ADVERTISEMENT

ಜಮುರಾ ವಿಶ್ವವಿದ್ಯಾಲಯಕ್ಕೆ ಶರಣರು ಕುಲಾಧಿಪತಿ

ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರದಿಂದ ಸ್ಪಂದನೆ: ಶಿವಮೂರ್ತಿ ಶರಣರು

​ಪ್ರಜಾವಾಣಿ ವಾರ್ತೆ
Published 4 ಮೇ 2021, 13:21 IST
Last Updated 4 ಮೇ 2021, 13:21 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು   

ಚಿತ್ರದುರ್ಗ: ಜಗದ್ಗುರು ಮುರುಘ ರಾಜೇಂದ್ರ (ಜಮುರಾ) ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನದ ಆಯ್ಕೆ ಸಂಬಂಧ ಮುರುಘಾಮಠದಲ್ಲಿ ಮಂಗಳವಾರ ಸಭೆ ನಡೆಯಿತು. ಶಿವಮೂರ್ತಿ ಮುರುಘಾ ಶರಣರು ಕುಲಾಧಿಪತಿ ಹುದ್ದೆಗೆ ಆಯ್ಕೆಯಾದರು.

ಆಡಳಿತ ಮಂಡಳಿ ಸದಸ್ಯ ಬಿ.ಎಸ್.ಷಣ್ಮುಖಪ್ಪ ಅವರು ಶರಣರ ಹೆಸರು ಪ್ರಸ್ತಾಪಿಸಿದರು. ಇದಕ್ಕೆ ಸರ್ವ ಸದಸ್ಯರು ಸಮ್ಮತಿ ಸೂಚಿಸಿದರು.ಕುಲಪತಿ, ಕುಲಸಚಿವ ಹಾಗೂ ಇತರೆ ಅಧಿಕಾರಿಗಳನ್ನು ನೇಮಿಸುವ ಅಧಿಕಾರವನ್ನು ಕುಲಾಧಿಪತಿ ಅವರಿಗೆ ನೀಡಲಾಯಿತು.

‘ನೂರಾರು ಸಂಸ್ಥೆಗಳನ್ನು ನಡೆಸುತ್ತಿರುವ ಎಸ್‌ಜೆಎಂ ವಿದ್ಯಾಪೀಠವು ಒಂದು ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸಬೇಕು ಎಂಬುದು ಮುರುಘಾಮಠದ ಭಕ್ತರ ಮಹತ್ವಾಕಾಂಕ್ಷೆ ಆಗಿತ್ತು. ಇದನ್ನು ಸರ್ಕಾರ ಮೇಲ್ಮನೆ ಹಾಗೂ ಕೆಳಮನೆ ಎರಡೂ ಸದನಗಳಲ್ಲಿ ಮಂಡಿಸಿದ್ದು, ಒಪ್ಪಿಗೆ ದೊರೆತಿದೆ. ರಾಜ್ಯಪಾಲರು ಅನುಮೋದಿಸಿ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ’ ಎಂದು ಶ್ರೀಮಠ ತಿಳಿಸಿದೆ.

ADVERTISEMENT

‘ಬರದನಾಡು ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜಿನೊಂದಿಗೆ ವಿಶ್ವವಿದ್ಯಾಲಯ ಸ್ಥಾಪನೆ ಆಗುತ್ತಿರುವುದು ಉತ್ತಮ ಬೆಳವಣಿಗೆ. ಇದಕ್ಕೆ ಸರ್ಕಾರ ಮತ್ತು ರಾಜ್ಯಪಾಲರ ಸ್ಪಂದನೆಯೇ ಕಾರಣ’ ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

‘ಹಿರಿಯ ಗುರುಗಳಾದ ಮಲ್ಲಿಕಾರ್ಜುನ ಸ್ವಾಮೀಜಿ ಎಸ್‌ಜೆಎಂ ವಿದ್ಯಾಪೀಠದ ಅಡಿಯಲ್ಲೇ ವೈದ್ಯಕೀಯ ಕಾಲೇಜು ಸ್ಥಾಪನೆ ಆಗಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಅವರ ಮಹದಾಸೆ ಈಡೇರಿಸುವ ಉದ್ದೇಶದಿಂದ 20 ವರ್ಷಗಳ ಹಿಂದೆಯೇ ಬಸವೇಶ್ವರ ವೈದ್ಯಕೀಯ ಕಾಲೇಜು ಸ್ಥಾಪಿಸಲಾಯಿತು’ ಎಂದರು.

‘ವಿದ್ಯಾಪೀಠದ ಆಸ್ಪತ್ರೆ ಸಾರ್ವಜನಿಕ ಸೇವೆ ನೀಡುತ್ತಿದೆ. ಕೋವಿಡ್ ಪ್ರಥಮ ಅಲೆ ಎದುರಾದಾಗ 80 ಹಾಸಿಗೆ ಸಾಮರ್ಥ್ಯದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಗ 120 ರೋಗಿಗಳು ಏಕಕಾಲಕ್ಕೆ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಇನ್ನು ಹೆಚ್ಚಿನ ಅಗತ್ಯ ಕಂಡುಬಂದಲ್ಲಿ ಹೋಟೆಲ್ ಅಥವಾ ಕಲ್ಯಾಣಮಂಟಪ ಬಾಡಿಗೆ ಪಡೆದು ಚಿಕಿತ್ಸೆ ನೀಡಲಾಗುವುದು. ಈ ಭಾಗದ ಜನರಿಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು’ ಎಂದು ಭರವಸೆ ನೀಡಿದರು.

ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎಸ್.ನವೀನ್, ಆಡಳಿತ ಮಂಡಳಿ ಸದಸ್ಯರಾದ ಕೆ.ವಿ.ಪ್ರಭಾಕರ್, ಎನ್.ಲಿಂಗಮೂರ್ತಿ, ಪಟೇಲ್ ಶಿವಕುಮಾರ್, ಹರ್ತಿಕೋಟೆ ವೀರೇಂದ್ರಸಿಂಹ, ಬಸವರಾಜ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.