ADVERTISEMENT

ಮೊಳಕಾಲ್ಮುರು | ಚಿಂತೆಯ ಆಗರವಾದ ವಾರದ ಸಂತೆ!: ಪ್ರಾಣಭೀತಿಯಲ್ಲಿ ವಹಿವಾಟು

ಕೊಂಡ್ಲಹಳ್ಳಿ ಜಯಪ್ರಕಾಶ
Published 4 ಜನವರಿ 2026, 7:26 IST
Last Updated 4 ಜನವರಿ 2026, 7:26 IST
ಮೊಳಕಾಲ್ಮುರಿನಲ್ಲಿ ಹಾದು ಹೋಗಿರುವ ಹೆದ್ದಾರಿ ಬದಿಯಲ್ಲಿ ವಾರದ ಸಂತೆ ನಡೆಯುತ್ತಿರುವ ದೃಶ್ಯ.
ಮೊಳಕಾಲ್ಮುರಿನಲ್ಲಿ ಹಾದು ಹೋಗಿರುವ ಹೆದ್ದಾರಿ ಬದಿಯಲ್ಲಿ ವಾರದ ಸಂತೆ ನಡೆಯುತ್ತಿರುವ ದೃಶ್ಯ.   

ಮೊಳಕಾಲ್ಮುರು: ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ಹಾನಗಲ್‌– ರಾಯದುರ್ಗ ಮುಖ್ಯರಸ್ತೆ ಬದಿಯಲ್ಲಿ ನಡೆಯುತ್ತಿರುವ ವಾರದ ಸಂತೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ನಿರ್ಲಕ್ಷ್ಯ ಮಾಡುತ್ತಿರುವ ಕಾರಣ ಗ್ರಾಹಕರು, ವ್ಯಾಪಾರಿಗಳು ಪ್ರಾಣ ಭೀತಿಯಲ್ಲಿ ವಹಿವಾಟು ನಡೆಸುವ ಅನಿವಾರ್ಯತೆ ಎದುರಾಗಿದೆ.

ಹಲವು ವರ್ಷಗಳಿಂದ ಮುಖ್ಯರಸ್ತೆ ಬದಿಯಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ಪ್ರತಿಭಟನೆಗಳಿಗೆ ಮಣಿದು 2 ವರ್ಷದ ಹಿಂದೆ ಕೃಷಿ ಇಲಾಖೆ ಮುಂಭಾದಲ್ಲಿರುವ ಸ್ಥಳಕ್ಕೆ ಏಕಾಏಕಿ ಸ್ಥಳಾಂತರ ಮಾಡಲಾಯಿತು. ಆದರೆ, ಕೆಲ ತಿಂಗಳ ಹಿಂದೆ ಈ ಸ್ಥಳ ನಮಗೆ ಸೇರಿದ್ದು ಎಂದು ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಿ ತಡೆಯಾಜ್ಞೆ ತಂದಿರುವ ಪರಿಣಾಮ ಸಂತೆ ಮರಳಿ ರಸ್ತೆಬದಿಗೆ ಬಂದಿತು.

‘40ಕ್ಕೂ ಹೆಚ್ಚು ಗ್ರಾಮಗಳ ಜನರು ಪ್ರತಿ ಬುಧವಾರ ನಡೆಯುವ ವಾರದ ಸಂತೆಯನ್ನು ಅವಲಂಬಿಸಿದ್ದಾರೆ. ನೂರಾರು ವ್ಯಾಪಾರಿಗಳು ದೂರದಿಂದ ಬರುತ್ತಾರೆ. ಮುಖ್ಯರಸ್ತೆಯಲ್ಲಿ ಪಟ್ಟಣ ಪ್ರವೇಶಿಸುವ ನೂರಾರು ವಾಹನಗಳು, ಆಂಧ್ರಪ್ರದೇಶಕ್ಕೆ ಹೊಗುವ ಎಲ್ಲ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಬೇಕಿದೆ. ಇದರಿಂದ ಸಂತೆ ನಡೆಯುವ ದಿನ ಜೀವ ಕೈಯಲ್ಲಿ ಇಟ್ಟುಕೊಂಡು ವಹಿವಾಟು ಮಾಡಬೇಕಿದೆ. ಯಾವುದಾದರೂ ದೊಡ್ಡ ವಾಹನ ಅಪಘಾತ ಮಾಡಿದಲ್ಲಿ ಆಗಬಹುದಾದ ಅನಾಹುತ ಪ್ರಮಾಣ ಊಹಿಸಲೂ ಅಸಾಧ್ಯ’ ಎನ್ನುತ್ತಾರೆ ವ್ಯಾಪಾರಿ ಅಹಮದ್.‌

ADVERTISEMENT

‘ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗುವ ಸಂತೆ ಸಂಜೆ 7ಕ್ಕೆ ಮುಗಿಯುತ್ತದೆ. ಸಂತೆಯನ್ನು ಸುರಕ್ಷತೆ ಇರುವಲ್ಲಿಗೆ ಸ್ಥಳಾಂತರಿಸುವ ಬದಲು ಸ್ಥಳದಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಿಸಿ ನಿಭಾಯಿಸಲಾಗುತ್ತಿದೆ. ಸಂಜೆ ವೇಳೆ ರಸ್ತೆಯ ಎರಡೂ ಬದಿ ಪೊಲೀಸರು ನಿಂತು ಸರದಿಯಲ್ಲಿ ವಾಹನ ಬಿಡುತ್ತಾರೆ. ಇದು ಸಂಭವನೀಯ ಅಪಾಯ ತಪ್ಪಿಸದು. ಆದರೂ ಸಂಬಂಧಿಸಿದ ಅಧಿಕಾರಿಗಳು ತಮಗೆ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ’ ಎಂದು ಸ್ಥಳೀಯರಾದ ರಾಧಾಕೃಷ್ಣ ದೂರಿದ್ದಾರೆ.

ವಾರದ ಸಂತೆ ದಿನ ಸ್ಥಳಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಸಮಸ್ಯೆಯ ತೀವ್ರತೆ ಅರಿಯಬೇಕು. ಇಲ್ಲವಾದಲ್ಲಿ ಮುಂದಿನ ಅನಾಹುತಕ್ಕೆ ಅವರೇ ಹೊಣೆಯಾಗಲಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.

ಸಂತೆ ಸ್ಥಳಾಂತರಕ್ಕೆ ಆಗ್ರಹಿಸಿ ಶನಿವಾರ ರೈತಸಂಘ ಮತ್ತು ಹಸಿರುಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.
ವಾರದ ಸಂತೆ ಸಮಸ್ಯೆ ಗಮನಕ್ಕೆ ಬಂದಿದ್ದು ಸ್ಥಳಾಂತರಕ್ಕೆ ತಕ್ಷಣವೇ ಶಾಸಕ ಎನ್.ವೈ. ಗೋಪಾಲಕೃಷ್ಣ ಜತೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು
  ಟಿ. ಜಗದೀಶ್‌ ತಹಶೀಲ್ದಾರ್‌ ಮೊಳಕಾಲ್ಮುರು
ಸಾಂಕೇತಿಕ ಸಂತೆ ನಡೆಸಲು ನಿರ್ಧಾರ
ವಾರದ ಸಂತೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಜ. 7ರಂದು ಇಲ್ಲಿನ ಶಾಸಕರ ಭವನದ ಎದುರು ವಾರದ ಸಂತೆಯನ್ನು ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾಧಿಕಾರಿ ಮತ್ತು ಶಾಸಕರು ಸಂತೆ ದಿನ ಸಂಜೆ ಸ್ಥಳಕ್ಕೆ ಬಂದು ಸಮಸ್ಯೆ ವೀಕ್ಷಿಸಬೇಕು. ಇಲ್ಲವಾದಲ್ಲಿ ಮುಂದಿನ ಅನಾಹುತಕ್ಕೆ ಅವರನ್ನೇ ಹೊಣೆ ಮಾಡಲಾಗುವುದು ಎಂದು ಶನಿವಾರ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು ಸ್ಥಳ ಪರಿಶೀಲಿಸಿ: ಸಂತೆ ಸ್ಥಳಾಂತರಕ್ಕೆ ಕೋಟೆ ಬಡಾವಣೆಯಲ್ಲಿ ಸ್ಥಳವಿದೆ. ಜತೆಗೆ ರಾಯದುರ್ಗ ರಸ್ತೆಯ ಶಾದಿಮಹಲ್‌ ಮುಂಭಾಗದಲ್ಲಿ ಪಟ್ಟಣ ಪಂಚಾಯಿತಿಗೆ ಸೇರಿದ ವಿಶಾಲ ಜಾಗವಿದೆ. ಅಲ್ಲಿಗೆ ಸ್ಥಳಾಂತರ ಮಾಡಿ ಮೈದಾನ ಅಭಿವೃದ್ಧಿ ಮಾಡಿದಲ್ಲಿ ಪಟ್ಟಣ ವಿಸ್ತರಣೆಯಾಗಲು ಅನುವು ಆಗಲಿದೆ. ಈ ಬಗ್ಗೆ ಪರಿಶೀಲನೆ ಮಾಡಬಹುದು ಎಂದು ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.