ಮೊಳಕಾಲ್ಮುರು: ಹದ ಮಳೆ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಬಿತ್ತನೆ ಪ್ರಮಾಣ ಕುಂಠಿತವಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಪ್ರಸಕ್ತ ವರ್ಷ ಶೇ 50ರಷ್ಟು ಬಿತ್ತನೆಯಾಗಿದೆ ಎನ್ನಲಾಗಿದೆ. ಜುಲೈ ಮೊದಲ ವಾರದಿಂದ ಬಿತ್ತನೆ ಆರಂಭವಾಗಿ, ತಿಂಗಳಾಂತ್ಯಕ್ಕೆ ಕೊನೆಯಾಗಬೇಕಿತ್ತು. ಆದರೆ ಒಮ್ಮೆಯೂ ಹದ ಮಳೆ ಬಾರದ ಪರಿಣಾಮ ಬಿತ್ತನೆ ಪ್ರಗತಿಯಾಗಿಲ್ಲ. ಅವಧಿ ಮಗಿಯುತ್ತದೆ ಎಂದು ಕೆಲವಡೆ ರೈತರು ತುಂತುರು ಮಳೆಗೇ ಬಿತ್ತನೆ ಮಾಡಿದ್ದಾರೆ.
ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿ ಶೇಂಗಾ ಗುರುತಿಸಿಕೊಂಡಿದೆ. ಒಟ್ಟು 28,000 ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ 18,000ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗುತ್ತದೆ. ನಂತರದ ಸ್ಥಾನದಲ್ಲಿ ತೊಗರಿ, ಹತ್ತಿ, ಮೆಕ್ಕೆಜೋಳ, ಸಜ್ಜೆ ಬಿತ್ತನೆ ಮಾಡಲಾಗುವುದು. ಈ ಬಾರಿ ತೊಗರಿ ಹೆಚ್ಚು ಬಿತ್ತನೆಯಾಗುವ ಸಾಧ್ಯತೆಯಿದೆ.
ಶೇಂಗಾ ಬಿತ್ತನೆಗೆ ಜುಲೈ ಸೂಕ್ತ ಸಮಯವಾಗಿದೆ. ಕಳೆದ ವರ್ಷ ಜೂನ್ ಅಂತ್ಯಕ್ಕೆ ಬಿತ್ತನೆ ಪೂರ್ಣವಾಗಿತ್ತು. ತಡವಾಗಿ ಬಿತ್ತನೆ ಮಾಡಿದರೆ ಇಳುವರಿ ಹಾಗೂ ಬಳ್ಳಿ ಬೆಳವಣಿಗೆ ಮೇಲೆ ಹವಾಮಾನ ದುಷ್ಪರಿಣಾಮ ಬೀರುತ್ತದೆ ಎನ್ನುವುದು ರೈತರ ಅಭಿಪ್ರಾಯ.
‘ಮೊಳಕಾಲ್ಮುರು ಕಸಬಾ ಹೋಬಳಿಯ ಬಿ.ಜಿ.ಕೆರೆ, ಮಾರಮ್ಮನಹಳ್ಳಿ, ಮೊಗಲಹಳ್ಳಿ, ಕೊಂಡ್ಲಹಳ್ಳಿ, ಕೋನಸಾಗರ, ನೇರ್ಲಹಳ್ಳಿ ಸುತ್ತಮುತ್ತ ಉತ್ತಮ ಬಿತ್ತನೆಯಾಗುತ್ತಿದೆ. ವಾರದಿಂದ ಬಿತ್ತನೆಗೆ ಚುರುಕು ಸಿಕ್ಕಿದೆ. ದೇವಸಮುದ್ರ ಹೋಬಳಿಯಲ್ಲಿ ನಿರೀಕ್ಷೆಯಷ್ಟು ಬಿತ್ತನೆಯಾಗುತ್ತಿಲ್ಲ. ಅಲ್ಲಿ ಹದ ಮಳೆ ಕೊರತೆ ಕಾಡುತ್ತಿದೆ. ಆಗಸ್ಟ್ 10ರವರೆಗೂ ಶೇಂಗಾ ಬಿತ್ತನೆ ಮಾಡಬಹುದಾಗಿದೆ. ವಾರದಿಂದ ಆಗಾಗ ಜಡಿ ಮಳೆ ಆಗುತ್ತಿದ್ದು, ಬಿತ್ತನೆಯಾಗುವ ನಿರೀಕ್ಷೆಯಿದೆ’ ಎಂದು ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಎನ್.ವಿ. ಪ್ರಕಾಶ್ ಹೇಳಿದರು.
‘ತಾಲ್ಲೂಕಿನಲ್ಲಿ ಯೂರಿಯಾ ಸೇರಿದಂತೆ ಯಾವುದೇ ರಸಗೊಬ್ಬರ ಕೊರತೆಯಾದ ವರದಿಯಾಗಿಲ್ಲ. ಯೂರಿಯಾ ಅಗತ್ಯತೆ ಬಗ್ಗೆ ಮಾರಾಟಗಾರರು, ಎಫ್‌ಪಿಒಗಳು ಮನವಿ ಸಲ್ಲಿಸಿದಲ್ಲಿ ತರಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ. ಮೇಲು ಗೊಬ್ಬರವಾಗಿ ಯೂರಿಯಾ ಹಾಕುವ ಬದಲು ಇಪ್ಕೊ ಯೂರಿಯಾ ದ್ರಾವಣ ಸಿಂಪರಣೆ ಮಾಡುವುದು ಹೆಚ್ಚು ಸೂಕ್ತ ಮತ್ತು ಕಡಿಮೆ ವೆಚ್ಚವಾಗಲಿದೆ’ ಎಂದು ಹೇಳಿದರು.
‘ಫಸಲ್ ಬಿಮಾ ವಿಮೆ ನೋಂದಣಿಗೆ ಜುಲೈ 31 ಕೊನೆ ದಿನ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ವಿಮೆ ಪಾವತಿಗೂ ರೈತರು ನಿರಾಸಕ್ತಿ ತೋರಿದ್ದಾರೆ. ಈ ವರ್ಷ 3,806 ರೈತರು ನೋಂದಣಿ ಮಾಡಿದ್ದಾರೆ. ಕಳೆದ ವರ್ಷ 6,032 ಜನರು ನೋಂದಣಿ ಮಾಡಿಸಿದ್ದರು. ಸತತ ನಷ್ಟಕ್ಕೀಡಾದರೂ ವಿಮೆ ತಾಲ್ಲೂಕಿಗೆ ಬಾರದಿರವುದು ನಿರಾಸಕ್ತಿಗೆ ಕಾರಣ’ ಎಂದು ರೈತ ಸಂಘದ ಮುಖಂಡ ರವಿಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.