ADVERTISEMENT

ಮೊಳಕಾಲ್ಮುರು: ಮುಖ್ಯರಸ್ತೆ ವಿಸ್ತರಣೆ ಕಾರ್ಯ ಕಳಪೆ; ಆಕ್ರೋಶ

ಮುಖ್ಯರಸ್ತೆ ವಿಸ್ತರಣೆ ದೂರುಗಳ ಆಲಿಕೆ ಸಭೆ: ಸಮಿತಿ ರಚಿಸಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 4:39 IST
Last Updated 1 ಫೆಬ್ರುವರಿ 2023, 4:39 IST
ಮೊಳಕಾಲ್ಮುರಿನ ತಾಲ್ಲೂಕು ಆಡಳಿತ ಸೌಧದಲ್ಲಿ ಮಂಗಳವಾರ ಮುಖ್ಯರಸ್ತೆ ವಿಸ್ತರಣೆಗೆ ಸಂಬಂಧಪಟ್ಟಂತೆ ದೂರುಗಳ ಆಲಿಕೆ ಸಭೆ ಹಮ್ಮಿಕೊಳ್ಳಲಾಗಿತ್ತು.
ಮೊಳಕಾಲ್ಮುರಿನ ತಾಲ್ಲೂಕು ಆಡಳಿತ ಸೌಧದಲ್ಲಿ ಮಂಗಳವಾರ ಮುಖ್ಯರಸ್ತೆ ವಿಸ್ತರಣೆಗೆ ಸಂಬಂಧಪಟ್ಟಂತೆ ದೂರುಗಳ ಆಲಿಕೆ ಸಭೆ ಹಮ್ಮಿಕೊಳ್ಳಲಾಗಿತ್ತು.   

ಮೊಳಕಾಲ್ಮುರು: ಪಟ್ಟಣದಲ್ಲಿ ಹಾದು ಹೋಗಿರುವ ಮುಖ್ಯರಸ್ತೆ ವಿಸ್ತರಣೆ ಕಾರ್ಯವು ಸಂಪೂರ್ಣ ಕಳಪೆಯಿಂದ ಕೂಡಿದ್ದು, ನಿತ್ಯ ಜನರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ವಿವಿಧ ಸಂಘಟನೆಗಳ ಸದಸ್ಯರು, ನಾಗರಿಕರು ದೂರಿದರು.

ತಾಲ್ಲೂಕು ಆಡಳಿತ ಸೌಧದಲ್ಲಿ ಮಂಗಳವಾರ ಕಾಮಗಾರಿ ಲೋಪದ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದ ಕಾರಣ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಮತ್ತು ಸಂಘಟನೆಗಳ ಸಭೆಯಲ್ಲಿ ಅವರು ದೂರಿದರು.

‘₹ 30 ಕೋಟಿ ವೆಚ್ಚದ ಈ ಕಾಮಗಾರಿ ಆರಂಭವಾಗಿ ಒಂದು ವರ್ಷ ಕಳೆದಿದೆ. ಆದರೆ, ಪಟ್ಟಣದ ಒಳಗಡೆ ಇನ್ನೂ ಪೂರ್ಣವಾಗಿಲ್ಲ. ಜನರು, ವ್ಯಾಪಾರಿಗಳು ದೂಳು, ವಾಹನಗಳ ಅಡ್ಡಾದಿಡ್ಡಿ ಸಂಚಾರದಿಂದ ಹೈರಾಣಾಗಿದ್ದಾರೆ. ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು ಪಾದಚಾರಿ ರಸ್ತೆ ನಿರ್ಮಿಸಿಲ್ಲ, ಸಾಂಪ್ರದಾಯಕವಾಗಿ ನೀರು ಹರಿಯುತ್ತಿದ್ದ ಕಡೆ ಸೇತುವೆ, ರಾಜಕಾಲುವೆ, ಚರಂಡಿಗಳನ್ನು ನಿರ್ಮಿಸಿಲ್ಲ’ ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ದೂರಿದರು.

ADVERTISEMENT

‘ಬೆಟ್ಟದಿಂದ ಮಳೆನೀರು ರಸ್ತೆ ಮೇಲೆ ಬೇಕಾಬಿಟ್ಟಿ ಹರಿಯುತ್ತದೆ. ಸಾಂಪ್ರದಾಯಕ ಮಾರ್ಗಗಳನ್ನು ಮುಚ್ಚಿರುವ ಕಾರಣ ನೀರು ಎಲ್ಲೆಂದರಲ್ಲಿ ನುಗ್ಗುತ್ತದೆ. ಕೋರ್ಟ್ ಮುಂಭಾಗ, ಸಂತೆ ಮೈದಾನದ ಮುಂಭಾಗ, ಕೆಇಬಿ ವೃತ್ತ, ಪಿ.ಟಿ.ಹಟ್ಟಿ ಬಳಿ ಹೆಚ್ಚು ಸಮಸ್ಯೆಯಾಗುತ್ತಿದೆ. ಪಿ.ಟಿ. ಹಟ್ಟಿಯಲ್ಲಿ ಜಮೀನುಗಳಿಗೆ ಅಪಾರ ನೀರು ನುಗ್ಗಿ ಬೆಳೆ ನಷ್ಟವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಸ್ತೆಬದಿಯಲ್ಲಿ ಕುಡಿಯುವ ನೀರಿನ ಪೈಪ್‌ಗಳನ್ನು ಸಮರ್ಪಕವಾಗಿ ಅಳವಡಿಸಬೇಕು. ಹಳೆ ರಸ್ತೆಯಲ್ಲಿನ ಡಾಂಬರ್ ಕಿತ್ತು ಅದೇ ಜಲ್ಲಿ ಮೇಲೆ ಹೊಸ ರಸ್ತೆ ನಿರ್ಮಿಸುತ್ತಿರುವುದು ಕಳಪೆಗೆ ಎಡೆ ಮಾಡಿಕೊಟ್ಟಿದೆ. ವಿಸ್ತರಣೆ ಕಾಮಗಾರಿಗೆ ಸಂಬಂಧಪಟ್ಟಂತೆ ಹಲವು ಬಾರಿ ಪ್ರತಿಭಟನೆ ಮಾಡಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಇದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಭೆಯಲ್ಲಿದ್ದವರು ಆಗ್ರಹಿಸಿದರು.

ತಹಶೀಲ್ದಾರ್ ಟಿ.ಸುರೇಶ್ ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ಟಿ. ರವಿಕುಮಾರ್, ಉಪಾಧ್ಯಕ್ಷ ಮಂಜಣ್ಣ, ಮುಖ್ಯಾಧಿಕಾರಿ ಕಾಂತರಾಜ್ ಮತ್ತು ಸದಸ್ಯರು, ರೈತ ಸಂಘದ ಮರ್ಲಹಳ್ಳಿ ರವಿಕುಮಾರ್, ದಸಂಸಯ ಕೊಂಡಾಪುರ ಪರಮೇಶ್ವರಪ್ಪ, ಬಿ.ಟಿ. ನಾಗಭೂಷಣ, ಹೆದ್ದಾರಿ ಪ್ರಾಧಿಕಾರಿ ಎಂಜಿನೀಯರ್ ನರೇಂದ್ರ ಇದ್ದರು.

***

ಸಮಿತಿ ರಚನೆ

ಕಾಮಗಾರಿ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ತಹಶೀಲ್ದಾರ್, ಪಟ್ಟಣ ಪಂಚಾಯಿತಿ ಸದಸ್ಯರು, ಸಂಘಟನೆಗಳ ಸದಸ್ಯರು ಮತ್ತು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು. ಸಮಿತಿ ಸಮಸ್ಯೆಗಳನ್ನು ಪರಿಶೀಲಿಸಿ ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳನ್ನು ಸೂಚಿಸಿದಲ್ಲಿ ಶೀಘ್ರ ಮಾಡಿಕೊಡಲಾಗುವುದು. ಗುತ್ತಿಗೆದಾರರು ಕೆಲ ಲೋಪಗಳನ್ನು ಮಾಡಿರುವುದು ಕಾಣಸಿಕ್ಕಿದೆ ಎಂದು ಪ್ರಾಧಿಕಾರಿ ಅಧಿಕಾರಿ ರಮೇಶ್ ಹೇಳಿದರು.

ಸಭೆ ನಂತರ ಅಧಿಕಾರಿಗಳು ಸಮಸ್ಯೆ ಸ್ಥಳಗಳಿಗೆ ಭೇಟಿ ನೀಡಿದರು.

***

ರಸ್ತೆ ತಡೆ ಪ್ರತಿಭಟನೆ ಮುಂದೂಡಿಕೆ

ಮುಖ್ಯರಸ್ತೆ ವಿಸ್ತರಣೆ ಲೋಪಗಳನ್ನು ಖಂಡಿಸಿ ರೈತ ಸಂಘ, ದಸಂಸ ಸೇರಿದಂತೆ ವಿವಿಧ ಸಂಘಟನೆಗಳು ಫೆ. 1ರಂದು ಕರೆ ನೀಡಿದ್ದ ರಸ್ತೆ ತಡೆ ಪ್ರತಿಭಟನೆಯನ್ನು ಸಭೆಯಲ್ಲಿ ಅಧಿಕಾರಿಗಳು ಭರವಸೆ ನೀಡಿರುವ ಕಾರಣ ಮುಂದೂಡಲಾಗಿದೆ. ಕೊಟ್ಟ ಮಾತಿನ ಪ್ರಕಾರ ನಡೆದುಕೊಳ್ಳದಿದ್ದಲ್ಲಿ ಪ್ರತಿಭಟನೆ ಮತ್ತೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘ ತಾಲ್ಲೂಕು ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.