
ಹೊಸದುರ್ಗ: ‘2018ರಿಂದಲೂ ನನೆಗುದಿಗೆ ಬಿದ್ದಿದ್ದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತವಾಗಿ ಸಾಗುತ್ತಿದೆ. ಮುಂದಿನ ತಿಂಗಳು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಕರೆಸಿ ಉದ್ಘಾಟಿಸಲಾಗುವುದು. ನಾವು ಕೆಲಸ ಮಾಡುತ್ತೇವೆ. ಮಾಡಿದ ಕೆಲಸಕ್ಕೆ ಕೂಲಿ ಕೊಡಿ, ಕೈ ಎತ್ತಬೇಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ‘ಕಂದಾಯ ಗ್ರಾಮ, ಉಪಗ್ರಾಮ, ಬಗರ್ ಹುಕುಂ ಸಾಗುವಳಿ ಪತ್ರ, ದರಖಾಸು ಪೋಡಿ, 94ಸಿ ಹಕ್ಕುಪತ್ರ, ಇ-ಖಾತೆ, ಸಾಮಾಜಿಕ ಭದ್ರತಾ ಯೋಜನೆ ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಜಿಲ್ಲೆಯ 6 ತಾಲೂಕುಗಳ 10,000 ಫಲಾನುಭವಿಗಳನ್ನು ಹುಡುಕಿ ಸವಲತ್ತುಗಳನ್ನು ನೇರವಾಗಿ ಜನರಿಗೆ ತಲುಪಿಸಬೇಕೆಂಬ ಯೋಜನೆ ರೂಪಿಸಲಾಗಿತ್ತು. ಹೊಸದುರ್ಗದಲ್ಲಿ ಈ ಕಾರ್ಯ ಮೊದಲು ನಡೆಯುತ್ತಿದೆ’ ಎಂದರು.
‘ಭದ್ರಾ ಮೇಲ್ದಂಡೆ ಯೋಜನೆಯ ಪ್ರಗತಿ ಕಾರ್ಯದಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಶ್ರಮ ಅಪಾರ. ಹೊಸದುರ್ಗ ತಾಲ್ಲೂಕಿನ ಬಹುತೇಕ ಕಡೆ ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಿ ಅಂತರ್ಜಲದ ಮಟ್ಟ ಹೆಚ್ಚಿಸಿದ್ದಾರೆ. 5 ಗ್ಯಾರಂಟಿಗಳ ಮಧ್ಯೆ ಜನಪರ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದ್ದಾರೆ’ ಎಂದರು.
‘ಕೃಷ್ಣಬೈರೇಗೌಡ ಅವರು ಕಂದಾಯ ಸಚಿವರಾದ ಮೇಲೆ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಜಿಲ್ಲಾಧಿಕಾರಿಗಳು ಮತ್ತು ಇನ್ನಿತರ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಕ್ಕೆ ಇಟ್ಟುಕೊಂಡು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ’ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
‘ತಾಲ್ಲೂಕಿನ ಸಹಕಾರ ಸಂಘಗಳಲ್ಲಿ ಶೇ 3ರಷ್ಟು ಬಡ್ಡಿ ದರದಲ್ಲಿ ರೈತರಿಗೆ ₹15 ಲಕ್ಷದವರೆಗೆ ಸಾಲ ಕೊಡಲಾಗುತ್ತಿದೆ. ಜಮೀನುಗಳು ನಿಮ್ಮ ಹೆಸರಿಗಿದ್ದರೆ, ಇಂತಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಜಿಲ್ಲಾಧಿಕಾರಿಗಳು ಸರ್ಕಾರಿ ಕಾರ್ಯಗಳಿಗೆ 200 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು, ಕೊಂಡಜ್ಜಿ, ಲಕ್ಕಿಹಳ್ಳಿ, ಕಂಗುವಳ್ಳಿ ಮತ್ತು ಹ್ಯಾಂಡ್ ಪೋಸ್ಟ್ ಬಳಿ ಸಬ್ ಸ್ಟೇಷನ್ ಆಗಲಿವೆ’ ಎಂದು ತಿಳಿಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ‘ಸರ್ಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಹೊಸದುರ್ಗ ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ₹4 ಸಾವಿರ ಕೋಟಿ ಅನುದಾನ ತಂದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ವೆಂಕಟೇಶ ಟಿ., ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಹೆಬೂಬ್ ಜೀಲಾನಿ ಖುರೇಷಿ, ಭೂ ದಾಖಲೆಗಳ ಉಪನಿರ್ದೇಶಕ ರಾಮಾಂಜನೇಯ ಬಿ., ಸಹಾಯಕ ನಿರ್ದೇಶಕ ವಿನಯ್ ಎಸ್.ಡಿ., ತಹಶೀಲ್ದಾರ್ ತಿರುಪತಿ ಪಾಟೀಲ್, ತಾಲ್ಲೂಕು ಪಂಚಾಯಿತಿ ಇಒ ಸುನೀಲ್ ಕುಮಾರ್, ಪೋಲಿಸ್ ಇನ್‌ಸ್ಪೆಕ್ಟರ್ ಕೆ.ಟಿ ರಮೇಶ್, ಕೆಡಿಪಿ ಸದಸ್ಯೆ ದೀಪಿಕಾ ಸತೀಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಿವಣ್ಣ, ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್, ಕೆಪಿಸಿಸಿ ಸದಸ್ಯರಾದ ಎಂ.ಪಿ. ಶಂಕರ್, ಅಲ್ತಾಫ್ ಭಾಷಾ, ಮುಖಂಡರಾದ ಕಾರೆಹಳ್ಳಿ ಬಸವರಾಜ್, ಲೋಕೇಶಪ್ಪ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆಗ್ರೋ ಶಿವಣ್ಣ, ಕೆಡಿಪಿ ನಾಮನಿರ್ದೇಶಿತ ಸದಸ್ಯರು ಹಾಗೂ ಇನ್ನಿತರರಿದ್ದರು.
‘ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ತ್ವರಿತಗತಿಯಲ್ಲಿ ಕಾರ್ಯ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದು ಅದರಂತೆ ಕಾರ್ಯ ವೇಗವಾಗಿ ನಡೆಯುತ್ತಿದೆ. ತಾಲೂಕಿನ 70 ಕೆರೆಗಳಿಗೆ ನೀರು ಹರಿಯಲಿದೆ’ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದರು. ‘ವಿವಿ ಸಾಗರ ಜಲಾಶಯದಿಂದ ಹಿನ್ನೀರಿನ ಭಾಗದ ಜನರಿಗೆ ಯಾವುದೇ ಪ್ರಯೋಜನವಿಲ್ಲ. 130 ಅಡಿಗಿಂತ ಹೆಚ್ಚು ನೀರು ಬಂದಾಗ ಜನರ ಭೂಮಿ ಮುಳುಗಡೆಯಾಗುತ್ತದೆ. ಇದರಿಂದಾಗಿ ಕೋಡಿ ಬಾಯಿಗೆ ₹125 ಕೋಟಿ ವೆಚ್ಚದಲ್ಲಿ ಕ್ರಸ್ಟ್ ಗೇಟ್ ಅಳವಡಿಸಲಾಗುವುದು. ಬೆಳೆ ನಷ್ಟಕ್ಕೆ ಪರಿಹಾರ ಕೊಡಲು ಆಗಿರಲಿಲ್ಲ. ಇದೀಗ 940 ರೈತರಿಗೆ ಪರಿಹಾರ ನೀಡಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.