ADVERTISEMENT

ಚಿತ್ರದುರ್ಗ: ಚುನಾವಣಾ ಕಣದಲ್ಲಿ ಮೂವರು ಹುರಿಯಾಳು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 16:00 IST
Last Updated 26 ನವೆಂಬರ್ 2021, 16:00 IST
ಕವಿತಾ ಎಸ್‌.ಮನ್ನಿಕೇರಿ
ಕವಿತಾ ಎಸ್‌.ಮನ್ನಿಕೇರಿ   

ಚಿತ್ರದುರ್ಗ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯ ಚಿತ್ರದುರ್ಗ–ದಾವಣಗೆರೆ ಕ್ಷೇತ್ರದ ಕಣದಲ್ಲಿ ಅಂತಿಮವಾಗಿ ಮೂವರು ಅಭ್ಯರ್ಥಿಗಳಿದ್ದಾರೆ. ನಾಮಪತ್ರ ಹಿಂಪಡೆಯುವ ಅವಧಿ ಶುಕ್ರವಾರ ಮುಕ್ತಾಯವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.

‘ಕ್ಷೇತ್ರಕ್ಕೆ ನಾಲ್ವರಿಂದ ಏಳು ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಒಂದು ನಾಮಪತ್ರ ತಿರಸ್ಕೃತಗೊಂಡಿತ್ತು. ಉಳಿದ ಯಾರೊಬ್ಬರು ನಾಮಪತ್ರವನ್ನು ಹಿಂಪಡೆದಿಲ್ಲ. ಬಿಜೆಪಿಯಿಂದ ಕೆ.ಎಸ್‌.ನವೀನ್‌, ಕಾಂಗ್ರೆಸ್‌ನಿಂದ ಬಿ.ಸೋಮಶೇಖರ ಹಾಗೂ ಪಕ್ಷೇತರ ಅಭ್ಯರ್ಥಿಯಗಿ ಹನುಮಂತಪ್ಪ ಕಣದಲ್ಲಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಹರಿಹರ ತಾಲ್ಲೂಕಿನಲ್ಲಿ 24 ಮತಗಟ್ಟೆ, ದಾವಣಗೆರೆ 42, ಜಗಳೂರು 23 ಮತಗಟ್ಟೆ ಸ್ಥಾಪಿಸಲಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 17 ಮತಗಟ್ಟೆ, ಚಳ್ಳಕೆರೆ 41, ಚಿತ್ರದುರ್ಗ 39, ಹೊಳಲ್ಕೆರೆ 30, ಹಿರಿಯೂರು 34 ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ 34 ಮತಗಟ್ಟೆ ಸ್ಥಾಪಿಸಲಾಗಿದೆ. 2,384 ಪುರುಷ ಹಾಗೂ 2,689 ಮಹಿಳಾ ಮತದಾರರು ಸೇರಿದಂತೆ 5,073 ಮತದಾರರು ಇದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ತಾಲ್ಲೂಕು ಕಚೇರಿಗಳಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ನಡೆಯಲಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಮಾತ್ರ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ. 38 ಸೂಕ್ಷ್ಮ ಮತಟ್ಟೆ, 61 ಅತಿ ಸೂಕ್ಷ್ಮ ಮತಗಟ್ಟೆಗಳು ಹಾಗೂ 96 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮತದಾನಕ್ಕೆ 452 ಸಿಬ್ಬಂದಿ ನೇಮಕ ಮಾಡಲಾಗಿದೆ. ಅಕ್ರಮ ಮದ್ಯ ಮಾರಾಟದ ಹತ್ತು ಪ್ರಕರಣಗಳು ದಾಖಲಾಗಿವೆ.

ಹೆಚ್ಚುವರಿ ಜಿಲ್ಲಾಧಿಕಾರಿ ಪರಶುರಾಮ್ ಶಿನ್ನಾಳ್‍ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.