ADVERTISEMENT

ಉತ್ಸವ, ಕೆಂಡಾರ್ಚನೆ: 50 ಭಕ್ತರಿಗಷ್ಟೇ ಅವಕಾಶ

ನವರಾತ್ರಿ: ದೇವತೆಗಳಿಗೆ ನಿತ್ಯವೂ ಆಕರ್ಷಕ ಅಲಂಕಾರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 11:40 IST
Last Updated 18 ಅಕ್ಟೋಬರ್ 2020, 11:40 IST
ಚಿತ್ರದುರ್ಗದ ಬರಗೇರಮ್ಮ ದೇವಿಗೆ ಮೆಕ್ಕೆಜೋಳಗಳಿಂದ ವಿಶೇಷವಾಗಿ ಅಲಂಕರಿಸಿರುವುದು
ಚಿತ್ರದುರ್ಗದ ಬರಗೇರಮ್ಮ ದೇವಿಗೆ ಮೆಕ್ಕೆಜೋಳಗಳಿಂದ ವಿಶೇಷವಾಗಿ ಅಲಂಕರಿಸಿರುವುದು   

ಚಿತ್ರದುರ್ಗ: ಕೋಟೆನಗರಿಯ ನವದುರ್ಗಿಯರು ಸೇರಿ ಇಲ್ಲಿನ ಶಕ್ತಿದೇವತೆಗಳಿಗೆ ನವರಾತ್ರಿ ಮಹೋತ್ಸವದ ಅಂಗವಾಗಿ ಒಂಬತ್ತು ದಿನವೂ ಪೂಜೆ ನೆರವೇರಲಿದೆ. ಆದರೆ ಉತ್ಸವ, ಕೆಂಡಾರ್ಚನೆ ಸೇರಿ ವಿಶೇಷ ಪೂಜೆಗಳಲ್ಲಿ ಭಾಗವಹಿಸಲು ಜಿಲ್ಲಾಡಳಿತ 50 ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಿದೆ.

ಕೋವಿಡ್‌ ಸಂಖ್ಯೆ ಹೆಚ್ಚುತ್ತಿರುವ ಕಾರಣ ತಪ್ಪದೇ ಮಾರ್ಗಸೂಚಿ ಪಾಲಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ತಾಲ್ಲೂಕು ಆಡಳಿತ ದೇಗುಲಗಳಿಗೆ ರವಾನಿಸಿದೆ. ಇಲ್ಲಿನ ಶಕ್ತಿದೇವತೆಗಳನ್ನು ಒಂಬತ್ತು ರಾತ್ರಿ ಹಾಗೂ ಹತ್ತು ಹಗಲು ಪೂಜೆ ಸಲ್ಲಿಸುವ ಮೂಲಕ ಚಿತ್ರದುರ್ಗದ ಭಕ್ತರು ಶ್ರದ್ಧಾಭಕ್ತಿಯಿಂದ ನವರಾತ್ರಿ ಉತ್ಸವವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಆಚರಿಸಲು ಮುಂದಾಗಿದ್ದಾರೆ. ಆದರೆ, ಎಂದಿಗಿಂತಲೂ ಸರಳವಾಗಿ ಆಚರಿಸಲು ತೀರ್ಮಾನಿಸಿದ್ದಾರೆ.

ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ, ಪಾಳೆಗಾರರ ಕುಲದೈವ ಉಚ್ಚಂಗಿಯಲ್ಲಮ್ಮ, ಕಣಿವೆಮಾರಮ್ಮ, ಚೌಡೇಶ್ವರಿ, ಬರಗೇರಮ್ಮ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲಗಳಲ್ಲಿ ಮೂಲ ಮತ್ತು ಉತ್ಸವಮೂರ್ತಿಗಳಿಗೆ ನವರಾತ್ರಿಯಲ್ಲಿ ನಿತ್ಯವೂ ವಿವಿಧ ಬಗೆಯ ಅಲಂಕಾರಗಳು ನಡೆಯಲಿದ್ದು, ಅ. 27ರ ವರೆಗೂ ಭಕ್ತರ ಕಣ್ಮನ ಸೆಳೆಯಲಿವೆ.

ADVERTISEMENT

ನವರಾತ್ರಿ ಸಂದರ್ಭದಲ್ಲಿ ನವದುರ್ಗಿಯರನ್ನು ಪೂಜಿಸುವುದು ವೈಶಿಷ್ಟ್ಯ. ಪುಷ್ಪ, ನವಧಾನ್ಯ, ತರಕಾರಿ, ಆಹಾರ ಪದಾರ್ಥ, ರೇಷ್ಮೆ ಸೀರೆ ಹೀಗೆ ವಿವಿಧ ಬಗೆಯ ವಸ್ತುಗಳಿಂದ ವೈಭವೋಪೇತವಾಗಿ ನಿತ್ಯ ಸಿಂಗರಿಸಲಾಗುತ್ತದೆ.

ಏಕನಾಥೇಶ್ವರಿ ದೇಗುಲದಲ್ಲಿ ಶರನ್ನವರಾತ್ರಿ ಅಂಗವಾಗಿ ಪ್ರತಿನಿತ್ಯ ಬೆಳಿಗ್ಗೆ ವಿಶೇಷ ಪೂಜೆ ನಡೆಯುತ್ತಿದೆ ಎಂದು ದೇಗುಲ ಅಭಿವೃದ್ಧಿ ಸಮಿತಿ ಹಾಗೂ ಭಕ್ತಮಂಡಳಿ ತಿಳಿಸಿದೆ.ನಗರದ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವತೆಯ ದೇಗುಲದಲ್ಲಿ ನವರಾತ್ರಿಯ ಎರಡನೇ ದಿನವಾದ ಭಾನುವಾರ ಮೆಕ್ಕೆಜೋಳಗಳಿಂದ ವಿಶೇಷವಾಗಿ ದೇವಿಯನ್ನು ಅಲಂಕರಿಸಲಾಗಿತ್ತು.

‘ಒಂಬತ್ತು ದಿನವೂ ಅಲಂಕಾರ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಮಾತ್ರ ನಿತ್ಯ ಬೆಳಿಗ್ಗೆ 5.30ಕ್ಕೆ ದೇವಿಗೆ ಮಹಾಮಂಗಳಾರತಿ, ಬನ್ನಿ ಪೂಜೆ ನಡೆಯಲಿದೆ. ದರ್ಶನಕ್ಕೆ ರಾತ್ರಿ 8ರ ವರೆಗೂ ಅವಕಾಶ ಕಲ್ಪಿಸಲಾಗಿದೆ. ಕೋವಿಡ್‌ ಕಾರಣಕ್ಕೆ ಕಡಿಮೆ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅ.27ರಂದು ರಾತ್ರಿ 8ಕ್ಕೆ ದೇವಿಯ ಕೆಂಡಾರ್ಚನೆ ಮಹೋತ್ಸವ ಜರುಗಲಿದೆ’ ಎಂದುಬರಗೇರಮ್ಮ ದೇಗುಲದ ಅರ್ಚಕ ಪೂಜಾರ್ ಸತ್ಯಪ್ಪ ತಿಳಿಸಿದ್ದಾರೆ.

ನಗರದ ಕಣಿವೆಮಾರಮ್ಮ ದೇಗುಲದಲ್ಲೂ ನವರಾತ್ರಿಯ ಒಂಬತ್ತು ದಿನವೂ ವಿಶೇಷ ಅಲಂಕಾರದ ಜತೆಗೆ ಪೂಜೆ ನಡೆಯಲಿದೆ.ಜೋಗಿಮಟ್ಟಿ ರಸ್ತೆಯಲ್ಲಿರುವ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿ ದೇಗುಲದಲ್ಲಿ ನವರಾತ್ರಿ ಉತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದು ತಿಪ್ಪಿನಘಟ್ಟಮ್ಮ ದೇಗುಲ ಅಭಿವೃದ್ಧಿ ಸಮಿತಿ ತಿಳಿಸಿದೆ.

ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ, ಅಂಬಾಭವಾನಿ, ಗೋಪಾಲಪುರದ ದುರ್ಗಾಪರಮೇಶ್ವರಿ, ಕರುವಿನಕಟ್ಟೆ ವೃತ್ತದ ಅಂತರಘಟ್ಟಮ್ಮ, ಕೋಟೆಯಲ್ಲಿನ ಬನಶಂಕರಮ್ಮ, ಬುರುಜನಹಟ್ಟಿಯ ಬನಶಂಕರಿ, ರೇಣುಕಾಯಲ್ಲಮ್ಮ ದೇವಿ ದೇಗುಲಗಳಲ್ಲೂ ನವರಾತ್ರಿಯ ವಿಶೇಷ ಪೂಜೆಗಳು ಈಗಾಗಲೇ ಜರುಗುತ್ತಿವೆ.

ಉಚ್ಚಂಗಿಯಲ್ಲಮ್ಮ ಕೆಂಡೋತ್ಸವ ರದ್ದು
‘ಉಚ್ಚಂಗಿಯಲ್ಲಮ್ಮ ದೇಗುಲದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಉತ್ಸವ ಮೂರ್ತಿಯನ್ನು ನವರಾತ್ರಿ ಪೂಜೆಗೆ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದೆ. ವಿಜಯದಶಮಿ ದಿನ ನಡೆಯಬೇಕಿದ್ದಬನ್ನಿಮಹಾಕಾಳಮ್ಮ,ಉಚ್ಚಂಗಿಯಲ್ಲಮ್ಮ ದೇವಿಯ ಕೆಂಡೋತ್ಸವ ರದ್ದುಗೊಳಿಸಲಾಗಿದೆ’ ಎಂದು ಅರ್ಚಕ ಅಭಿಷೇಕ್ ತಿಳಿಸಿದ್ದಾರೆ.

‘ಪ್ರತಿ ವರ್ಷ ದೇವಿಯ ಕೆಂಡೋತ್ಸವವೂ ಸಂತೆಹೊಂಡ ಸಮೀಪದ ಬನ್ನಿಮಹಾಕಾಳಮ್ಮ ದೇಗುಲದ ಮುಂಭಾಗ ನಡೆಯುತ್ತದೆ. ಮುಖ್ಯ ರಸ್ತೆಯಲ್ಲಿ ಕಡಿಮೆ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಆಚರಿಸಲು ಸಾಧ್ಯವಿಲ್ಲ. ಆದರೆ, ದೇವಿಯ ಉತ್ಸವ ಮೂರ್ತಿಯನ್ನು ಇಲ್ಲಿಗೆ ಕರೆತಂದು, ಬನ್ನಿ ಮುಡಿಯುವ ಸಂಪ್ರದಾಯ ಎಂದಿನಂತೆ ಸರಳವಾಗಿ ನಡೆಯಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.