕೋಟೆಯ ಆವರಣಕ್ಕೆ ಚಿರತೆಗಳು ಪ್ರವೇಶಿಸುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಜೊತೆಗೆ ಕೋಟೆಯೊಳಗೆ ಬೀದಿ ನಾಯಿಗಳ ಹಾವಳಿಯೂ ಹೆಚ್ಚುತ್ತಿದ್ದು ಅವುಗಳಿಗಾಗಿ ಚಿರತೆ ಬರುತ್ತವೆ ಎಂಬುದೂ ಅವರ ನಂಬಿಕೆ.

‘ಕೋಟೆಯೊಳಗೆ ಕೋತಿಗಳೂ ಇವೆ. ಯಾವುದೇ ದಿನ ಅಲ್ಲಿ ಕೋತಿಗಳು ಕಾಣಿಸುತ್ತಿಲ್ಲ ಎಂದಾದರೆ ಆ ದಿನ ಅಲ್ಲಿಗೆ ಚಿರತೆ ಬಂದಿದೆ ಎಂದೇ ಅರ್ಥ. ಅಂತಹ ಸಂದರ್ಭದಲ್ಲಿ ನಾವು ಪ್ರವಾಸಿಗರಿಗೆ ಎಚ್ಚರಿಕೆ ನೀಡುತ್ತೇವೆ. ಹಿಂದೆ ಇಲ್ಲಿ ಕರಡಿಗಳು ಕಾಣಿಸಿಕೊಳ್ಳುತ್ತಿದ್ದವು, ಈಗ ಚಿರತೆಗಳು  ಬರುತ್ತಿವೆ. ಕೋಟೆಯ ಆವರಣ ಭಯಮುಕ್ತವಾಗುವ ರೀತಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಕೋಟೆ ಆವರಣದಲ್ಲಿ ನಿತ್ಯ ವಾಯುವಿಹಾರ ಮಾಡುವ ಹಿರಿಯ ನಾಗರಿಕರೊಬ್ಬರು ತಿಳಿಸಿದ್ದಾರೆ.

ಎಎಸ್‌ಐ ಕ್ರಮ ಏನು?:

ಕೋಟೆಯೊಳಗೆ ಚಿರತೆ ಕಾಣಿಸಿಕೊಂಡು ಹಲವು ವರ್ಷಗಳೂ ಕಳೆದಿದ್ದರೂ ಎಎಸ್‌ಐ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ. ಕೋಟೆಯೊಳಗಿನ ಮರಗಿಡಗಳನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಚಿರತೆ ಕಾಣಿಸಿಕೊಂಡ ತಕ್ಷಣವೇ ಅರಣ್ಯಾಧಿಕಾರಿಗಳಿಗೆ ದೂರನ್ನೂ ನೀಡಿಲ್ಲ. ಚಿರತೆ ಸೆರೆಗೆ ಯಾವುದೇ ಪ್ರಯತ್ನಗಳನ್ನೂ ಮಾಡಿಲ್ಲ ಎಂದು ಆರೋಪಿಸುತ್ತಾರೆ.

‘ಕೋಟೆಯ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಂಡಿಲ್ಲ, ಜಂಗಲ್‌ ಕಟಿಂಗ್‌ ಮಾಡಿಲ್ಲ. ಹೀಗಾಗಿ ಚಿರತೆಗಳು ಪ್ರವೇಶಿಸುವಂತಾಗಿದೆ. ಎಎಸ್‌ಐ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕೋಟೆ ಆವರಣವನ್ನು ಚಿರತೆ ಭಯಮುಕ್ತಗೊಳಿಸಬೇಕು’ ಎಂದು ಪ್ರವಾಸಿಗರೊಬ್ಬರು ಒತ್ತಾಯಿಸಿದ್ದಾರೆ.

ಚಿರತೆ ಭಯ ಕೃತಕ ಸೃಷ್ಟಿಯೇ?

ಅರಮನೆ ಆವರಣ ಗೋಪಾಲಸ್ವಾಮಿ ಹೊಂಡ ನೆಲ್ಲಿಕಾಯಿ ಸಿದ್ದಪ್ಪನ ಬೆಟ್ಟದ ಬತ್ತೇರಿ ಸ್ಥಳಗಳಲ್ಲಿ ಪ್ರಮುಖವಾಗಿ ಚಿರತೆ ಭಯವಿದೆ. ಈ ಪ್ರದೇಶಗಳಲ್ಲಿ ಎಎಸ್‌ಐ ಅಧಿಕಾರಿಗಳು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿಲ್ಲ. ಕೆಲ ಪ್ರವಾಸಿಗರು ಗುಂಪುಗುಂಪಾಗಿ ತೆರಳಿ ಈ ಜಾಗಗಳನ್ನು ವಿಕ್ಷಣೆ ಮಾಡಿ ಬರುತ್ತಾರೆ. ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಚಿರತೆ ಭಯವನ್ನು ಕೃತಕವಾಗಿ ಸೃಷ್ಟಿಸಿದ್ದಾರೆ ಎಂದೂ ಕೆಲವರು ಆರೋಪಿಸುತ್ತಾರೆ. ‘ಎಲ್ಲಾ ಸ್ಮಾರಕಗಳ ಕಡೆ ಭದ್ರತಾ ಸಿಬ್ಬಂದಿಯನ್ನು ಹಾಕಿದರೆ ಪ್ರವಾಸಿಗರು ಯಾವುದೇ ಭಯವಿಲ್ಲದೇ ಸ್ಮಾರಕ ವೀಕ್ಷಣೆ ಮಾಡುತ್ತಾರೆ. ಆಗ ಚಿರತೆ ಅಲ್ಲಿಗೆ ಬರುವುದಿಲ್ಲ. ಸಿಬ್ಬಂದಿ ನಿಯೋಜನೆ ಮಾಡದ ಅಧಿಕಾರಿಗಳು ಚಿರತೆ ಭಯದ ಕತೆ ಸೃಷ್ಟಿಸಿದ್ದಾರೆ’ ಎಂದು ಸ್ಥಳೀಯರಾದ ಎಂ.ಅಜಯ್‌ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.