ADVERTISEMENT

ಚಿತ್ರದುರ್ಗ: ಮುಖ್ಯರಸ್ತೆ ವಿಸ್ತರಣೆ ಕಾರ್ಯ ಸನ್ನಿಹಿತ

ಮೊಳಕಾಲ್ಮುರು: ಬಹುವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿ

ಕೊಂಡ್ಲಹಳ್ಳಿ ಜಯಪ್ರಕಾಶ
Published 18 ಜನವರಿ 2021, 1:11 IST
Last Updated 18 ಜನವರಿ 2021, 1:11 IST
ಮೊಳಕಾಲ್ಮುರಿನಲ್ಲಿ ವಿಸ್ತರಣೆಯಾಗಲಿರುವ ಮುಖ್ಯರಸ್ತೆ
ಮೊಳಕಾಲ್ಮುರಿನಲ್ಲಿ ವಿಸ್ತರಣೆಯಾಗಲಿರುವ ಮುಖ್ಯರಸ್ತೆ   

ಮೊಳಕಾಲ್ಮುರು: ಪಟ್ಟಣ ಹೃದಯ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ (ಹಾನಗಲ್–ರಾಯದುರ್ಗ ರಸ್ತೆ) ವಿಸ್ತರಣೆ ಕಾರ್ಯವನ್ನು ಶೀಘ್ರವೇ ಕೈಗೆತ್ತಿಕೊಳ್ಳುವ ಚಟುವಟಿಕೆಗಳು ನಡೆಯುತ್ತಿವೆ.

20ಕ್ಕೂ ಹೆಚ್ಚು ವರ್ಷಗಳಿಂದ ಈ ರಸ್ತೆಯನ್ನು ವಿಸ್ತರಣೆ ಮಾಡಲಾಗುವುದು ಎಂಬ ವದಂತಿ ಹರಿದಾಡುತ್ತಿದೆ. ಆದರೆ ಜನಪ್ರತಿನಿಧಿಗಳು ರಸ್ತೆ ವಿಸ್ತರಣೆಗೆ ಒತ್ತು ನೀಡದ ಕಾರಣ ಈ ಕಾರ್ಯ ನನೆಗುದಿಗೆ ಬಿದ್ದಿತ್ತು. ಈ ರಸ್ತೆಯು ಹೈದರಾಬಾದ್–ಹಾನಗಲ್ ರಾಷ್ಟ್ರೀಯ ಹೆದ್ದಾರಿಯಾಗಿದೆ.

ಎಂದಾದರೂ ಒಂದು ದಿನ ಈ ರಸ್ತೆ ವಿಸ್ತರಣೆ ಆಗಿಯೇ ತೀರುತ್ತದೆ ಎಂಬ ಕಾರಣಕ್ಕಾಗಿ ಇಕ್ಕೆಲಗಳ ಕಟ್ಟಡಗಳನ್ನು ನವೀಕರಣ ಮಾಡದ ಕಾರಣ ಪಟ್ಟಣದ ಅಂದಕ್ಕೆ ಅಡ್ಡಿಯಾಗಿತ್ತು.

ADVERTISEMENT

ಶನಿವಾರ ರಾಷ್ಟ್ರೀಯ ಹೆದ್ದಾರಿ ಕಾರ್ಯಾಲಯ ಅಧಿಕಾರಿಗಳು ಪಟ್ಟಣಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿದರು. ನಂತರ ‘ಪ್ರಜಾವಾಣಿ’ ಜತೆ ಮಾತನಾಡಿದ ಕಾರ್ಯಾಲಯದ ಸಹಾಯಕ ಎಂಜಿನಿಯರ್ ನರೇಂದ್ರ, ‘ಈ ಹಿಂದೆಯೇ ಈ ರಸ್ತೆ ವಿಸ್ತರಣೆ ಅನುಮೋದನೆಗಾಗಿ ದೆಹಲಿಯ ಕಾರ್ಯಲಯಕ್ಕೆ ಕಳುಹಿಸಲಾಗಿತ್ತು. ಆದರೆ, ರಸ್ತೆ ಮಧ್ಯಭಾಗದಲ್ಲಿನ ಡಿವೈಡರ್‌ನಲ್ಲಿ ಅಳವಡಿಸುವ ವಿದ್ಯುತ್ ದೀಪಗಳ ನಿರ್ವಹಣೆ ಹಾಗೂ ವಿದ್ಯುತ್ ಕಂಬಗಳ ತೆರವು ಹೊಣೆಯನ್ನು ಪಟ್ಟಣ ಪಂಚಾಯಿತಿ ಮಾಡಲಿದೆ ಎಂಬ ಅನುಮತಿ ಪತ್ರ ಬೇಕು ಎಂಬ ಕಾರಣ ಮುಂದಿಟ್ಟು ಕಾಮಗಾರಿ ಸ್ಥಗಿತವಾಗಿದೆ. ಈ ಕುರಿತು ಅನುಮೋದನೆ ನೀಡುವಂತೆ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಹೇಳಿದರು.

‘ಪ್ರಸ್ತುತ ಇರುವ ರಸ್ತೆ 5.5 ಮೀಟರ್ ಅಗಲವಿದೆ. ಇದನ್ನು ಪಟ್ಟಣ ವ್ಯಾಪ್ತಿಯಲ್ಲಿ 19.5 ಮೀಟರ್ ವಿಸ್ತರಣೆ ಮಾಡಲಾಗುವುದು. ಹಾನಗಲ್ ಕ್ರಾಸ್‌ನಿಂದ ಆಂಧ್ರ ಗಡಿವರೆಗಿನ 5.85 ಕಿ.ಮೀ ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ. ಇದಕ್ಕೆ ₹ 33.5 ಕೋಟಿ ಅನುದಾನ ನಿಗದಿಪಡಿಸಲಾಗಿದೆ’ ಎಂದು ತಿಳಿಸಿದರು.

‘ನಿರೀಕ್ಷೆಯಂತೆ ನಡೆದಲ್ಲಿ ಜನವರಿ ಅಂತ್ಯಕ್ಕೆ ಕಾಮಗಾರಿಗೆ ಅನುಮೋದನೆ ಸಿಗಬಹುಹುದು. ನಂತರ ಟೆಂಡರ್ ಪ್ರಕ್ರಿಯೆ ಪೂರ್ಣ ಮಾಡಿ, ಏಜೆನ್ಸಿ ನಿಗದಿ ಮಾಡಲು 2 ತಿಂಗಳು ಹಿಡಿಯುತ್ತದೆ. ಮಾರ್ಚ್‌ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.