ADVERTISEMENT

ನೀರಾಗೆ ಲಾಕ್‌ಡೌನ್‌ನಲ್ಲಿದ್ದ ಬೇಡಿಕೆ ಈಗ ಇಲ್ಲ!

ಜನರಲ್ಲಿ ಮಾಹಿತಿ ಕೊರತೆ, ಆರೋಗ್ಯ ಪೇಯವಾಗಿ ಬಳಕೆಯಾಗುತ್ತಿಲ್ಲ

ಕೊಂಡ್ಲಹಳ್ಳಿ ಜಯಪ್ರಕಾಶ
Published 26 ಸೆಪ್ಟೆಂಬರ್ 2020, 1:59 IST
Last Updated 26 ಸೆಪ್ಟೆಂಬರ್ 2020, 1:59 IST
ನೀರಾ ಇಳಿಸಲು ಮರವೇರುತ್ತಿರುವ ರೈತ
ನೀರಾ ಇಳಿಸಲು ಮರವೇರುತ್ತಿರುವ ರೈತ   

ಮೊಳಕಾಲ್ಮುರು: ಲಾಕ್‌ಡೌನ್ ಸಮಯದಲ್ಲಿ ಮದ್ಯ ಮಾರಾಟ ನಿಷೇಧ ಮಾಡಿದ್ದ ಕಾರಣ ತೀವ್ರ ಬೇಡಿಕೆ ಕಂಡಿದ್ದ ತೆಂಗಿನ ನೀರಾ ಮಾರಾಟ ದಿನೇ, ದಿನೇ ಇಳಿಮುಖವಾಗುತ್ತಿದೆ.

ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದ ವಸುಂಧರಾ ಸಸ್ಯಕ್ಷೇತ್ರದಲ್ಲಿ ತೆಂಗಿನ ಮರಗಳಿಂದ ನೀರಾವನ್ನು ವೈಜ್ಞಾನಿಕವಾಗಿ ಇಳಿಸಲಾಗುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಇಲ್ಲಿಗೆ ಬಂದು ಜನರು ನೀರಾ ಕೊಳ್ಳುತ್ತಿದ್ದರು.
ಮದ್ಯ ಮಾರಾಟಕ್ಕೆ ಹಸಿರು ನಿಶಾನೆ ಸಿಕ್ಕ ನಂತರ ನೀರಾ ಬೇಡಿಕೆ ಗಣನೀಯ ಕುಸಿತವಾಗಿರುವುದು ‘ಮದ್ಯಕ್ಕೆ ನೀರಾ ಪರ್ಯಾಯವಾಗಿ ಬಳಸುತ್ತಿದ್ದರಾ’ ಎಂಬ ಅನುಮಾನ ಉಂಟು ಮಾಡಿದೆ.

ಸಸ್ಯಕ್ಷೇತ್ರ ಮಾಲೀಕ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ತೆಂಗಿನ ಬೆಳೆಗಾರ ಎಸ್.ಸಿ.ವೀರಭದ್ರಪ್ಪ ಶುಕ್ರವಾರ ‘ಪ್ರಜಾವಾಣಿ’ ಜತೆ ಮಾತನಾಡಿ, ‘ನಮ್ಮ ಜನರಿಗೆ ನೀರಾದಲ್ಲಿರುವ ಆರೋಗ್ಯಕರ ಅಂಶಗಳ ಬಗ್ಗೆ ಮಾಹಿತಿ ಇಲ್ಲ. ಚರ್ಮರೋಗ, ಶಕ್ತಿವರ್ಧಕ, ಅಸಿಡಿಟಿ ಸೇರಿದಂತೆ ಹತ್ತಾರು ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ. ಮಾಹಿತಿ ಇರುವವರು ಈಗಲೂ ನಿತ್ಯ ಬಂದು ಕುಡಿಯುತ್ತಿದ್ದಾರೆ. ಬಳ್ಳಾರಿ ಕಡೆ ಜನ ಹೆಚ್ಚು ಕೊಳ್ಳುತ್ತಾರೆ’ ಎಂದು ಹೇಳಿದರು.

ADVERTISEMENT

‘ಲಾಕ್‌ಡೌನ್ ಸಮಯದಲ್ಲಿ ಬೆಳಿಗ್ಗೆ ಇಳಿಸಿದ 10 ನಿಮಿಷದಲ್ಲಿ ನಾ ಮುಂದು, ತಾ ಮುಂದು ಎಂದು ಮುಗಿಬಿದ್ದು ಕೊಂಡು ಕುಡಿಯುತ್ತಿದ್ದರು. ಈಗ ಸಂಜೆವರೆಗೂ ಕಾಯ್ದು ಮಾರಾಟ ಮಾಡಬೇಕಿದೆ. ಕೆಲ ಸಾರಿ ಉಳಿಯುತ್ತಿದೆ. ಈಚೆಗೆ 200 ಬಾಟಲ್ ನೀರಾ ಉಳಿದಿತ್ತು. ಅದರಲ್ಲಿ ಬೆಲ್ಲ ತಯಾರಿಸಲಾಗಿದೆ. ಇದರಲ್ಲಿ ಲಾಭ ಕಾಣಬೇಕಾದಲ್ಲಿ ಪ್ರತಿ ಕೆ.ಜಿ ಬೆಲ್ಲವನ್ನು ₹ 1,000ಕ್ಕೆ ಮಾರಾಟ ಮಾಡಬೇಕು. ಸಕ್ಕರೆ ಕಾಯಿಲೆ ಇರುವವರಿಗೆ ಒಳ್ಳೆಯದು. ಇಷ್ಟೊಂದು ದುಬಾರಿಗೆ ಮಾರಾಟ ಮಾಡುವುದು ಸುಲಭವೇ’ ಎಂದು ಪ್ರಶ್ನೆ ಮಾಡಿದರು.

‘ಕೊರೊನಾಕ್ಕೂ ಮೊದಲು ನೀರಾವನ್ನು ಚಳ್ಳಕೆರೆ, ಚಿತ್ರದುರ್ಗದಲ್ಲಿ ಕೇಂದ್ರಗಳನ್ನು ತೆರೆದು ಮಾರಾಟ ಮಾಡಲಾಗುತ್ತಿತ್ತು. ಇದು ಈಗ ಸ್ಥಗಿತವಾಗಿದೆ. ಮದ್ಯ ಮಾರಾಟ ಸ್ಥಗಿತವಾಗಿದ್ದಾಗ ಮದ್ಯಪ್ರಿಯರು ಮದ್ಯ ಸಿಗುತ್ತಿಲ್ಲ ‘ಏನೋ ಒಂದು ಕುಡಿಯಬೇಕು’ ಎಂದು ಕುಡಿದಿರಬಹುದು. ಆದರೆ, ನೀರಾದಿಂದ ಮತ್ತು ಬರುವುದಿಲ್ಲ. ಇದು ಹುಳಿ ಬಂದ ನಂತರ ತುಸು ಮತ್ತು ಬರಬಹುದು. ಹುಳಿ ಬರಲು ನಾವು ಅವಕಾಶ ನೀಡಿಲ್ಲ. ನೀರಾವನ್ನು ಕೊಂಡು ಮನೆಗೆ ಹೋದ ನಂತರ ಅದರ ಸಂಸ್ಕರಣೆ ಕಷ್ಟ ಎಂಬುದು ಕೊಳ್ಳುವಿಕೆಗೆ ಕಡಿವಾಣ ಹಾಕಿರಬಹುದು’ ಎಂದು ವೀರಭದ್ರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.