ADVERTISEMENT

ಮದಕರಿ ಥೀಮ್‌ ಪಾರ್ಕ್‌ಗೆ ಸಹಕಾರ

ರಾಜವೀರ ಮದಕರಿ ನಾಯಕ ಜಯಂತಿ; ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 3:18 IST
Last Updated 28 ಅಕ್ಟೋಬರ್ 2025, 3:18 IST
ನಾಯಕ ಸಮಾಜದ ವತಿಯಿಂದ ಕನಕ ವೃತ್ತದಲ್ಲಿ ನಡೆದ ರಾಜವೀರ ಮದಕರಿ ನಾಯಕ ಜಯಂತಿಯನ್ನು ಸ್ವಾಮೀಜಿಗಳು, ಗಣ್ಯರು ಉದ್ಘಾಟಿಸಿದರು
ನಾಯಕ ಸಮಾಜದ ವತಿಯಿಂದ ಕನಕ ವೃತ್ತದಲ್ಲಿ ನಡೆದ ರಾಜವೀರ ಮದಕರಿ ನಾಯಕ ಜಯಂತಿಯನ್ನು ಸ್ವಾಮೀಜಿಗಳು, ಗಣ್ಯರು ಉದ್ಘಾಟಿಸಿದರು   

ಚಿತ್ರದುರ್ಗ: ‘ರಾಜವೀರ ಮದಕರಿ ನಾಯಕ ಥೀಮ್‌ ಪಾರ್ಕ್‌ ನಿರ್ಮಾಣಕ್ಕೆ ನಾವು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧರಿದ್ದೇವೆ. ರಾಜ್ಯ ಸರ್ಕಾರ ಈಗಾಗಲೇ ಭೂಮಿ ನೀಡಿದ್ದು, ಪಾರ್ಕ್‌ ನಿರ್ಮಾಣಕ್ಕೆ ಇಡೀ ಸಮಾಜ ಒಗ್ಗೂಡಲಿದೆ’ ಎಂದು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಹೇಳಿದರು.

ನಾಯಕ ಸಮಾಜದ ವತಿಯಿಂದ ಸೋಮವಾರ ಕನಕ ವೃತ್ತದಲ್ಲಿ ಆಯೋಜಿಸಿದ್ದ ರಾಜವೀರ ಮದಕರಿ ನಾಯಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮದಕರಿ ನಾಯಕ ಥೀಮ್ ಪಾರ್ಕ್ ನಿರ್ಮಾಣ ಮಾಡುವುದಾಗಿ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದರು. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ. ಹೀಗಾಗಿ ನಾವು ಪಾರ್ಕ್‌ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಈಗ ರಾಜ್ಯ ಸರ್ಕಾರ ಭೂಮಿ ನೀಡಿದ್ದು, ಥೀಮ್ ಪಾರ್ಕ್ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

‘ಚಿತ್ರದುರ್ಗದ ಪಾಳೇಗಾರರು ಸಮಾಜದ ಎಲ್ಲ ವರ್ಗವನ್ನು ವಿಶ್ವಾಸದಿಂದ, ಒಗ್ಗಟ್ಟಿನಿಂದ ಮುನ್ನಡೆಸುವ ಶಕ್ತಿ ಹೊಂದಿದ್ದರು. ಅವರು ಉತ್ತಮ ಆಡಳಿತಕ್ಕೆ ಹೆಸರುವಾಸಿಯಾಗಿದ್ದರು. ನೆರೆ ರಾಜ್ಯಗಳ ರಾಜರು ಚಿತ್ರದುರ್ಗದ ಮೇಲೆ ದಂಡೆತ್ತಿ ಬಂದರೂ ಅವರು ಗೆಲ್ಲಲು ಸಾಧ್ಯವಾಗಲಿಲ್ಲ. ಸಾಮ್ರಾಜ್ಯ ರಕ್ಷಣೆಗೆ ಭದ್ರಕೋಟೆ ನಿರ್ಮಾಣ ಮಾಡಿದ್ದರು. ಎಲ್ಲ ಸಮುದಾಯಗಳ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಿದರು’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ‘ನಾಯಕ ಸಮಾಜದ ಸದಸ್ಯರು ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ. ಪರಿಶ್ರಮದಿಂದ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಮದಕರಿ ನಾಯಕರ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಿಸಲು ಈಗಾಗಲೇ ಅಗತ್ಯವಿರುವ ಜಾಗ ಕಾಯ್ದಿರಿಸಲಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಯಿಸಿ ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಮದಕರಿ ನಾಯಕರು ಸಾಮಾಜಿಕವಾಗಿ ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅವನ್ನು ಜಗತ್ತಿಗೆ ತಿಳಿಸುವ ಕೆಲಸ ಮಾಡಲಾಗುವುದು’ ಎಂದು ಹೇಳಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ‘ಮದಕರಿ ನಾಯಕರ ಥೀಮ್ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು. ಅದರಂತೆ ಪ್ರತಿ ವರ್ಷ ದುರ್ಗೋತ್ಸವ ನಡೆಸಲು ಕ್ರಮ ಕೈಗೊಳ್ಳಲಾಗುವುದು. ನಾಯಕ ಸಮಾಜ ಎಲ್ಲ ರೀತಿಯ ರಾಜಕಾರಣವನ್ನು ಬದಿಗೊತ್ತಿ ಒಂದುಗೂಡಬೇಕು. ಯಾರು ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ ಚಿಂತೆಯಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಉಳಿದಂತೆ ಸಮಾಜದ ವಿಚಾರ ಬಂದಾಗ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು’ ಎಂದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಇಮ್ಮಡಿ ಕೇತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉದ್ಯಮಿ ಶ್ರೀನಿವಾಸ ನಾಯಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ನಾಯಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ, ಕಲ್ಲವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡ ಯೋಗೀಶ್ ಬಾಬು, ಗುಡ್ಡದೇಶ್ವರಪ್ಪ, ರತ್ನಮ್ಮ ಇದ್ದರು.

ಕನಕ ವೃತ್ತದಿಂದ ಮದಕರಿ ನಾಯಕ ವೃತ್ತದವರೆಗೆ ಮದಕರಿ ನಾಯಕರ ಕಲಾ ಕೃತಿಯ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಮದಕರಿ ನಾಯಕ ವೃತ್ತದಲ್ಲಿ ಲೇಸರ್ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು.

ಮದಕರಿ ನಾಯಕರ ಭಾವಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ

ಪಾಳೇಗಾರ ವಂಶಸ್ಥರಿಗೆ ಗೌರವ

‘ಮದಕರಿ ನಾಯಕ ಮಾಡಿರುವ ಕೆಲಸಗಳು ಕಟ್ಟಿರುವ ಸ್ಮಾರಕಗಳು ಸೂರ್ಯ ಚಂದ್ರ ಇರುವವರೆಗೆ ಶಾಶ್ವತವಾಗಿರುತ್ತವೆ. ಇಂತಹ ಪ್ರಾಮಾಣಿಕ ದಕ್ಷ ಆಡಳಿತ ನಡೆಸಿದ ಪಾಳೇಗಾರರ ವಂಶಸ್ಥರು ಇಂದು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ‘ ಎಂದು ಶ್ರೀರಾಮುಲು ವಿಷಾದಿಸಿದರು. ‘ಪ್ರಾಮಾಣಿಕತೆಯಿಂದ ಜೀವನ ಮಾಡಿದ ಪರಿಣಾಮ ಇಂದು ಅವರು ಬಡತನದಲ್ಲಿ ಜೀವಿಸುತ್ತಿದ್ದಾರೆ. ಅವರನ್ನು ಮುಂದಿನ ದಿನಗಳಲ್ಲಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುವುದು. ಮೈಸೂರಿನ ರಾಜ ವಂಶಸ್ಥರಿಗೆ ನೀಡುವಂತೆ ಮದಕರಿ ನಾಯಕ ವಂಶಸ್ಥರಿಗೂ ಗೌರವ ನೀಡುವ ವ್ಯವಸ್ಥೆ ಮಾಡಲಾಗುವುದು’ ಎಂದರು.

ಸರ್ಕಾರವೇ ಜಯಂತಿ ಆಚರಿಸಲಿ

‘ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವೇ ಮದಕರಿ ನಾಯಕ ಜಯಂತಿ ಆಚರಿಸಬೇಕು. ಸರ್ಕಾರಿ ಕಾರ್ಯಕ್ರಮವನ್ನಾಗಿ ಜಯಂತಿ ಆಚರಿಸಬೇಕು’ ಎಂದು ಬಿ.ಶ್ರೀರಾಮುಲು ಒತ್ತಾಯಿಸಿದರು. ‘ಮೈಸೂರು ದಸರಾ ಮಾದರಿಯಲ್ಲಿ ಮದಕರಿ ನಾಯಕರ ಜಯಂತಿ ನಡೆಯಬೇಕು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು. ಸಮುದಾಯದ ಮುಖಂಡರು ಒಗ್ಗಟ್ಟಿನಿಂದ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.