ADVERTISEMENT

ಚಿತ್ರದುರ್ಗದಲ್ಲಿ ಸಾರಿಗೆ ಬಸ್‌ ಕಾಣದ ಹಳ್ಳಿಗಳೇ ಹೆಚ್ಚು!

ಓಡಾಟಕ್ಕೆ ಸರಕು ಸಾಗಣೆ ವಾಹನಗಳನ್ನೇ ಅವಲಂಬಿಸುವುದು ಹಲವು ಗ್ರಾಮಸ್ಥರಿಗೆ ಅನಿವಾರ್ಯ

ಜಿ.ಬಿ.ನಾಗರಾಜ್
Published 14 ಆಗಸ್ಟ್ 2021, 4:52 IST
Last Updated 14 ಆಗಸ್ಟ್ 2021, 4:52 IST
ಕೆಎಸ್‌ಆರ್‌ಟಿಸಿ ಬಸ್‌
ಕೆಎಸ್‌ಆರ್‌ಟಿಸಿ ಬಸ್‌   

ಚಿತ್ರದುರ್ಗ: ಅಭಿವೃದ್ಧಿ ಸೂಚ್ಯಂಕ ನಿರ್ಧರಿಸುವಲ್ಲಿ ಸಾರಿಗೆ ಸಂಪರ್ಕ ಪ್ರಮುಖ ಮಾನದಂಡ. ಅತ್ಯುತ್ತಮ ಸಾರಿಗೆ ಸೌಲಭ್ಯ ಹೊಂದಿದ ಪ್ರದೇಶ ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸುತ್ತದೆ. ಜಿಲ್ಲೆಯೊಂದು ಹಿಂದುಳಿಯಲು ಸಾರಿಗೆ ಸಂಪರ್ಕದ ಕೊರತೆಯ ಕೊಡುಗೆ ಸಾಕಷ್ಟಿದೆ ಎಂಬುದು ಸರ್ಕಾರವೇ ನಡೆಸಿದ ಆರ್ಥಿಕ ಸಮೀಕ್ಷೆಯಲ್ಲೇ ಬಹಿರಂಗವಾಗಿದೆ.

ಜಿಲ್ಲೆಯಲ್ಲಿ 1,063 ಗ್ರಾಮಗಳಿವೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು ಜನರು ನೆಲೆಸಿದ್ದಾರೆ. 2018ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವಿಭಾಗ ಚಿತ್ರದುರ್ಗದಲ್ಲೇ ಇದೆ. ರಾಜಹಂಸ, ಐರಾವತ ಸೇರಿ ಸುಮಾರು 270 ಬಸ್‌ಗಳಿವೆ. ಆದರೆ, ಗ್ರಾಮೀಣ ಪ್ರದೇಶಕ್ಕೆ ಇನ್ನೂ ಸಮರ್ಪಕ ಸಾರಿಗೆ ಸಂಪರ್ಕವಿಲ್ಲ. ಬಸ್‌ ಸೌಲಭ್ಯ ಕಾಣದಿರುವ ಹಳ್ಳಿಗಳ ಸಂಖ್ಯೆಯೇ ಜಿಲ್ಲೆಯಲ್ಲಿ ಹೆಚ್ಚಿದೆ.

ಚಿತ್ರದುರ್ಗ ಘಟಕದಲ್ಲಿ 120, ಹೊಸದುರ್ಗ ಘಟಕದಲ್ಲಿ 45 ಹಾಗೂ ಚಳ್ಳಕೆರೆ ಘಟಕದಲ್ಲಿ 40 ಬಸ್‌ಗಳಿವೆ. ತುಮಕೂರು ಜಿಲ್ಲೆಯ ಪಾವಗಡ ಘಟಕವೂ ಚಿತ್ರದುರ್ಗ ವಿಭಾಗದ ವ್ಯಾಪ್ತಿಯಲ್ಲಿರುವುದರಿಂದ ಇಲ್ಲೂ ಒಂದಷ್ಟು ಬಸ್‌ಗಳಿವೆ. ವಿಭಾಗ ಆರಂಭವಾಗಿ ಹಲವು ವರ್ಷ ಕಳೆದರೂ ಬಸ್‌ಗಳ ಸಂಖ್ಯೆ ಏರಿಕೆಯಾಗಿಲ್ಲ. ಇದರಿಂದ ಹೊಸ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿಲ್ಲ. ವಿಭಾಗ ಇದ್ದರೂ ಸಾರಿಗೆ ಸಂಪರ್ಕದಲ್ಲಿ ಸುಧಾರಣೆ ಕಾಣುತ್ತಿಲ್ಲ.

ADVERTISEMENT

ಚಿತ್ರದುರ್ಗ ವಿಭಾಗ ವ್ಯಾಪ್ತಿಯ ಬಹುತೇಕ ಬಸ್‌ಗಳು ಬೆಂಗಳೂರಿಗೆ ಸಂಚರಿಸುತ್ತಿವೆ. ದಾವಣಗೆರೆ, ಶಿವಮೊಗ್ಗ, ತುಮಕೂರು ಹಾಗೂ ಬಳ್ಳಾರಿ ಜಿಲ್ಲಾ ಕೇಂದ್ರ ಸಂಪರ್ಕಿಸುವ ಬಸ್‌ಗಳು ಹೆಚ್ಚಾಗಿವೆ. ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಗಳಿಗೆ ಬಸ್‌ ಸಂಪರ್ಕವಿದೆ. ನಗರ ಹಾಗೂ ಹಳ್ಳಿಗಳನ್ನು ಸಂಪರ್ಕಿಸುವ ಬಸ್‌ ಮಾರ್ಗಗಳು ತೀರಾ ಕಡಿಮೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಿಗೆ ಮಾತ್ರ ಬಸ್‌ ಸೇವೆ ಸೀಮಿತವಾಗಿದೆ. ಆದಾಯ ಬರುವ ಹಾಗೂ ವೆಚ್ಚ ಕಡಿಮೆಯಾಗುವ ಮಾರ್ಗಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ವ್ಯಾವಹಾರಿಕ ದೃಷ್ಟಿಯಿಂದ ಸಾರಿಗೆ ಸಂಪರ್ಕ ವ್ಯವಸ್ಥೆ ರೂಪಿಸಲಾಗಿದೆಯೇ ಹೊರತು ಗ್ರಾಮೀಣ ಜನರ ಮೇಲಿನ ಕಾಳಜಿಯಿಂದಲ್ಲ ಎಂಬ ಕೊರಗು ಜಿಲ್ಲೆಯಲ್ಲಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳಷ್ಟೇ ಖಾಸಗಿ ಬಸ್‌ಗಳು ಜಿಲ್ಲೆಯಲ್ಲಿವೆ. 300ಕ್ಕೂ ಹೆಚ್ಚು ಮಾರ್ಗಗಳಲ್ಲಿ ಈ ಬಸ್‌ಗಳು ಸಂಚರಿಸುತ್ತಿವೆ. ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ರಸ್ತೆಗೆ ಇಳಿಯುವ ಖಾಸಗಿ ಬಸ್‌ಗಳ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರದ ದಾಖಲೆಗಳಲ್ಲಿ ಸಾರಿಗೆ ಸೌಲಭ್ಯ ಹೊಂದಿದ್ದರೂ ವಾಸ್ತವವಾಗಿ ಬಸ್‌ ಸಂಚರಿಸುವುದಿಲ್ಲ. ಇಂತಹ ಹಳ್ಳಿಯ ಜನರು ಆಟೊ, ಕ್ರೂಸರ್‌, ದ್ವಿಚಕ್ರ ವಾಹನ, ಸರಕು ಸಾಗಣೆ ವಾಹನಗಳ ಮೇಲೆ ಅವಲಂಬಿತವಾಗುವುದು ಅನಿವಾರ್ಯವಾಗಿದೆ.

ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸುವುದು ಅಪರಾಧ. ಆದರೆ, ಜಿಲ್ಲೆಯ ಯಾವುದೇ ನಗರ ಅಥವಾ ರಸ್ತೆಯಲ್ಲಿ ಸಂಚರಿಸಿದರೆ ಸರಕು ಸಾಗಣೆ ವಾಹನಗಳು ಜನ ಸಂಚಾರಕ್ಕೆ ಹೇಗೆ ಅನಿವಾರ್ಯವಾಗಿವೆ ಎಂಬುದು ಅರಿವಿಗೆ ಬರುತ್ತದೆ. ಚಿತ್ರದುರ್ಗದ ತುರುವನೂರು ರಸ್ತೆ, ಹೊಳಲ್ಕೆರೆ ಮಾರ್ಗ, ಭೀಮಸಮುದ್ರ ರಸ್ತೆಯಲ್ಲಿ ಇಂತಹ ವಾಹನಗಳೇ ಹೆಚ್ಚಾಗಿ ಸಂಚರಿಸುತ್ತವೆ. ಗ್ರಾಮಗಳನ್ನೇ ಸಂಪರ್ಕಿಸುವ ಹಲವು ಮಾರ್ಗಗಳಲ್ಲಿಯೂ ಸರಕು ಸಾಗಣೆ ವಾಹನಗಳ ಸಂಚಾರವೇ ಅಧಿಕ.

ಸಾರಿಗೆ ಸಂಪರ್ಕದ ಕೊರತೆಯ ಕಾರಣಕ್ಕೆ ಅನೇಕ ಮಕ್ಕಳ ಶಿಕ್ಷಣ ಪ್ರಾಥಮಿಕ ಶಾಲಾ ಹಂತಕ್ಕೆ ಕೊನೆಯಾಗುತ್ತಿದೆ. ಪ್ರೌಢಶಾಲೆ, ಕಾಲೇಜುಗಳಿಗೆ ದೂರದ ಊರು ಅಥವಾ ನಗರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ಹೆಣ್ಣುಮಕ್ಕಳ ಭವಿಷ್ಯದ ಮೇಲೆ ಇದು ಪರಿಣಾಮ ಬೀರುತ್ತಿದೆ. ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ, ಆಂಧ್ರಪ್ರದೇಶಕ್ಕೆ ಹೊಂದಿಕೊಂಡ ಗಡಿ ಗ್ರಾಮಗಳಲ್ಲಿ ಬಾಲ್ಯವಿವಾಹ ಹೆಚ್ಚಾಗುವುದಕ್ಕೂ ಇದು ಪರೋಕ್ಷ ಕಾರಣವಾಗಿದೆ.

‘ಡಕೋಟ ಬಸ್‌’ಗಳೇ ಹೆಚ್ಚು

ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಬಸ್‌ಗಳ ಸಾಮರ್ಥ್ಯದ ಬಗ್ಗೆ ಪ್ರಯಾಣಿಕರಲ್ಲಿ ಅನುಮಾನಗಳಿವೆ. ವಿಭಾಗದ ಬಹುತೇಕ ಬಸ್‌ಗಳು ‘ಡಕೋಟ ಎಕ್ಸ್‌ಪ್ರೆಸ್‌’ ಎಂಬುದು ಪ್ರಯಾಣಿಕರ ಆರೋಪ.

ಜಿಲ್ಲೆಯ ಮೂರು ಡಿಪೊ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಬಸ್‌ಗಳ ಸಂಖ್ಯೆ ಹೆಚ್ಚಾಗಿಲ್ಲ. ಹೊಸ ಬಸ್‌ಗಳ ಸೇರ್ಪಡೆ ತೀರಾ ಕಡಿಮೆ. 10 ವರ್ಷ ಮೇಲಿನ ಬಸ್‌ಗಳ ಸಂಖ್ಯೆಯೇ ಹೆಚ್ಚಾಗಿದೆ. ಅನೇಕ ಬಸ್‌ಗಳು ನಿಗದಿತ ಗಮ್ಯ ತಲುಪುವ ಮೊದಲೇ ಕೆಟ್ಟು ನಿಲ್ಲುತ್ತಿವೆ.
ತಂಗುದಾಣದಲ್ಲಿ ನಿಲುಗಡೆ ಮಾಡಿದ ಬಸ್‌ಗಳು ಪುನಃ ಸಂಚರಿಸಲು ಪ್ರಯಾಣಿಕರು ತಳ್ಳಬೇಕು. ಬ್ರೇಕ್‌, ಟೈರ್‌, ಎಂಜಿನ್‌ ಸುಸ್ಥಿತಿಯಲ್ಲಿ ಇರುವುದಿಲ್ಲ. ಈ ಬಗ್ಗೆ ಬಸ್‌ ಚಾಲಕರು ಹಾಗೂ ನಿರ್ವಾಹಕರೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಗ್ರಾಮಕ್ಕೆ ಒಮ್ಮೆಯೂ ಸಾರಿಗೆ ಬಸ್‌ ಬಂದಿಲ್ಲ. ಚಳ್ಳಕೆರೆ, ಚಿತ್ರದುರ್ಗ, ಜಗಳೂರಿಗೆ ತೆರಳಲು ಸರಕು ಸಾಗಣೆ ವಾಹನ ಬಳಸುತ್ತೇವೆ. ಶಾಲಾ ಮಕ್ಕಳು ಆಟೊದಲ್ಲಿ ಸಂಚರಿಸುತ್ತಾರೆ. ಇದಕ್ಕೆ ದುಬಾರಿ ಬೆಲೆ ತೆರಬೇಕಾಗಿದೆ.

- ಜಿ.ಸಿ. ಬಾಲರಾಜ, ಜೋಗಿಹಟ್ಟಿ, ಚಳ್ಳಕೆರೆ ತಾಲ್ಲೂಕು

ಜನರ ಒತ್ತಾಯಕ್ಕೆ ಮಣಿದು ಇಸಾಮುದ್ರ ಮಾರ್ಗವಾಗಿ ಭರಮಸಾಗರದಿಂದ ಜಗಳೂರಿಗೆ ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಚೆಗೆ ಈ ಬಸ್‌ ಕೂಡ ಸಂಚರಿಸುತ್ತಿಲ್ಲ. ಕೋಗುಂಡೆ, ಕಾಲ್ಗೆರೆ ಮಾರ್ಗದಲ್ಲಿಯೂ ಬಸ್‌ ಸೌಲಭ್ಯವಿಲ್ಲ.

- ಪ್ರಭು, ರೈತ, ಇಸಾಮುದ್ರ, ಚಿತ್ರದುರ್ಗ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.