ADVERTISEMENT

ಜಾತ್ರೆ: ಭಕ್ತರಿಗೆ ಶುದ್ಧ ನೀರು ಪೂರೈಸಲು ಸೂಚನೆ

ಫೆ.27ರಿಂದ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ; ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಡಿಸಿ ಕುಮಾರಸ್ವಾಮಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 6:11 IST
Last Updated 20 ಫೆಬ್ರುವರಿ 2026, 6:11 IST
ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಅಂಗವಾಗಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿದರು
ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಅಂಗವಾಗಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿದರು   

ಚಿತ್ರದುರ್ಗ: ‘ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ರಾಜ್ಯ, ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಭಕ್ತರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಫೆ. 27 ರಿಂದ ಮಾರ್ಚ್ 9ರವರೆಗೆ ನಡೆಯಲಿರುವ ಜಾತ್ರೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ನೀರಿನ ಟ್ಯಾಂಕ್‍ಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ನೀರು ಕಲುಷಿತವಾಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪಂಚಾಯಿತಿ ನೀರು ಪರೀಕ್ಷಾ ಘಟಕದಿಂದ ವರದಿ ಪಡೆಯಬೇಕು. ನೀರು ಪೂರೈಕೆಯ ಮೂಲ ಮತ್ತು ವಿತರಣಾ ಕೇಂದ್ರಗಳಲ್ಲಿ ನೀರಿನ ಮಾದರಿ ಪರಿಶೀಲಿಸಬೇಕು. ಜಾತ್ರೆಗೆ ಬರುವ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೀರಿನ ತೊಟ್ಟಿಗಳನ್ನು ತಕ್ಷಣವೇ ದುರಸ್ತಿಗೊಳಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮವಹಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಭಕ್ತಾದಿಗಳಿಗೆ ಬಿಸಿಲಿನ ತಾಪ ತಟ್ಟದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸ್ಥಳೀಯವಾಗಿ ಓಆರ್‌ಎಸ್‌ ಮತ್ತು ಅಗತ್ಯ ಔಷಧಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಬಿಸಿಲಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಫಲಕಗಳನ್ನು ಅಲ್ಲಲ್ಲಿ ಹಾಕಬೇಕು’ ಎಂದರು.

‘ತುರ್ತು ಪರಿಸ್ಥಿತಿ ಎದುರಿಸಲು ಜಾತ್ರಾ ಸಮಯದಲ್ಲಿ 4 ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಆ್ಯಂಬ್ಯುಲೆನ್ಸ್‌ಗಳನ್ನು 24 ಗಂಟೆಯೂ ಕಾರ್ಯಾಚರಣೆಯಲ್ಲಿರುವಂತೆ ನಿಯೋಜಿಸಲಾಗಿದೆ. ಸಮೀಪದ ಸಿ.ಎಚ್.ಸಿಯಲ್ಲಿ ಒಟ್ಟು 60 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಮಕ್ಕಳ ವೈದ್ಯರು ಸೇರಿದಂತೆ ತಜ್ಞ ವೈದ್ಯರ ತಂಡವು ಸ್ಥಳದಲ್ಲಿ ಲಭ್ಯವಿರಲಿದೆ. ಅಂದಾಜು 200 ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಚಳ್ಳಕೆರೆ ತಾಲ್ಲೂಕು ಆರೋಗ್ಯಾಧಿಕಾರಿ ಕಾಶಿ ತಿಳಿಸಿದರು.

‘ಪಾರ್ಕಿಂಗ್ ಸ್ಥಳಗಳಲ್ಲಿಯೂ ಲೈಟಿಂಗ್ ವ್ಯವಸ್ಥೆ ಹಾಗೂ ಕಣ್ಗಾವಲು ಹೆಚ್ಚಿಸಲು ಈಗಾಗಲೇ ಇರುವ 24 ಸಿ.ಸಿ.ಟಿ.ವಿ ಕ್ಯಾಮೆರಾ ಜೊತೆಗೆ ಹೆಚ್ಚುವರಿಯಾಗಿ 50 ಹೊಸ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕಿದೆ. ಯಾವುದೇ ಅನಾಹುತ ತಡೆಯಲು ಮತ್ತು ತುರ್ತು ರಕ್ಷಣಾ ಕಾರ್ಯಗಳಿಗಾಗಿ ಎನ್‌ಡಿಆರ್‌ಎಫ್‌ ತಂಡ ನಿಯೋಜನೆ, ಜನಸಂದಣಿ ನಿಯಂತ್ರಿಸಲು ಮತ್ತು ಅಗತ್ಯ ಮಾಹಿತಿ ನೀಡಲು ಜಾತ್ರೆಯ ವಿವಿಧೆಡೆ ಧ್ವನಿವರ್ಧಕಗಳ ಅಳವಡಿಸಬೇಕು. ವಿದ್ಯುತ್ ವ್ಯತ್ಯಯವಾದರೂ ಉದ್ಘೋಷಣೆ ಮುಂದುವರಿಯಲು ಜನರೇಟರ್ ಬ್ಯಾಕಪ್ ವ್ಯವಸ್ಥೆ ಕಲ್ಪಿಸಬೇಕು’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

‘ರಥಬೀದಿಯಲ್ಲಿರುವ ಹಳೆಯ ಮತ್ತು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಗುರುತಿಸಿ, ಅವುಗಳ ಮೇಲೆ ಜನರು ಹತ್ತದಂತೆ ಎಚ್ಚರಿಕೆ ವಹಿಸಿ, ಮಾಲೀಕರಿಗೆ ನೋಟಿಸ್ ನೀಡಬೇಕು’ ಎಂದು ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.

ಬ್ಯಾನರ್ ಮುಕ್ತ ಜಾತ್ರೆ: ಈ ಬಾರಿಯ ಜಾತ್ರೆಯಲ್ಲಿ ರಾಜಕೀಯ ಮತ್ತು ವೈಯಕ್ತಿಕ ಪ್ರಚಾರದ ಬ್ಯಾನರ್‌ಗಳಿಗೆ ಅವಕಾಶವಿರುವುದಿಲ್ಲ. ಕೇವಲ ಸಾರ್ವಜನಿಕ ಮಾಹಿತಿ ನೀಡುವ ಸೂಚನಾ ಫಲಕಗಳು ಮತ್ತು ದೇವಸ್ಥಾನದ ಅಧಿಕೃತ ಸ್ವಾಗತ ಫಲಕಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಉಳಿದ ಯಾವುದೇ ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸಲು ಅಧಿಕಾರಿಗಳು ಕ್ರಮವಹಿಸಬೇಕು’ ಎಂದು ಸೂಚಿಸಿದರು.

ಉಪವಿಭಾಗಾಧಿಕಾರಿ ಕಾಂತರಾಜ್, ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಗಂಗಾಧರ್, ಕೆಎಸ್‍ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ. ಕಾಳೇಸಿಂಗೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಇದ್ದರು.

10 ಕಿ.ಮೀ ಮದ್ಯ ಮಾರಾಟ ಬೇಡ

ಎಎಸ್ಪಿ ಶಿವಕುಮಾರ್ ಮಾತನಾಡಿ ‘ಕಳೆದ ವರ್ಷ 5 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಈ ಬಾರಿ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯನ್ನು 10 ಕಿ.ಮೀ ಗೆ ವಿಸ್ತರಿಸಲು ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾತ್ಕಾಲಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಮತ್ತು ಜಾತ್ರೆಯಲ್ಲಿ ವಿತರಿಸುವ ಪ್ರಸಾದದ ಗುಣಮಟ್ಟ ಪರೀಕ್ಷಿಸಲು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.