
ಚಿತ್ರದುರ್ಗ: ‘ಮಧ್ಯಮ ವರ್ಗದವರು, ಬಡವರು ಈ ಕಾಲದಲ್ಲಿ ದುಂದುವೆಚ್ಚ ಮಾಡಿ ವಿವಾಹ ಮಾಡುವುದು ಕಷ್ಟ. ದುಡಿಯುವ ವರ್ಗ ಸಾಲ ಮಾಡಿ ವಿವಾಹ ಮಾಡುವುದನ್ನು ತಪ್ಪಿಸಲು ಮಠದಿಂದ ಸಾಮೂಹಿಕ ಕಲ್ಯಾಣ ಮಹೋತ್ಸವ ಮಾಡಲಾಗುತ್ತಿದೆ’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.
ನಗರದ ಮರುಘಾ ಮಠದಲ್ಲಿ ಬುಧವಾರ ಆಯೋಜಿಸಿದ್ದ 35ನೇ ವರ್ಷದ 11ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದರು.
‘ಸಮಾಜದಲ್ಲಿ ಜಾತಿ ಪಿಡುಗು ಇನ್ನೂ ಇದೆ. ಅದನ್ನು ತೊಡೆದು ಹಾಕಲು ಬಸವಾದಿ ಶರಣರ ಆಶಯದಂತೆ ಸಾಮೂಹಿಕ ಕಲ್ಯಾಣ ಮಹೋತ್ಸವ ವೇದಿಕೆ ಸಾಕ್ಷೀಭೂತವಾಗಿದೆ’ ಎಂದರು.
‘ಗಂಡು ಹೆಣ್ಣಿನ ಕಣ್ಣಲ್ಲಿ ನೀರು ಬರದಂತೆ ನೋಡಿಕೊಳ್ಳಬೇಕು. ಹೆಣ್ಣು ಗಂಡನೊಂದಿಗೆ ಅತಿ ಆಸೆಯಿಂದ ಭೌತಿಕತೆಗೆ ಒಳಗಾಗಿ ಜಗಳವಾಡಬೇಡಿ. ತಮ್ಮ ಜೀವನವು ಸರಳವಾಗಿರಲಿ’ ಎಂದು ಆಶಿಸಿದರು.
‘ಶ್ರೀಮಠವು ಅಮಾವಾಸ್ಯೆ, ಹುಣ್ಣಿಮೆ ನೋಡದೆ ವಿವಾಹಗಳನ್ನು ಏರ್ಪಡಿಸುತ್ತ ಬಂದಿದೆ. ಇಂದು ಹುಣ್ಣಿಮೆಯಾದರೂ ವಿವಾಹಗಳು ನೆರವೇರುತ್ತಿವೆ. ಅದು ಶ್ರೀಮಠದ ಆದರ್ಶ ಕಾರ್ಯವಾಗಿದೆ. ಸಾರ್ವಜನಿಕರು ದುಂದುವೆಚ್ಚ ಮಾಡದೆ ತಮ್ಮ ಮಕ್ಕಳ, ಮೊಮ್ಮಕ್ಕಳ ವಿವಾಹವನ್ನು ಸರಳವಾಗಿ ಸಾಮೂಹಿಕ ವಿವಾಹದಲ್ಲಿಯೇ ಮಾಡಿ’ ಎಂದು ಮನವಿ ಮಾಡಿದರು.
‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಮಾತಿದೆ. ಕಾರಣ ಎರಡೂ ಕಷ್ಟದ ಕೆಲಸಗಳು. ಅಂತಹ ಕಷ್ಟದ ಕೆಲಸವನ್ನು ಮುರುಘಾಮಠವು ಸುಮಾರು 35 ವರ್ಷಗಳಿಂದ ಸಾಮೂಹಿಕ ಕಲ್ಯಾಣ ಮಹೋತ್ಸವದ ಮೂಲಕ ಮಾಡುತ್ತ ಬಂದಿದೆ’ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು.
‘ಸತಿ ಪತಿಗಳ ನಡುವೆ ಪ್ರೀತಿ ಇರಬೇಕು. ಅದರಿಂದ ಸುಖ ಸಂಸಾರ ಸಾಧ್ಯ. ಸಂಸಾರದ ಕಣ್ಣು ಸತಿಪತಿಗಳು. ಸತಿ ಪತಿಗಳ ಮನಸ್ಸು ವಿಚಾರ ಆಲೋಚನೆ ಒಂದಾಗಿದ್ದರೆ ಆನಂದಮಯವಾಗಿರುತ್ತದೆ. ಸಿಹಿಯಾದ ಜೀವನ ಸತಿ ಪತಿಗಳು ಒಂದಾದಾಗ ಮಾತ್ರ ಸಾಧ್ಯ’ ಎಂದರು.
‘ಭಾರತದಲ್ಲಿ 40 ರಿಂದ 50 ವಯಸ್ಸಿನವರಲ್ಲಿ ಎರಡೂ ಕಣ್ಣುಗಳು ಕಾಣದಿರುವಂತಹ ಸಂಖ್ಯೆ ಶೇ 40ರಷ್ಟಿದೆ. ಅದಕ್ಕೆ ಪೂರಕವಾಗಿ ಅವರಿಗೆ ಪುನರ್ ದೃಷ್ಟಿಯನ್ನು ನೀಡಲು ನೇತ್ರ ಶಸ್ತ್ರಚಿಕಿತ್ಸೆ ಮಾಡಿಸುವುದು ಅವಶ್ಯಕವಾಗಿದೆ. ಇದಕ್ಕೆ ಕಣ್ಣುಗಳ ದಾನ ಅವಶ್ಯಕ’ ಎಂದು ನೇತ್ರತಜ್ಞೆ ಅನುಶ್ರೀ ಹೇಳಿದರು.
‘ಒಂದು ವರ್ಷ ಮೇಲ್ಪಟ್ಟ ಎಲ್ಲಾ ವ್ಯಕ್ತಿಗಳ ಕಣ್ಣುಗಳನ್ನು ದಾನ ಪಡೆದು ಬೇರೆಯವರಿಗೆ ಚಿಕಿತ್ಸೆ ನೀಡಬಹುದು. ಮೃತ ವ್ಯಕ್ತಿಯ 2 ಕಣ್ಣುಗಳ ದಾನದಿಂದ 4 ಜನರಿಗೆ ದೃಷ್ಟಿಯನ್ನು ನೀಡಬಹುದು. ಪುಮೀತ್ ರಾಜಕುಮಾರ್ ಅವರು ಸಹ ಕಣ್ಣು ದಾನ ಮಾಡಿ 4 ಜನರಿಗೆ ಪುನರ್ ದೃಷ್ಟಿ ನೀಡಿದ್ದಾರೆ. ಆದ್ದರಿಂದ ಮರಣದ ನಂತರ ಕಣ್ಣುಗಳನ್ನು ಮಣ್ಣು ಮಾಡುವುದಾಗಲೀ ಸುಟ್ಟು ಹಾಕುವುದಾಗಲಿ ಮಾಡಬೇಡಿ’ ಎಂದು ಜಾಗೃತಿ ಮೂಡಿಸಿದರು.
ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 2 ಅಂತರ್ಜಾತಿ ಸೇರಿ 14 ಜೋಡಿಗಳ ದಾಂಪತ್ಯಕ್ಕೆ ಕಾಲಿಟ್ಟರು. ಬಸವೇಶ್ವರ ಆಸ್ಪತ್ರೆಯ ಪುನರ್ ಜ್ಯೋತಿ ಐ ಬ್ಯಾಂಕ್‌ನ ಬಿತ್ತಿಪತ್ರ ಬಿಡುಗಡೆ ಮಾಡಲಾಯಿತು.
ಐ ಬ್ಯಾಂಕ್ ನಿರ್ದೇಶಕ ಎಸ್.ವಿ.ಗುರುಮೂರ್ತಿ, ಐ ಬ್ಯಾಂಕ್ ಅಧ್ಯಕ್ಷ ಎಸ್. ವೀರೇಶ್, ನಿವೃತ್ತ ಪ್ರಾಚಾರ್ಯ ಟಿ.ಪಿ. ಜ್ಞಾನಮೂರ್ತಿ ಇದ್ದರು.
ಕಾಯಕದಿಂದ ಪ್ರಗತಿ ಸಾಧ್ಯ. ಇಂದಿನ ದಿನಮಾನಗಳಲ್ಲಿ ತಾಳ್ಮೆ ದುಡಿಮೆ ಪ್ರೀತಿ ಇದ್ದರೆ ನೆಮ್ಮದಿ ಕಾಣಬಹುದು. ಅತ್ತೆ ಸೊಸೆಯಂದಿರು ಹೊಂದಿಕೊಂಡು ಹೋಗಬೇಕು.ಬಸವಪ್ರಭು ಸ್ವಾಮೀಜಿ ದಾವಣಗೆರೆ ವಿರಕ್ತಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.