ADVERTISEMENT

ಕೇಂದ್ರ ಬಜೆಟ್‌ | ನಿರೀಕ್ಷೆ ಹುಸಿ: ಭದ್ರಾ ಅನುದಾನದ ನಿರೀಕ್ಷೆಗೆ ತಣ್ಣೀರು

ಕೆ.ಪಿ.ಓಂಕಾರಮೂರ್ತಿ
Published 2 ಫೆಬ್ರುವರಿ 2026, 7:04 IST
Last Updated 2 ಫೆಬ್ರುವರಿ 2026, 7:04 IST
<div class="paragraphs"><p>ಗೂನೂರು ಬಳಿಯ ಅಕ್ವಾಡಕ್ಟ್‌ ಕಾಲುವೆ</p></div>

ಗೂನೂರು ಬಳಿಯ ಅಕ್ವಾಡಕ್ಟ್‌ ಕಾಲುವೆ

   

ಚಿತ್ರದುರ್ಗ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭಾನುವಾರ ಕರ್ತವ್ಯ ಭವನ (ಲೋಕಸಭೆ)ದಲ್ಲಿ ಮಂಡಿಸಿದ 2026–27ನೇ  ಹಣಕಾಸು ವರ್ಷದ ಬಜೆಟ್‌ಗೆ ಜಿಲ್ಲೆಯಾದ್ಯಂತ ಪರ–ವಿರೋಧದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಾರ್ಚ್‌ಗೆ ಪೂರ್ಣಗೊಳ್ಳಲಿರುವ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ಮನಸ್ಸು ಮಾಡಿದರಷ್ಟೇ ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಅನುದಾನ ಲಭ್ಯವಾಗಲಿದೆ ಎಂಬ ಸುದ್ದಿ ಬಜೆಟ್‌ ಮುನ್ನ ದಿನವೇ ಹೊರಬಿದ್ದ ಕಾರಣ ಅನುದಾನದ ನಿರೀಕ್ಷೆ ಹುಸಿಯಾಗಿತ್ತು.

ADVERTISEMENT

ಪ್ರತಿ ಜಿಲ್ಲೆಗೊಂದು ಬಾಲಕಿಯರ ವಿದ್ಯಾರ್ಥಿ ನಿಲಯ ಪ್ರಾರಂಭದ ಘೋಷಣೆ ಹೊರತುಪಡಿಸಿದರೆ ಯಾವುದೇ ಯೋಜನೆ, ಅನುದಾನ ಜಿಲ್ಲೆಗೆ ಲಭ್ಯವಾಗಿಲ್ಲ. ಇದರಿಂದ ಕೇಂದ್ರ ಬಜೆಟ್ ಮೇಲೆ ಜಿಲ್ಲೆಯ ಜನರು ಇರಿಸಿದ್ದ ಭರವಸೆ ಹುಸಿಯಾಗಿದೆ. ಬಿಜೆಪಿ–ಜೆಡಿಎಸ್‌ ನಾಯಕರು ಬಜೆಟ್‌ ಸ್ವಾಗತಿಸಿದರೆ, ಕಾಂಗ್ರೆಸ್ ವಿರೋಧಿಸಿದೆ. ಆರ್ಥಿಕ ಚಿಂತಕರೂ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

‘ಉತ್ಪಾದನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ತೆರಿಗೆಯಲ್ಲಿ ಗಮನಾರ್ಹ ಸುಧಾರಣೆ ತರುವ ಮೂಲಕ ಆರ್ಥಿಕ ಬೆಳವಣಿಗೆಗೆ ವೇಗದ ಸ್ಪರ್ಶ ನೀಡಲು ಮುಂದಾಗಿರುವುದು ಬಜೆಟ್‌ನಲ್ಲಿ ಸ್ಪಷ್ಟವಾಗಿದೆ. ಆದರೆ ಕಲಿಕೆಯಿಂದ ಗಳಿಕೆಯತ್ತ ಸಾಗುವ ಮಾರ್ಗಗಳನ್ನು ಸೃಷ್ಟಿಸುವಲ್ಲಿ ವಿಫಲವಾಗಿದೆ. ಯುವಪೀಳಿಗೆ ಪಾಲಿಗೆ ಇದು ನಿರಾಶಾದಾಯಕವಾಗಿದೆ’ ಎಂದು ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಸಂಜೀವಕುಮಾರ ಪೋತೆ ವಿಶ್ಲೇಷಿಸಿದ್ದಾರೆ.

‘ಯುವ ಭಾರತಕ್ಕೆ ವೃತ್ತಿಪರ ಮತ್ತು ತಾಂತ್ರಿಕ ತರಬೇತಿ, ಕೌಶಲ ಯೋಜನೆಗಳು ಅತ್ಯಗತ್ಯವಾಗಿವೆ. ಅವುಗಳನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ. ಸ್ವದೇಶಿ ಉತ್ಪನ್ನಕ್ಕೆ ಹೆಚ್ಚಿನ ಆದ್ಯತೆ ನೀಡದೆ ವಿದೇಶಿ ಹೂಡಿಕೆಗೆ ವಿನಾಯತಿ ನೀಡಲಾಗಿದೆ. ಇದು ಸುಸ್ಥಿರ ಸಬಲೀಕರಣದ ಪರಿಣಾಮ ಉಂಟುಮಾಡುವ ಹೂಡಿಕೆಗಳನ್ನು ಕಡೆಗಣಿಸಿ ತಾತ್ಕಾಲಿಕ ಬೆಳವಣಿಗೆಗೆ ಇಂಬು ನೀಡುವ ಕಡೆ ಗಮನ ಕೇಂದ್ರೀಕರಿಸಿದೆ’ ಎಂದು ತಿಳಿಸಿದ್ದಾರೆ.

‘ಡಿಜಿಟಲ್‌ ವ್ಯಸನಕ್ಕೆ ಬಲಿಯಾಗುತ್ತಿರುವ ಯುವಕರನ್ನು ಉತ್ಪಾದನೆ ಕಡೆಗೆ ಸೆಳೆಯಲು ಬಜೆಟ್‌ ವಿಫಲವಾಗಿದೆ. ಕೃಷಿ, ಶಿಕ್ಷಣ, ಸಾರಿಗೆ ಸಂಪರ್ಕ ಮತ್ತು ಆಸ್ಪತ್ರೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ಸ್ವಾಗತಾರ್ಹ’ ಎಂದು ಹೇಳಿದ್ದಾರೆ.

‘ಚುನಾವಣೆ ನಡೆಯಲಿರುವ ಪಂಚ ರಾಜ್ಯಗಳಿಗೆ ಬಜೆಟ್‌ನಲ್ಲಿ ಬಂಪರ್ ಕೊಡುಗೆ ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಅನುದಾನ ವಿಚಾರದಲ್ಲಿ ದ್ರೋಹ ಬಗೆಯಲಾಗಿದೆ’ ಎಂದು ಆರ್ಥಿಕ ಚಿಂತಕ ಎಸ್‌.ಲಕ್ಷ್ಮಣ ಬೇಸರ ವ್ಯಕ್ತಪಡಿಸಿದ್ದಾರೆ.

‘ಕೇಂದ್ರದ ಬಜೆಟ್‌ ರಾಷ್ಟ್ರದ ಆರ್ಥಿಕ ಪ್ರಗತಿಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಒಂದು ಉತ್ತಮ ಹೆಜ್ಜೆ ಇಟ್ಟಿದೆ. ಕೆಲವು ವಸ್ತುಗಳಿಗೆ ತೆರಿಗೆ ವಿನಾಯಿತಿ ಮತ್ತು ಕಡಿತ ಘೋಷಿಸಲಾಗಿದೆ. ಆರ್ಥಿಕ ಶಿಸ್ತು ಕಾಪಾಡಲು ವಿಕಸಿತ ಭಾರತ ಸಂಕಲ್ಪಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ತಿಳಿಸಿದ್ದಾರೆ.

‘ಬಜೆಟ್‌ನಿಂದ ರಾಜ್ಯ ಹಾಗೂ ಜಿಲ್ಲೆಗೆ ಯಾವುದೇ ಅನುಕೂಲ ಆಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಘೋಷಿಸಿರುವ ₹ 5,300 ಕೋಟಿ ನೆರವನ್ನು ಬಿಡುಗಡೆ ಮಾಡಬೇಕು ಎನ್ನುವುದು ನಮ್ಮ ಆಗ್ರಹವಾಗಿತ್ತು. ಬಜೆಟ್‌ನಲ್ಲಿ ಇದರ ಪ್ರಸ್ತಾಪವೇ ಇಲ್ಲ. ರೈತ ಸಮುದಾಯಕ್ಕೆ ನೆರವಾಗುವಂತಹ ಒಂದು ಯೋಜನೆಯೂ ಇದರಲ್ಲಿ ಇಲ್ಲ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌ ಕಿಡಿಕಾರಿದ್ದಾರೆ.

‘ಭದ್ರಾ ಮೇಲ್ದಂಡೆ ಯೋಜನೆ ಅನುದಾನದ ವಿಚಾರವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಇದು ಸಂಸದ ಗೋವಿಂದ ಕಾರಜೋಳ ಅವರ ನಿರಾಸಕ್ತಿ ತೋರಿಸುತ್ತದೆ.  ಯೋಜನೆ ಬಗ್ಗೆ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ವಿಶೇಷ ಕಾಳಜಿ ಇದೆ. ಅವರ ಜತೆ ಸಮನ್ವಯತೆ ಸಾಧಿಸಿದ್ದರೆ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ನೆರವಾಗುತ್ತಿದ್ದರು. ಆದರೆ ಈ ಕಾರ್ಯವನ್ನು ಸಂಸದರು ಮಾಡದಿರುವ ಕಾರಣ ಜಿಲ್ಲೆಗೆ ಪುನಃ ಅನ್ಯಾಯವಾಗಿದೆ’ ಎಂದು ಜೆಡಿಎಸ್‌ ಜಿಲ್ಲಾ ಯುವ ಘಟಕದ ಅಧ್ಯಕ್ಷ ಓ. ಪ್ರತಾಪ್ ಜೋಗಿ ತಿಳಿಸಿದ್ದಾರೆ.

ಜನಾಭಿಪ್ರಾಯ

ರಾಜ್ಯದ ಜನಹಿತ ನಿರ್ಲಕ್ಷ್ಯ

2023ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ತಾವೇ ಘೋಷಿಸಿದ ₹ 5,300 ಕೋಟಿ ಅನುದಾನ ಬಿಡುಗಡೆ ಸಂಬಂಧ ಯಾವುದೇ ಪ್ರಸ್ತಾಪ ಇಲ್ಲದಿರುವುದು ಬೇಸರದ ಸಂಗತಿ. ಕೊಟ್ಟ ಮಾತು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ ರಾಜ್ಯದ ಜನರ ಹಿತ ನಿರ್ಲಕ್ಷ್ಯಿಸಿರುವುದು ಸರಿಯಲ್ಲ.
ಪಿ.ಕೋದಂಡರಾಮಯ್ಯ, ಅಧ್ಯಕ್ಷ, ಜಿಲ್ಲಾ ನೀರಾವರಿ ಹೋರಾಟ ಸಮಿತಿ

ರೈತರ ಆದಾಯ ಹೆಚ್ಚಿಸಲು ಒತ್ತು

ಕೇಂದ್ರ ಬಜೆಟ್‌ನಲ್ಲಿ ರೈತರ ಆದಾಯ ಹೆಚ್ಚಿಸಲು ಒತ್ತು ನೀಡಲಾಗಿದೆ. ತೆಂಗು ಪ್ರೋತ್ಸಾಹ ಯೋಜನೆಯಡಿ ತೆಂಗಿನ ಉತ್ಪಾದನೆ ಹೆಚ್ಚಳಕ್ಕೆ ಉತ್ತೇಜನ ಕೊಡಲಾಗಿದೆ. ಕ್ಯಾನ್ಸರ್‌ಗೆ ಸಂಬಂಧಿಸಿದ 17 ಔಷಧಿ ಮತ್ತು ಏಳು ಅಪರೂಪದ ಕಾಯಿಲೆಗಳ ಔಷಧಿಗಳ ಮೇಲಿನ ಸುಂಕ ವಿನಾಯಿತಿ ನೀಡುವ ಜತೆಗೆ ಬಂಡವಾಳ ವೆಚ್ಚವನ್ನು ಬಜೆಟ್‌ನಲ್ಲಿ ಹೆಚ್ಚಿಸಲಾಗಿದೆ.
ಗೋವಿಂದ ಕಾರಜೋಳ, ಸಂಸದ

ವಿಕಸಿತ ಭಾರತಕ್ಕೆ ಬುನಾದಿ

ವಿಕಸಿತ ಭಾರತಕ್ಕೆ ಬುನಾದಿ ಹಾಕಲಾಗಿದೆ. ಬರುವ ದಶಕಗಳಲ್ಲಿ ಎಐ ಸೇರಿದಂತೆ ನೂತನ ತಾಂತ್ರಿಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ತೆಂಗು, ಗೋಡಂಬಿ ಬೆಳಗಾರರಿಗೆ ಅನುಕೂಲವಾಗಿದೆ. ಜವಳಿ ವಲಯಕ್ಕೆ ಹೆಚ್ಚು ಆದ್ಯತೆ ನೀಡಿದ್ದು, ಇದರಿಂದ ರಾಜ್ಯಕ್ಕೆ ಹೆಚ್ಚು ಸಹಾಯವಾಗಲಿದೆ.
ಎಂ.ಆದರ್ಶ, ಯುವ ಚಿಂತಕ

ಮಹಿಳಾ ಸಬಲೀಕರಣಕ್ಕೆ ಆದ್ಯತೆ

ಬಜೆಟ್‌ನಲ್ಲಿ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಮುಖ ಕೈಗಾರಿಕಾ ಮತ್ತು ಲಾಜಿಸ್ಟಿಕ್‌ ಕಾರಿಡಾರ್‌ಗಳ ಸುತ್ತಮುತ್ತ 5 ವಿಶ್ವವಿದ್ಯಾಲಯ ಪಟ್ಟಣ ನಿರ್ಮಾಣದ ಪ್ರಸ್ತಾವನೆ ಸ್ವಾಗತಾರ್ಹ. ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯ ಸ್ಥಾಪನೆ ಮಹಿಳಾ ಸಬಲೀಕರಣಕ್ಕೆ ಬಲ ನೀಡಿದೆ.
ಎ.ಆಶಾ, ಅರ್ಥಶಾಸ್ತ್ರ ಸಂಶೋಧನಾ ವಿದ್ಯಾರ್ಥಿನಿ

ಭವಿಷ್ಯದ ಭಾರತಕ್ಕೆ ನೆರವು

ಕೇಂದ್ರದ ಬಜೆಟ್‌ನಲ್ಲಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ಹಾಗೂ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರವಾಸೋದ್ಯಮ ಯೋಜನೆಗಳನ್ನು ಘೋಷಿಸಿರುವುದು ಭವಿಷ್ಯದ ಭಾರತಕ್ಕೆ ನೆರವಾಗಲಿದೆ. ಪಶ್ಚಿಮ ಘಟ್ಟದ ಉಳಿವಿನ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಕರಾವಳಿ ಚಾರಣದ ಯೋಜನೆ ರೂಪಿಸಿರುವುದು ಸ್ವಾಗತಾರ್ಹ.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠ

ನಿರಾಶಾದಾಯಕ ಬಜೆಟ್

ಈ ಬಾರಿಯ ಕೇಂದ್ರದ ಬಜೆಟ್ ರಾಜ್ಯದ ಪಾಲಿಗೆ ನಿರಾಶಾದಾಯಕವಾಗಿದ್ದು, ಚುನಾವಣೆ ಹತ್ತಿರವಿರುವ ರಾಜ್ಯಗಳಿಗೆ ಬಂಪರ್ ಕೊಡುಗೆ ನೀಡಲಾಗಿದೆ. ಕೃಷಿ ಮತ್ತು ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡದೆ ರೈತರನ್ನು ವಂಚಿಸಲಾಗಿದೆ.
ಎಸ್.ಆರ್. ರಘುವೀರ್, ಯುವ ಕೃಷಿಕ, ವಾಣಿವಿಲಾಸಪುರ, ಹಿರಿಯೂರು

ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು ನೀಡಿಲ್ಲ

ಈ ಬಾರಿ ವಿಕಸಿತ ಭಾರತದ ಹೆಸರಲ್ಲಿ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ವಿಶೇಷವಾಗಿ ಉದ್ಯೋಗ ಸೃಷ್ಟಿ ಮತ್ತು ಯುವಜನಾಂಗದ ಸಬಲೀಕರಣಕ್ಕೆ ಒತ್ತುಕೊಡಲು ಕೊನೆಗೂ ಪ್ರಯತ್ನಿಸಿದಂತಿದೆ. ಭದ್ರಾ ಮೇಲ್ದಂಡೆ ಯೋಜನೆ ಮುಗಿಸಲು ವಿಶೇಷ ಪ್ಯಾಕೇಜ್ ಕೊಡದಿರುವುದಕ್ಕೆ ಬೇಸರವಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ದಿಕ್ಕೆಟ್ಟಿರುವ ಮಧ್ಯಮ ವರ್ಗದವರ ಆರ್ಥಿಕ ಸ್ಥಿತಿ ಸುಧಾರಿಸಲು ಇನ್ನೂ ಉತ್ತಮವಾದ ಕೊಡುಗೆಗಳನ್ನು ನೀಡಬಹುದಿತ್ತು
ಮಧುಕುಮಾರ, ಉಪನ್ಯಾಸಕರು, ಬಳ್ಳೆಕೆರೆ

ಗಾಂಧಿ ಸ್ವರಾಜ್ಯ ಕಲ್ಪನೆ ಇಲ್ಲ

ದೇಶದ ಹಳ್ಳಿಗಳಲ್ಲಿ ಬದುಕುತ್ತಿರುವ ಕೋಟ್ಯಂತರ ಜನರ ಬದುಕಿಗೆ ಹಣಕಾಸು ಸಚಿವೆ ಮಂಡಿಸಿದ ಬಜೆಟ್‌ ನೆರವಾಗಿಲ್ಲ. ಹಳ್ಳಿಗರ ಬದುಕಿಗೆ ಶಕ್ತಿ ತುಂಬುವ ಯೋಜನೆಗಳು ಇದರಲ್ಲಿ ಕಾಣಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಲವು ವರ್ಷಗಳ ಹಿಂದೆ ಘೋಷಣೆ ಮಾಡಿದ್ದ ಜಲಜೀವನ್‌ ಮಿಷನ್‌ ಯೋಜನೆಯ ಗುಂಡಿಗಳನ್ನೂ ಮುಚ್ಚಲಾಗಿಲ್ಲ. ಅವುಗಳಲ್ಲಿ ನೀರು ಬರುವುದು ಇನ್ನೂ ಕನಸಿನ ಮಾತೇ ಸರಿ. ಬಹು ನಿರೀಕ್ಷೆಯ ಭದ್ರಾ ಮೇಲ್ಡಂಡೆ ಯೋಜನೆಗೆ ಕೇಂದ್ರ ಸರ್ಕಾರ ನೆರವು ನೀಡುವ ಮಾತೇ ಆಡದಿರುವುದು ವಿಷಾದನೀಯ.
ನಾಗರಾಜ ಬೆಲ್ಲದ,ಗ್ರಾಮ ಪಂಚಾಯಿತಿ ಸದಸ್ಯ, ಸಿರಿಗೆರೆ

ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಸ್ವಾಗತಾರ್ಹ

ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಹಣಕಾಸು‌ ಸಚಿವೆ ನಿರ್ಮಲ ಸೀತಾರಾಮನ್ ₹ 1,09,029 ಕೋಟಿ ಅನುದಾನ ಮೀಸಲಿಟ್ಟಿರುವುದು ಸ್ವಾಗತಾರ್ಹ. ಈ ಅನುದಾನವನ್ನು ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಬಳಸಿಕೊಂಡು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕೌಶಲಯುಕ್ತ ಶಿಕ್ಷಣ ನೀಡುವ ನೀತಿಗಳನ್ನು ಅಳವಡಿಸಿಕೊಂಡರೆ ಉತ್ತಮ. 
ಟಿ.ರೂಪ, ಮುಖ್ಯಶಿಕ್ಷಕಿ,ನಾಯಕನಹಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.