ADVERTISEMENT

ಸಂಸತ್ತಿನಲ್ಲಿ ಅಶಿಸ್ತು ಪ್ರದರ್ಶಿಸಿದ ಕಾಂಗ್ರೆಸ್‌: ಸಚಿವ ಎ.ನಾರಾಯಣಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 14:42 IST
Last Updated 18 ಆಗಸ್ಟ್ 2021, 14:42 IST
ಚಿತ್ರದುರ್ಗದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಸಚಿವ ಎ.ನಾರಾಯಣಸ್ವಾಮಿ ಅವರು ಮಂಡಿಯೂರಿ ಮತದಾರರನ್ನು ನಮಸ್ಕರಿಸಿದ ಪರಿ. ಶಾಸಕರಾದ ವೈ.ಎ.ನಾರಾಯಣಸ್ವಾಮಿ, ಎಂ.ಚಂದ್ರಪ್ಪ ಇದ್ದಾರೆ.
ಚಿತ್ರದುರ್ಗದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಸಚಿವ ಎ.ನಾರಾಯಣಸ್ವಾಮಿ ಅವರು ಮಂಡಿಯೂರಿ ಮತದಾರರನ್ನು ನಮಸ್ಕರಿಸಿದ ಪರಿ. ಶಾಸಕರಾದ ವೈ.ಎ.ನಾರಾಯಣಸ್ವಾಮಿ, ಎಂ.ಚಂದ್ರಪ್ಪ ಇದ್ದಾರೆ.   

ಚಿತ್ರದುರ್ಗ: ಕೇಂದ್ರ ಸರ್ಕಾರದ ನೂತನ ಸಚಿವ ಸಂಪುಟದ 47 ಸದಸ್ಯರಲ್ಲಿ 21 ಸಚಿವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದೇವೆ. ಸಂಪ್ರದಾಯದಂತೆ ಎಲ್ಲ ಸಚಿವರನ್ನು ಸಂಸತ್ತಿಗೆ ಪರಿಚಯ ಮಾಡಬೇಕಿತ್ತು. ಕಾಂಗ್ರೆಸ್‌ ಹಾಗೂ ಇತರ ವಿರೋಧ ಪಕ್ಷಗಳು ಕಲಾಪದಲ್ಲಿ ಇದಕ್ಕೆ ಅವಕಾಶ ನೀಡಲಿಲ್ಲ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಆರೋಪಿಸಿದರು.

‘ಜನಾಶೀರ್ವಾದ ಯಾತ್ರೆ’ಯ ಅಂಗವಾಗಿ ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿಮಾನಿಗಳ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘18 ವರ್ಷ ಶಾಸಕನಾಗಿ ವಿಧಾನಸಭೆಯಲ್ಲಿದ್ದೆ. ಮುಖ್ಯಮಂತ್ರಿ ಹಾಗೂ ಸಭಾಧ್ಯಕ್ಷರು ಸದನ ಪ್ರವೇಶಿಸಿದರೆ ಎದ್ದು ನಿಂತು ಗೌರವ ಸಲ್ಲಿಸುತ್ತಿದ್ದೆವು. ಸಭಾಧ್ಯಕ್ಷರ ಪೀಠ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ಪಕ್ಷಾತೀತವಾಗಿ ಗೌರವ ಸಲ್ಲಿಸುತ್ತಿದ್ದೆವು. ಇಂತಹ ನಡವಳಿಕೆಯನ್ನು ಲೋಕಸಭೆಯಲ್ಲಿ ಕಾಣಲಿಲ್ಲ. 135 ಕೋಟಿ ಜನರಿಗೆ ಆಡಳಿತ ನೀಡುವ ಜವಾಬ್ದಾರಿ ಹೊತ್ತಿರುವ ಸಂಸತ್ತಿನಲ್ಲಿ ವಿರೋಧ ಪಕ್ಷದ ಸದಸ್ಯರು ನಡೆದುಕೊಂಡ ರೀತಿ ನಾಚಿಕೆಗೇಡು’ ಎಂದು ಹರಿಹಾಯ್ದರು.

ADVERTISEMENT

‘ದೇಶದಲ್ಲಿ ಕಾಂಗ್ರೆಸ್‌ 62 ವರ್ಷ, ಬಿಜೆಪಿ 13 ವರ್ಷ ಆಳ್ವಿಕೆ ಮಾಡಿವೆ. ಸಂಸತ್ತಿನ ಸಂಪ್ರದಾಯ, ಸದನದ ಶಿಸ್ತು ಕಾಂಗ್ರೆಸ್‌ ಉಲ್ಲಂಘಿಸಿದೆ. ವಿರೋಧ ಪಕ್ಷದ ಸದಸ್ಯರು ಸಭಾಧ್ಯಕ್ಷರ ಪೀಠಕ್ಕೆ ಪುಸ್ತಕ ಎಸೆದರು. ಟೇಬಲ್‌ ಮೇಲೆ ಕುಣಿದು ಅಸಭ್ಯವಾಗಿ ವರ್ತಿಸಿದರು. ನೂತನ ಸಚಿವರನ್ನು ಸಂಸತ್ತಿಗೆ ಪರಿಚಯಿಸುವ ಅವಕಾಶ ಇದರಿಂದ ತಪ್ಪಿತು. ಮತದಾನ ಮಾಡಿದ ಜನರಿಗೆ ಧನ್ಯವಾದ ತಲುಪಿಸುವ ಉದ್ದೇಶದಿಂದ ಜನಾಶೀರ್ವಾದ ಯಾತ್ರೆ ಹಮ್ಮಿಕೊಳ್ಳಲಾಯಿತು. ಇದು ತಪ್ಪಾ’ ಎಂದು ಪ್ರಶ್ನಿಸಿದರು.

‘ಇಪ್ಪತ್ತು ವರ್ಷಗಳ ಹಿಂದೆ ಬಿಜೆಪಿ ಬ್ರಾಹ್ಮಣರ ಪಕ್ಷ ಎಂಬ ಹಣೆಪಟ್ಟಿ ಇತ್ತು. ಹಿಂದುಳಿದವರ ಬಗ್ಗೆ ಕಳಕಳಿ ಇಲ್ಲ, ದಲಿತ ವಿರೋಧಿ ಎಂದು ಬಿಂಬಿಸಲಾಗಿತ್ತು. ಬಿಜೆಪಿ ಗರ್ಭಗುಡಿ ರಾಜಕಾರಣ ಮಾಡುತ್ತದೆ ಎಂಬ ಆರೋಪವಿತ್ತು. ಇಂತಹ ಅಪಪ್ರಚಾರವನ್ನು ಬಿಜೆಪಿ ಮೆಟ್ಟಿನಿಂತಿದೆ. ತಳಸಮುದಾಯದ ಬಗ್ಗೆ ಬಿಜೆಪಿಗೆ ಇರುವ ಕಾಳಜಿ ಗೊತ್ತಾಗಿದೆ. ಬಿಜೆಪಿ ಮೀಸಲಾತಿಯ ಪರವಾಗಿದ್ದು, ಅಧಿಕಾರ ಇರುವವರೆಗೂ ಮೀಸಲಾತಿ ತೆಗೆದು ಹಾಕುವುದಿಲ್ಲ. ಪ್ರಜ್ಞಾವಂತ ದಲಿತ ಸಮುದಾಯ ಬಿಜೆಪಿ ಜೊತೆಗಿದೆ’ ಎಂದು ಹೇಳಿದರು.

‘90ರ ದಶಕದಲ್ಲಿ ಬಿಜೆಪಿ ಬಾವುಟ ಕಟ್ಟುವುದು ಕೂಡ ಕಷ್ಟವಾಗಿತ್ತು. ರಾತ್ರಿ ಕಟ್ಟಿದ ಬಾವುಟ ಬೆಳಿಗ್ಗೆ ಇರುತ್ತಿರಲಿಲ್ಲ. ಇಂತಹ ದೌರ್ಜನ್ಯಕ್ಕೆ ಅಂಜದವರು ನಾಯಕರಾಗಿದ್ದಾರೆ. ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ಗಳಲ್ಲಿ ಸೆಲ್ಫಿ ಹಾಕಿದವರು ನಾಯಕ ಆಗುವುದಿಲ್ಲ. ಜನರ ಪರವಾಗಿ ನಿಲ್ಲುವವರು ಮಾತ್ರ ನಾಯಕರಾಗಿ ಬೆಳೆಯಲು ಸಾಧ್ಯ. ಪಕ್ಷಕ್ಕೆ ಬದ್ಧವಾಗಿ ಇದ್ದರೆ ಯಾವ ಹಂತಕ್ಕೆ ಬೆಳೆಯಬಹುದು ಎಂಬುದಕ್ಕೆ ನಾನೇ ನಿದರ್ಶನ’ ಎಂದರು.

‘ಭದ್ರಾ ಮೇಲ್ದಂಡೆ ಯೋಜನೆಯ ಹೆಸರಿನಲ್ಲಿ 20 ವರ್ಷದಿಂದ ಮತ ಸೆಳೆಯಲಾಗಿದೆ. ನೇರ ರೈಲು ಮಾರ್ಗದ ಹೆಸರಿನಲ್ಲಿ ರಾಜಕಾರಣ ಮಾಡಲಾಗಿದೆ. ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾದ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲು ಒಮ್ಮೆಯೂ ಪ್ರಯತ್ನಿಸಲಿಲ್ಲ. ನೇರ ರೈಲು ಮಾರ್ಗಕ್ಕೆ ₹ 1,900 ಕೋಟಿ ಅನುದಾನ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇಷ್ಟೇ ಅನುದಾನವನ್ನು ರಾಜ್ಯ ಸರ್ಕಾರವೂ ಬಿಡುಗಡೆ ಮಾಡಲಿದೆ. ಇದು ಬಿಜೆಪಿ ಬದ್ಧತೆ’ ಎಂದು ನುಡಿದರು.

ಸಚಿವರ ‘ಬ್ರಾಂಡ್‌’ ಪ್ರದರ್ಶನ

‘ಸಚಿವರಾಗುವ ಅರ್ಹತೆ ನಾರಾಯಣಸ್ವಾಮಿ ಅವರಲ್ಲಿ ಏನಿದೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಹಿಂದೆ ಸಮಾಜಕಲ್ಯಾಣ ಸಚಿವರಾಗಿದ್ದಾಗಲೂ ಇದೇ ಅಪಸ್ವರ ಕೇಳಿಬಂದಿತ್ತು. ನನಗೂ ಬ್ರಾಂಡ್‌ ಇದೆ ಎಂಬುದನ್ನು ಅವರು ಮರೆತಂತೆ ಕಾಣುತ್ತಿದೆ’ ಎಂದು ಕುಟುಕಿದರು.

‘30 ವರ್ಷದಿಂದ ಬಿಜೆಪಿಗೆ ಬದ್ಧನಾಗಿದ್ದೇನೆ. ಒಮ್ಮೆಯೂ ಅಪಸ್ವರ ಎತ್ತದೇ ಸಿದ್ಧಾಂತಕ್ಕೆ ಕಟ್ಟುಬಿದ್ದಿದ್ದೇನೆ. ಒಬ್ಬರ ಬಳಿಯೂ ಲಂಚ ಮುಟ್ಟದೇ ಕೆಲಸ ಮಾಡಿದ್ದೇನೆ. ಪಕ್ಷ ಕಲಿಸಿದ ತ್ಯಾಗ, ಸಂಸ್ಕಾರ ನನ್ನಲ್ಲಿದೆ. ಇದು ನನ್ನ ಬ್ರಾಂಡ್‌ ಅಲ್ಲವೇ’ ಎಂದು ಪ್ರಶ್ನಿಸಿದರು.

ನೋವು ತೋಡಿಕೊಂಡ ಸಚಿವ

ಕೋವಿಡ್‌ ಮೂರನೇ ಅಲೆಯ ಸಂದರ್ಭದಲ್ಲಿ ಜನಾಶೀರ್ವಾದ ಯಾತ್ರೆ ಹೊರಟಿದ್ದೇವೆ. ಎಲ್ಲಾದರೂ ತಪ್ಪಾದರೆ ಹೇಗೆ ಎಂಬ ಭಯ ಕಾಡುತ್ತಿದೆ. ಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲರೂ ಮಾಸ್ಕ್‌ ಧರಿಸಿ, ಕೋವಿಡ್‌ ನಿಯಮ ಪಾಲಿಸಿ ಎಂದು ನಾರಾಯಣಸ್ವಾಮಿ ಮನವಿ ಮಾಡಿದರು.

‘ಕೋವಿಡ್‌ ಎರಡನೇ ಅಲೆಯಲ್ಲಿ ನರಕ ನೋಡಿದ್ದೇನೆ. ಹೆಣ್ಣು ಮಗಳೊಬ್ಬಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದು ಹೇಳುವಾಗ ಸಚಿವರು ಗದ್ಗದಿತರಾಗಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್‌, ಉಪಾಧ್ಯಕ್ಷ ಶಂಕರಪ್ಪ, ವಿಭಾಗೀಯ ಪ್ರಮುಖರಾದ ಜಿ.ಎಂ.ಸುರೇಶ್‌, ಸಿದ್ದೇಶ್‌ ಯಾದವ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದರಿನಾಥ್‌, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಬಿಜೆಪಿ ಮುಖಂಡರಾದ ಅನಿತ್‌, ರಘುಚಂದನ್‌, ಜಯಪಾಲಯ್ಯ, ಸುರೇಶ್‌ ಸಿದ್ದಾಪುರ, ರಾಜೇಶ್‌ ಬುರಡೆಕಟ್ಟೆ ಇದ್ದರು.

***

ಪೆಗಾಸಸ್‌ ಮುಂದಿಟ್ಟುಕೊಂಡು ನೂತನ ಸಚಿವರನ್ನು ಪರಿಚಯಿಸಲು ಅವಕಾಶ ನೀಡದೇ ಕಾಂಗ್ರೆಸ್‌ ಕುತಂತ್ರ ಮಾಡಿತು. ಇದಕ್ಕೆ ಪ್ರತಿಯಾಗಿ ಜನಾಶೀರ್ವಾದ ಯಾತ್ರೆ ನಡೆಸಲಾಗುತ್ತಿದೆ.

- ವೈ.ಎ.ನಾರಾಯಣಸ್ವಾಮಿ,ವಿಧಾನಪರಿಷತ್‌ ಸದಸ್ಯ

***

ನೇರ ರೈಲು ಯೋಜನೆ ಆರು ತಿಂಗಳಲ್ಲಿ ಅನುಷ್ಠಾನಕ್ಕೆ ಬರಲಿ. ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಲ್ಲಿ ಬೃಹತ್‌ ಕೈಗಾರಿಕೆಯೊಂದನ್ನು ಸಚಿವರು ಚಿತ್ರದುರ್ಗಕ್ಕೆ ತರುವ ವಿಶ್ವಾಸವಿದೆ.

-ಎಂ.ಚಂದ್ರಪ್ಪ,ಶಾಸಕ, ಹೊಳಲ್ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.