ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಬುಟ್ಟ ಗಂಡಭೇರುಂಡ ಮತ್ತು ನವಿಲು ಚಿತ್ರಗಳಿರುವ ಮೊಳಕಾಲ್ಮುರು ರೇಷ್ಮೆಸೀರೆ
ಮೊಳಕಾಲ್ಮುರು: ಅನಾದಿ ಕಾಲದಿಂದಲೂ ಗುಣಮಟ್ಟ ಹಾಗೂ ಉತ್ತಮ ನೇಯ್ಗೆಗೆ ಖ್ಯಾತಿಯಾಗಿರುವ ಮೊಳಕಾಲ್ಮುರು ರೇಷ್ಮೆಸೀರೆಯ ನೇಕಾರರೊಬ್ಬರು 2024-25ನೇ ಸಾಲಿನ ರಾಜ್ಯಮಟ್ಟದ ‘ಉತ್ತಮ ನೇಕಾರ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇಲ್ಲಿನ ಕೆಎಚ್‌ಡಿಸಿ ಕಾಲೊನಿಯ ಡಿ.ಎಸ್. ಸುರೇಶ್ ರಾಜ್ಯಮಟ್ಟದ ದ್ವಿತೀಯ ಸ್ಥಾನದ ಪ್ರಶಸ್ತಿಗೆ ಆಯ್ಕೆಯಾಗಿರುವ ನೇಕಾರ. ಕೈಮಗ್ಗ ಮತ್ತು ಜವಳಿ ಇಲಾಖೆಯು ಪ್ರತಿವರ್ಷ ನೇಕಾರರ ದಿನಾಚರಣೆ ಅಂಗವಾಗಿ ಪ್ರಶಸ್ತಿ ನೀಡುತ್ತಾ ಬಂದಿದೆ.
ಪ್ರಶಸ್ತಿಗೆ ಪಾತ್ರವಾಗಿರುವ ರೇಷ್ಮೆಸೀರೆಯಲ್ಲಿ ರಾಜ್ಯಲಾಂಛನ ಗಂಡಭೇರುಂಡವಿದ್ದು ಸುತ್ತಲೂ ಬುಟ್ಟುಗಳನ್ನು ನೇಯ್ಕೆ ಮಾಡಲಾಗಿದೆ. ಅಲ್ಲಲ್ಲಿ ಮೊಳಕಾಲ್ಮುರಿನ ಸಾಂಪ್ರದಾಯಿಕ ಚಿತ್ರಗಳಾದ ವಂಕಿ, ರುದ್ರಾಕ್ಷಿ ಚಿತ್ರಗಳಿವೆ. ಸೆರಗಿನಲ್ಲಿ ಸಾಲಾಗಿ ವಿವಿಧ ಬಣ್ಣಗಳಲ್ಲಿ ನವಿಲುಗಳನ್ನು ನೇಯ್ಗೆ ಮಾಡಲಾಗಿದೆ. ಜರತಾರಿಯನ್ನು ಇದಕ್ಕೆ ಬಳಕೆ ಮಾಡದಿರುವುದು ವಿಶೇಷ.
ವಿನ್ಯಾಸ ಮಾಡಲು 3 ತಿಂಗಳು, ನೇಯ್ಗೆ ಮಾಡಲು ಒಂದು ತಿಂಗಳು ಮತ್ತು ಅಂದಾಜು ₹ 50,000 ವೆಚ್ಚ ತಗುಲಿದೆ. 2021-22ರಲ್ಲಿ ಸುರೇಶ್ ಅವರ ಸಹೋದರ ಡಿ.ಎಸ್. ಮಲ್ಲಿಕಾರ್ಜುನ ಅವರು ನೇಯ್ಕೆ ಮಾಡಿದ್ದ ‘ರೇಷ್ಮೆಸೀರೆಯಲ್ಲಿ ಅರಳಿದ ರೈತನ ಬದುಕು’ ರೇಷ್ಮೆಸೀರೆಗೆ ರಾಜ್ಯಮಟ್ಟದ ಪ್ರಥಮ ಬಹುಮಾನ ಲಭಿಸಿತ್ತು.
ಆ. 7ರಂದು ಬೆಂಗಳೂರಿನಲ್ಲಿ ನಡೆಯರುವ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಜವಳಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.