ADVERTISEMENT

ಹೊಸದುರ್ಗ: ಹದ ಮಳೆಗೆ ಮಾಗಿ ಉಳುಮೆ ಶುರು

ಕೃಷಿ ಚಟುವಟಿಕೆಗೆ ಪೂರಕ ಸೌಲಭ್ಯ ನೀಡುವಂತೆ ರೈತರ ಒತ್ತಾಯ

ಎಸ್.ಸುರೇಶ್ ನೀರಗುಂದ
Published 10 ಏಪ್ರಿಲ್ 2020, 20:00 IST
Last Updated 10 ಏಪ್ರಿಲ್ 2020, 20:00 IST
ಹೊಸದುರ್ಗ ತಾಲ್ಲೂಕಿನ ನೀರಗುಂದ ಗ್ರಾಮದ ರೈತ ಭೈರಪ್ಪ ಗುರುವಾರ ಮಾಗಿ ಉಳುಮೆ ಮಾಡುತ್ತಿರುವುದು.
ಹೊಸದುರ್ಗ ತಾಲ್ಲೂಕಿನ ನೀರಗುಂದ ಗ್ರಾಮದ ರೈತ ಭೈರಪ್ಪ ಗುರುವಾರ ಮಾಗಿ ಉಳುಮೆ ಮಾಡುತ್ತಿರುವುದು.   

ಹೊಸದುರ್ಗ: ತಾಲ್ಲೂಕಿನ ಹಲವೆಡೆ ಕಳೆದೆರಡು ದಿನ ಬಿರುಗಾಳಿ, ಗುಡುಗು, ಆಲಿಕಲ್ಲು ಸಹಿತ ಸುರಿದ ಬಿರುಸಿನ ಮಳೆಗೆ ಜಮೀನು ಹದವಾಗಿದ್ದು, ರೈತರು ಮಾಗಿ ಉಳುಮೆ ಆರಂಭಿಸಿದ್ದಾರೆ.

ಈ ಬಾರಿ ಯುಗಾದಿ ಹಬ್ಬ ಕಳೆದು 13 ದಿನಗಳ ನಂತರದಲ್ಲಿ ಸಕಾಲಕ್ಕೆ ಪೂರ್ವ ಮುಂಗಾರು ಮಳೆ ಪ್ರವೇಶ ಮಾಡಿರುವುದು ಅನ್ನದಾತರ ಮೊಗದಲ್ಲಿ ಸಂತಸವನ್ನುಂಟು ಮಾಡಿದೆ. ವರ್ಷಧಾರೆ ಆಗುತ್ತಿದ್ದಂತೆ ಜಮೀನು ಉಳುಮೆಗೆ ಬೇಕಿರುವ ನೇಗಿಲು, ಕಂಟ್ರಿ, ಕುಂಟೆಯಂತಹ ಕೃಷಿ ಸಾಧನ ಸಲಕರಣೆಗಳನ್ನು ಸಜ್ಜುಗೊಳಿಸಿಕೊಂಡು ಮಾಗಿ ಉಳುಮೆ ಶುರು ಮಾಡಿದ್ದಾರೆ.

ಚೈತ್ರ ಮಾಸದ ಏಪ್ರಿಲ್‌ ಆರಂಭ ಮಾಗಿ ಉಳುಮೆಗೆ ಸಕಾಲ. ಕೃಷಿಗೆ ಮಾಗಿ ಉಳುಮೆ ಅವಶ್ಯಕ. ಈ ಕಾರ್ಯದಿಂದ ಹೊಲದಲ್ಲಿರುವ ಕೂಳೆ, ಒಣ ಹುಲ್ಲು, ಕಸ–ಕಡ್ಡಿ ಮಣ್ಣಿನಲ್ಲಿ ಮಿಶ್ರಣವಾಗಿ ಗೊಬ್ಬರವಾಗುತ್ತದೆ. ಮಣ್ಣಿನ ಫಲವತ್ತತೆ ಹಾಗೂ ಆರೋಗ್ಯ, ತೇವಾಂಶದ ಗುಣಮಟ್ಟ ಹೆಚ್ಚಿಸಬಹುದು. ಮುಂಗಾರು ಹಂಗಾಮಿನ ಬೆಳೆಯಲ್ಲಿ ಹೆಚ್ಚು ಕಳೆ ಆಗುವುದಿಲ್ಲ. ಉತ್ತಮ ಇಳುವರಿಯ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ನೀರಗುಂದ ರೈತ ಭೈರಪ್ಪ.

ADVERTISEMENT

ಹಿಂಗಾರು ಹಂಗಾಮಿನಲ್ಲಿ ಕಟಾವು ಮಾಡಿ ಬಿಟ್ಟಿದ್ದ ರಾಗಿ, ಸಾವೆ, ಹುರುಳಿ, ಮೆಕ್ಕೆಜೋಳ, ಹತ್ತಿ ಬೆಳೆಯ ಕೂಳೆ ಜಮೀನಿನಲ್ಲಿ ತೇವಾಂಶ ಇಲ್ಲದ ಕಾರಣ ರೈತರು ಉಳುಮೆ ಮಾಡಿರಲಿಲ್ಲ. ಈಗ ಮಂಗಾರು ಪೂರ್ವ ಮಳೆಯಿಂದ ಹದವಾಗಿರುವ ಜಮೀನನ್ನು ಎತ್ತಿನ ನೇಗಿಲು, ಕಂಟ್ರಿ ಹಾಗೂ ಟ್ರ್ಯಾಕ್ಟರ್‌ನಲ್ಲಿ ಹಸನು ಮಾಡುತ್ತಿದ್ದಾರೆ. ಭೂಮಿಯಲ್ಲಿ ಹದ ಇದ್ದಾಗ ಉಳುಮೆ ಮಾಡಿದರೆ ಗಟ್ಟಿಯಾದ ಮಣ್ಣು ಸಡಿಲವಾಗಿ ಮಳೆ ನೀರು ಹೀರಿಕೊಳ್ಳುತ್ತದೆ. ಮಣ್ಣಿನಲ್ಲಿ ಗಾಳಿ ವಿನಿಮಯವಾಗುತ್ತದೆ. ಮಣ್ಣು ಒಣಗುವುದು, ತಣ್ಣಗಾಗುವುದು ಆಗಿ ಮಣ್ಣಿನ ಗುಣಮಟ್ಟ ಉತ್ತಮವಾಗುತ್ತದೆ ಎನ್ನುತ್ತಾರೆ ಪ್ರಗತಿಪರ ರೈತ ಬಾಗೂರು ಆರ್‌. ವೆಂಕಟೇಶ್‌.

ಕೊರೊನಾ ನಿಯಂತ್ರಿಸಲು ಲಾಕ್‌ಡೌನ್‌ ಆಗಿರುವುದರಿಂದ ಅಂಗಡಿಗಳು ಬಂದ್‌ ಆಗಿವೆ. ಈಗ ಪೂರ್ವ ಮುಂಗಾರು ಆರಂಭವಾಗಿದ್ದು ಕೃಷಿ ಚಟುವಟಿಕೆಗೆ ಬೇಕಿರುವ ಸಾಧನ–ಸಲಕರಣೆ, ಬಿತ್ತನೆ ಬೀಜ, ಗೊಬ್ಬರ ಒದಗಿಸಲು ಸಂಬಂಧಪಟ್ಟ ಇಲಾಖೆ ಮುಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಒತ್ತಾಯ.

ಕೀಟರೋಗ ಶಮನಕ್ಕೆ ಮದ್ದು
ಮಾಗಿ ಉಳುಮೆ ಮಾಡದಿದ್ದಲ್ಲಿ ರಭಸವಾಗಿ ಸುರಿದ ಮಳೆಗೆ ಫಲವತ್ತಾದ ಮೇಲ್ಮೈ ಮಣ್ಣು ಕೊಚ್ಚಿ ಹೋಗುತ್ತದೆ. ಇದರಿಂದ ಮಣ್ಣಿನ ಸತ್ವ ಹಾಳಾಗುತ್ತದೆ. ಹಾಗಾಗಿ ಮಾಗಿ ಉಳುಮೆಯನ್ನು ರೈತರು ಇಳಿಜಾರಿಗೆ ಅಡ್ಡಲಾಗಿ ಆಳವಾಗಿ ಮಾಡಬೇಕು. ಇದರಿಂದ ಮಳೆ ನೀರು ಜಮೀನಿನಲ್ಲಿಯೇ ಇಂಗಿ ತೇವಾಂಶ ಹೆಚ್ಚಾಗುತ್ತದೆ. ಜೊತೆಗೆ ಮಣ್ಣಿನ ಒಳಪದರದಲ್ಲಿ ಅಡಗಿರುವ ಬೆಳೆ ಹಾನಿಕಾರಕ ಕ್ರಿಮಿಕೀಟ, ಮೊಟ್ಟೆ ಸಾಯುತ್ತದೆ. ಇದರಿಂದಾಗಿ ಬೆಳೆಗೆ ಬರುವ ಕೀಟರೋಗ ಶಮನವಾಗುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್‌. ಈಶ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

*
ಮಾಗಿ ಉಳುಮೆ ಮಾಡುವ ರೈತರು ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಕಡಿಮೆ ದರಕ್ಕೆ ಸಿಗುವ ನೇಗಿಲು ಇನ್ನಿತರ ಸಾಧನಗಳನ್ನು ಬಾಡಿಗೆಗೆ ಪಡೆಯಬಹುದು.
-ಸಿ.ಎಸ್‌. ಈಶ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.