ADVERTISEMENT

ಮುರುಘಾ ಮಠದಲ್ಲಿ ಯುವಜನೋತ್ಸವ | ಯುವಜನ ಆಲಸ್ಯ ತೊರೆಯಲಿ: ರವಿ ಡಿ.ಚನ್ನಣ್ಣವರ್‌

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 5:20 IST
Last Updated 30 ಸೆಪ್ಟೆಂಬರ್ 2025, 5:20 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಯುವಜನೋತ್ಸವದಲ್ಲಿ ಡಿಐಜಿ ರವಿ ಡಿ.ಚನ್ನಣ್ಣವರ್‌ ಅವರನ್ನು ಶರಣರು ಗೌರವಿಸಿದರು
ಚಿತ್ರದುರ್ಗದ ಮುರುಘಾ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಯುವಜನೋತ್ಸವದಲ್ಲಿ ಡಿಐಜಿ ರವಿ ಡಿ.ಚನ್ನಣ್ಣವರ್‌ ಅವರನ್ನು ಶರಣರು ಗೌರವಿಸಿದರು   

ಚಿತ್ರದುರ್ಗ: ‘ಶಿಕ್ಷಣ, ಸಂಘಟನೆ, ಹೋರಾಟದಿಂದ ಬದುಕು ಕಟ್ಟಿಕೊಳ್ಳಬೇಕು. ಇದಕ್ಕೂ ಮೊದಲು ನಮ್ಮಲ್ಲಿನ ಸೋಮಾರಿತನ, ಆಲಸ್ಯ ಇವುಗಳನ್ನು ಸುಟ್ಟು ಹಾಕಬೇಕು’ ಎಂದು ಬೆಂಗಳೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಐಜಿ ರವಿ ಡಿ.ಚನ್ನಣ್ಣವರ್‌ ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಸೋಮವಾರ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ನಮ್ಮನ್ನು ಯಾರು ಉದ್ಧಾರ ಮಾಡುವುದಿಲ್ಲ, ನಮಗೆ ನಾವೇ ಅಭಿವೃದ್ಧಿ ಹೊಂದಬೇಕು. ಸರಸ್ವತಿ ನಮ್ಮನ್ನಾಳುವ ಜ್ಞಾನ. ಬಡವ ಎಂದು ಕೂರದೇ ಸತತ ಪರಿಶ್ರಮದಿಂದ ಅಧ್ಯಯನ ನಡೆಸಿ ಯಶಸ್ಸು ಸಾಧಿಸಬೇಕು’ ಎಂದರು.

‘ಅಂಬೇಡ್ಕರ್‌ ಮಾತುಗಳನ್ನು ನಾವು ಎಂದಿಗೂ ಮರೆಯಬಾರದು. ನಮ್ಮ ಪೂರ್ವಜರು ಹೇಗಿದ್ದರು ಎಂಬುದನ್ನು ತಿಳಿಯಬೇಕು. ನಾವು ಚರಿತ್ರೆಯನ್ನು ಓದಿ ಕಲಿತಿದ್ದೇವೆ. ಬಡತನಕ್ಕೂ ತಿರಸ್ಕಾರ, ಅವಮಾನ ವಂಚನೆ ಇದೆ. ಆದರೆ ಎಲ್ಲವನ್ನು ಮೆಟ್ಟಿ ನಿಲ್ಲಬೇಕು’ ಎಂದರು.

ADVERTISEMENT

‘ನಿತ್ಯ ಜೀವನದಲ್ಲಿ ಎದುರಾಗುವ ಪ್ರತಿ ಯುದ್ಧಗಳನ್ನು ಧೈರ್ಯದಿಂದ ಎದುರಿಸಬೇಕು. ನಿಮ್ಮ ಮನೆಯ ಉದ್ಧಾರ ಇಂದಿನಿಂದಲೇ, ಅದು ನಿಮ್ಮಿಂದಲೇ ಎಂಬ ಸಂಕಲ್ಪ ಮಾಡಬೇಕು. ಸ್ವಾಭಿಮಾನ ನಮ್ಮಲ್ಲಿರುವ ಪರಮ ಮಿತ್ರ. ಚರಿತ್ರೆ, ಪೂಜೆ, ಪಾಠಗಳಿಂದ ನಮ್ಮ ಬದಲಾವಣೆ ಬರಬೇಕು’ ಎಂದು ತಿಳಿಸಿದರು.

‘ಬಸವಣ್ಣನವರು ಹೇಳಿದ ಹಾಗೆ ಕಾಯಕವೇ ಕೈಲಾಸಕ್ಕೆ ಬೆಲೆ ಕೊಡಬೇಕು. ನಮ್ಮ ಬದುಕನ್ನು ಸುಧಾರಿಸುವ ಶಕ್ತಿ ಶಿಕ್ಷಣಕ್ಕಿದೆ. ನಾವು ಮಾಡುವ ಕೆಲಸದಲ್ಲಿ ಸರ್ಕಾರಿ ನೌಕರಿಯೇ ಅಂತಿಮವಲ್ಲ, ಅದರ ಆಚೆಗೂ ಬದುಕು ಇದೆ ಎಂಬುದನ್ನು ಮರೆಯಬಾರದು’ ಎಂದರು.

‘ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗುತ್ತದೆ. ಸಾಧನೆ ಮಾಡಬೇಕಾದರೆ ತಲೆಯಲ್ಲಿ ಹುಚ್ಚು ಎದೆಯಲ್ಲಿ ಕಿಚ್ಚು ಇರಬೇಕು. ಬಡತನ, ನೋವು, ಅವಮಾನಕ್ಕೆ ಎದೆಕೊಡಬೇಕು. ಕಿಚ್ಚಿಗೆ ಸಂಸ್ಕಾರ ಕೊಟ್ಟರೆ ಅದನ್ನು ಜಗತ್ತು ಆಳುತ್ತದೆ’ ಎಂದು ಧಾರವಾಡದ ಸಂಪನ್ಮೂಲ ವ್ಯಕ್ತಿ ಮಹೇಶ್‌ ಮಾಸಾಳ್‌ ತಿಳಿಸಿದರು.

‘ಅಂಕಪಟ್ಟಿ, ಪುಸ್ತಕ, ಉಪನ್ಯಾಸ, ಪದವಿಗೆ ಮಾತ್ರ ಸೀಮಿತವಾಗಿರದೇ ನಾವು ಮೊದಲು ಮನುಷ್ಯರಾಗಬೇಕು. ಈ ಶಕ್ತಿಯನ್ನು ಪ್ರಕಟ ಮಾಡಿ ಉದ್ಧಾರಕ್ಕಾಗಿ ಬಳಸಿಕೊಳ್ಳಬೇಕು. ಮಕ್ಕಳನ್ನು ಧೈರ್ಯವಂತರನ್ನಾಗಿ ಬೆಳೆಸಬೇಕು. ನಮ್ಮ ಸಾಮರ್ಥ್ಯದ ಪರಿಚಯ ನಮಗೆ ಆಗಬೇಕು’ ಎಂದರು.

‘ಬುದ್ಧ, ಬಸವ, ಗಾಂಧೀಜಿಯಂತೆ ಜೀವನದಲ್ಲಿ ಸ್ಪಷ್ಟತೆ ಹಾಗು ಧೈರ್ಯವಿರಬೇಕು. ಸಾಧಕರಾಗಬೇಕಾದರೆ ಸಂಪರ್ಕ ಮತ್ತು ಸಂಬಂಧ ಮುಖ್ಯವಾಗುತ್ತದೆ. ಸಂಬಂಧದಿಂದ ಸಂವಾದವಾಗಬೇಕು. ಆಗ ಮಾತ್ರ ಸಹಕಾರದಿಂದ ಸಂತೃಪ್ತಿ ಸಾಧ್ಯವಾಗುತ್ತದೆ. ನಾವು ಸದೃಢರಾದರೆ ಜಗತ್ತು ನಮ್ಮ ಜೊತೆ ಬರುತ್ತದೆ’ ಎಂದು ನುಡಿದರು.

‘ಯುವಕರು ತಾವು ಬಯಸಿದ್ದನ್ನು ಪಡೆಯುವ ಶಕ್ತಿವಂತರಾಗಿದ್ದಾರೆ. ಭವಿಷ್ಯದ ಕನಸು ನನಸಾಗುವಂತಹ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು. ನಾವು ಆಯ್ಕೆ ಮಾಡಿಕೊಳ್ಳುವ ಮಾರ್ಗವು ನಮ್ಮ ಮುಂದೆ ಇದೆ. ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಆಯ್ಕೆ ನಮ್ಮದಾಗಿರಬೇಕು’ ಎಂದು ಶಾಸಕ ಡಾ.ಶ್ರೀನಿವಾಸ್‌ ತಿಳಿಸಿದರು.

‘ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸಾಧಿಸುವ ಛಲ ‌ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಭವಿಷ್ಯ ಕಟ್ಟಿಕೊಳ್ಳಬೇಕು. ಗುರಿ ಸಾಧನೆಗೆ ಆತ್ಮ ಸ್ಥೈರ್ಯ ಮುಖ್ಯ. ಜೀವನದಲ್ಲಿ ಆಸೆ ಇರಬೇಕು. ಪುಸ್ತಕದ ಜ್ಞಾನದ ಜತೆ ಹೊರಗಿನ ಪ್ರಪಂಚವನ್ನು ತಿಳಿದುಕೊಳ್ಳಬೇಕು’ ಎಂದು ಕರ್ನಾಟಕ ರೆಡ್‌ಕ್ರಾಸ್‌ನ ಉಪಾಧ್ಯಕ್ಷ ಬಿ.ಭಾಸ್ಕರ್‌ರಾವ್‌ ಹೇಳಿದರು.

ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ, ಕಾದಂಬರಿಕಾರ ಜಿ.ಬಿ.ಹರೀಶ್‌ ಇದ್ದರು.

ಯುವಜನೋತ್ಸವದಲ್ಲಿ ನೃತ್ಯ ರೂಪಕ ಪ್ರದರ್ಶನ
ಮುರುಘಾ ಮಠದಲ್ಲಿ ಸಹಜ ಶಿವಯೋಗ ಪ್ರಾತ್ಯಕ್ಷಿಕೆ
ಇಂದು ರಾವಣರು ನಮ್ಮ ಸುತ್ತಮುತ್ತಲಿದ್ದಾರೆ. ಅಂತಹವರ ಬಗ್ಗೆ ಸದಾ ಎಚ್ಚರದಿಂದ ಇರಬೇಕು. ನಮ್ಮನ್ನು ಕಾಲಿನಿಂದ ಒದೆಯುವ ಜನರಿಗೆ ಶಿಕ್ಷಣ ಎಂಬ ಆಯುಧದಿಂದ ಉತ್ತರ ನೀಡಬೇಕು. ಎಲ್ಲರಲ್ಲಿಯೂ ಅಶ್ವಮೇಧಯಾಗದ ಕುದುರೆ ಹೊರಡಬೇಕು.
ರವಿ ಡಿ.ಚನ್ನಣ್ಣವರ್‌ ಡಿಐಜಿ
ವ್ಯವಸ್ಥೆಯ ಸಂಚಿಗೆ ಯಾರು ಬಲಿಯಾಗಬಾರದು. ಆತ್ಮವಿಶ್ವಾಸ ಆತ್ಮಬಲ ಆತ್ಮವಿಕಾಸ ಆತ್ಮದ ಅಭಿವೃದ್ಧಿ ಬದುಕಿನ ಗುರಿಯಾಗಬೇಕು. ನಮ್ಮ ಕಾಯಕವೇ ನಮಗೆ ನಾಯಕನಾಗಬೇಕು. ಯುವಕರು ಬದಲಾದರೆ ವ್ಯವಸ್ಥೆ ಬದಲಾಗುತ್ತದೆ.
ಶಂಭು ಹೆಗಡಾಳ್‌ ಪ್ರಾಧ್ಯಾಪಕ ಧಾರವಾಡ

‘ಶಿವಯೋಗಕ್ಕಿದೆ ವಿಶೇಷ ಪ್ರಾಧಾನ್ಯತೆ’

‘ಕ್ರೈಸ್ತರು ಪ್ರಾರ್ಥನೆ ಮುಸ್ಲಿಂ ಧರ್ಮ ದವರು ನಮಾಜ್‌ ಮಾಡುವಂತೆ ಲಿಂಗಾಯತ ಧರ್ಮದಲ್ಲಿ ಶಿವಯೋಗಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ’ ಎಂದು ಕೊಲ್ಲಾಪುರ ಸಾಯಿಗಾವ್‌ ಮಠದ ಶಿವಾನಂದ ಸ್ವಾಮೀಜಿ ತಿಳಿಸಿದರು. ಮುರುಘಾ ಮಠದಲ್ಲಿ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಅವರು ‘ವಿಶ್ವದಲ್ಲಿ ಅತ್ಯಂತ ಶಾಂತಿ-ಸಮಾಧಾನ ಕೊಡುವುದು ಇಷ್ಟಲಿಂಗ ಪೂಜೆ. ನಾಡಿನಲ್ಲಿ ಹಲವು ಮಠಗಳಿವೆ ಆದರೆ ಶಿವಯೋಗಕ್ಕೆ ಅತಿಹೆಚ್ಚು ಆದ್ಯತೆ ನೀಡಿದ್ದು ಮಾತ್ರ ಮುರುಘಾಮಠ’ ಎಂದರು. ಶಿಗ್ಗಾವಿ ವಿರಕ್ತ ಮಠದ ಸಂಗನಬಸವ ಸ್ವಾಮೀಜಿ ಇರಕಲ್‌ ಶಿವಶಕ್ತಿ ಪೀಠದ ಬಸವ ಪ್ರಸಾದ ಸ್ವಾಮೀಜಿ ಕವಲೆತ್ತು ಬಸವ ಕೇಂದ್ರ ಶರಣೆ ಮುಕ್ತಾಯಕ್ಕ ದೇವರ ಹಿಪ್ಪರಗಿಯ ಗದ್ದಿಗೆ ಮಠದ ಮಹಾಂತ ಸ್ವಾಮೀಜಿ ಇದ್ದರು.

‘ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ’

ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ ಇದು ಭಾರತೀಯ ಮೂಲದ ಒಂದು ಸಮಗ್ರ ಜೀವನ ಶೈಲಿ’ ಎಂದು ಯೋಗಗುರು ಚನ್ನಬಸವಣ್ಣ ತಿಳಿಸಿದರು. ಮುರುಘಾ ಮಠದಲ್ಲಿ ಯೋಗ–ಆರೋಗ್ಯ–ಆಧ್ಯಾತ್ಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಕುಟುಂಬದೊಂದಿಗೆ ಚೆನ್ನಾಗಿರಬೇಕು. ಕುಟುಂಬವೇ ನಾಗರಿಕತೆಯ ತೊಟ್ಟಿಲು’ ಎಂದರು. ‘ಮನೆ ಚೆನ್ನಾಗಿದ್ದರೆ ಮನಸು ಚೆನ್ನಾಗಿರುತ್ತದೆ. ನಾವು ಬಿಗುಮಾನಗಳನ್ನು ಬಿಡಬೇಕು ಇಲ್ಲವಾದರೆ ಜೀವನ ಬಿಗಿಯಾಗಿರುತ್ತದೆ.ದೇಹದ ಸದೃಢತೆಗೆ ಮನಸ್ಸಿನ ಸಮತೋಲನಗೆ ಯೋಗ ಸಹಕಾರಿಯಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.