ನಾಯಕನಹಟ್ಟಿ: ದೂರವಾಣಿ ಕ್ಷೇತ್ರದಲ್ಲಿ ಗ್ರಾಹಕರ ಪ್ರಮುಖ ಸೇವಾ ಸ್ಥಳವಾಗಿದ್ದರೂ ಈಗ ಆ ಗತವೈಭವ ಸಾಕ್ಷಿಯಂತೆ ಇರುವ ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿಯು ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿದೆ. ಪದೇಪದೇ ಮೊಬೈಲ್ ಸಂಪರ್ಕ ಕಡಿತವಾಗುತ್ತಿದ್ದು, ಸತತ 11 ದಿನಗಳಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ನಾಯಕನಹಟ್ಟಿಯಲ್ಲಿ ಇತಿಹಾಸ ಪ್ರಸಿದ್ಧ ಗುರು ತಿಪ್ಪೇರುದ್ರಸ್ವಾಮಿ ಒಳಮಠ, ಹೊರಮಠ, ಏಕಾಂತ ಮಠಗಳಿದ್ದು, ನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ಹಾಗೇ ಹೋಬಳಿಯು 48 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದ್ದು, ನಿತ್ಯ ರೈತರು, ಸಾರ್ವಜನಿಕರು, ಶಾಲೆ– ಕಾಲೇಜುವಿದ್ಯಾರ್ಥಿಗಳು, ವ್ಯಾಪಾರ ವಹಿವಾಟು ಸೇರಿ ಹಲವು ಕಾರ್ಯಗಳಿಗೆ ನಾಯಕನಹಟ್ಟಿ ಪಟ್ಟಣಕ್ಕೆ ಬಂದು ಹೋಗುತ್ತಾರೆ. ಇಲ್ಲಿನ ಬಿಎಸ್‌ಎನ್‌ಎಲ್ ಕಚೇರಿಯು ತನ್ನ ಗ್ರಾಹಕರಿಗೆ ಸಮರ್ಪಕ ಸೇವೆ ನೀಡುವಲ್ಲಿ ವಿಫಲವಾಗಿದೆ. ಇದರಿಂದ ಬಿಎಸ್‌ಎನ್‌ಎಲ್ ಮೊಬೈಲ್ ಗ್ರಾಹಕರು ಪಟ್ಟಣದಲ್ಲಿ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಪಟ್ಟಣದ ಪಾದಗಟ್ಟೆಯ ಹಿಂಭಾಗದಲ್ಲಿ ಅಂದಾಜು ಅರ್ಧ ಎಕರೆಯಷ್ಟು ಜಾಗದಲ್ಲಿ 30 ವರ್ಷಗಳ ಹಿಂದೆ ಬಿಎಸ್‌ಎನ್‌ಎಲ್ ಕಚೇರಿ ನಿರ್ಮಾಣವಾಗಿತ್ತು. ಜತೆಗೆ ಸುಸಜ್ಜಿತ ಕಾಂಪೌಂಡ್ ವ್ಯವಸ್ಥೆ ಸೇರಿ ಕಚೇರಿಗೆ ಅಗತ್ಯವಾಗಿ ಬೇಕಾದ ಎಲ್ಲ ಮೂಲ ಸೌಕರ್ಯಗಳೂ ಇದ್ದವು.
ಬಿಎಸ್‌ಎನ್‌ಎಲ್ ಕಚೇರಿ ಆರಂಭದಲ್ಲಿ ನಾಯಕನಹಟ್ಟಿ ಸೇರಿ ಸುತ್ತಮುತ್ತಲ 48 ಗ್ರಾಮಗಳಿಗೆ ಹಾಗೂ ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಕಂಪನಿಗಳ ಕಚೇರಿಗಳಿಗೆ, ಶಾಲೆ– ಕಾಲೇಜುಗಳು, ಬ್ಯಾಂಕ್‌ಗಳು ಸೇರಿ 3,000ಕ್ಕೂ ಅಧಿಕ ದೂರವಾಣಿ ಸಂಪರ್ಕವನ್ನು ಕಲ್ಪಿಸುವ ಮೂಲಕ ಯಾವಾಗಲೂ ಸಾರ್ವಜನಿಕರು, ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿಯಿಂದ ಕಚೇರಿ ತುಂಬಿರುತಿತ್ತು. 2004ರಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಸಂಪರ್ಕವನ್ನು ಪೂರೈಸಿದಾಗ ಸಿಮ್‌ಕಾರ್ಡ್‌ಗಳಿಗೆ ಹಗಲಿರುಳು ಸರತಿ ಸಾಲಿನಲ್ಲಿ ನೀಂತು ಸಿಮ್‌ಕಾರ್ಡ್‌ಗಳನ್ನು ಖರೀದಿಸುತ್ತಿದ್ದ ಉದಾಹರಣೆಗಳಿವೆ.
2017ರವರೆಗೆ ನಾಯಕನಹಟ್ಟಿಯಲ್ಲಿ ಬಿಎಸ್‌ಎನ್‌ಎಲ್ ಕಚೇರಿಯು ಸ್ಥಿರದೂರವಾಣಿಯ ಜತೆಗೆ ಮೊಬೈಲ್ ಸಂಪರ್ಕದ ವ್ಯವಸ್ಥೆಯೂ ಉತ್ತಮವಾಗಿತ್ತು. ಆದರೆ 2018ರ ನಂತರ ಕಚೇರಿಯಲ್ಲಿದ್ದ ಎಲ್ಲ ಸಿಬ್ಬಂದಿ ಏಕಕಾಲಕ್ಕೆ ನಿವೃತ್ತಿ ಹೊಂದಿದರು. ಗುತ್ತಿಗೆ, ದಿನಗೂಲಿಯಲ್ಲಿ ದುಡಿಯುತ್ತಿದ್ದ ಎಲ್ಲ ಕಾರ್ಮಿಕರನ್ನೂ ಕೆಲಸದಿಂದ ತೆಗೆದು ಹಾಕಲಾಯಿತು. ಕಚೇರಿಯಲ್ಲಿ ಯಾರೂ ಇಲ್ಲದಂತಾಗಿ ಬಿಎಸ್‌ಎನ್‌ಎಲ್ ಸೇವೆ ಕ್ಷೀಣಿಸುತ್ತಾ ಬಂದಿತು. ಅಂತಿಮವಾಗಿ ಸ್ಥಿರದೂರವಾಣಿ ಸಂಪರ್ಕಗಳೆಲ್ಲವೂ ಇತಿಹಾಸದ ಪುಟ ಸೇರುವಂತಾಯಿತು.
ಇದರಿಂದ ಬಿಎಸ್‌ಎನ್‌ಎಲ್ ಕಚೇರಿಯು ದಿನಕಳೆದಂತೆ ನಿರ್ವಹಣೆಯ ಕೊರತೆಯಿಂದ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಎಲ್ಲೆಂದರಲ್ಲಿ ಕಸದ ರಾಶಿ, ನೀರಿನ ವ್ಯವಸ್ಥೆ ಇಲ್ಲದೆ ಗಿಡ–ಮರಗಳು ಒಣಗಿ ವಿಷಜಂತುಗಳ ವಾಸಸ್ಥಳವಾಗಿ ರೂಪುಗೊಂಡಿದೆ. ಪ್ರಸ್ತುತ ಬಿಎಸ್‌ಎನ್‌ಎಲ್ ಕಚೇರಿ ಎಂದರೆ ‘ಭೂತಗಳು ವಾಸಿಸುವ ಬಂಗಲೆ’ಯಂತೆ ಭಾಸವಾಗುತ್ತಿದೆ. 5 ವರ್ಷಗಳಿಂದ ಎಂಜಿನಿಯರ್, ತಾಂತ್ರಿಕ ಸಿಬ್ಬಂದಿ ಸೇರಿ ಯಾರೂ ಇಲ್ಲದೆ ಇಡೀ ಕಚೇರಿ ಬಿಕೋ ಎನ್ನುತ್ತಿದೆ.
ಪ್ರಸ್ತುತ ನಾಯಕನಹಟ್ಟಿ ಪಟ್ಟಣ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ 2,000ಕ್ಕೂ ಹೆಚ್ಚು ಮೊಬೈಲ್ ಗ್ರಾಹಕರಿದ್ದು, ಬಿಎಸ್‌ಎನ್‌ಎಲ್ ಸಂಖ್ಯೆಗಳನ್ನೇ ತಮ್ಮ ಆಧಾರ್, ಬ್ಯಾಂಕಿಂಗ್ ಸೇವೆ, ಅನಿಲ ಸಂಪರ್ಕ ಸೇರಿ ಹತ್ತಾರು ಸೇವೆಗಳಿಗೆ ಬಳಸಿಕೊಂಡಿದ್ದಾರೆ. ಆದರೆ, ಹಲವು ದಿನಗಳಿಂದ ಬಿಎಸ್‌ಎನ್‌ಎಲ್ ಮೊಬೈಲ್ ಸೇವೆಯ ಸಂಪರ್ಕ ನಿರ್ವಹಣೆಯ ಕೊರತೆಯಿಂದ ಗ್ರಾಹಕರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಕಂಪನಿ ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ದೂರು ನೀಡಲು ಮುಂದಾದರೆ ಯಾವ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ. ಹಾಗಾಗಿ, ಚಳ್ಳಕೆರೆ ಮತ್ತು ದಾವಣಗೆರೆಯ ಬಿಎಸ್‌ಎನ್‌ಎಲ್ ಕಚೇರಿಯ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಜೆ.ಆರ್. ರವಿಕುಮಾರ್, ಗ್ರಾಮಸ್ಥರಾದ ರಾಜಣ್ಣ, ಸುರೇಶ್, ನಡುಮಯ್ಯ ಒತ್ತಾಯಿಸಿದ್ದಾರೆ.
ಸಮಸ್ಯೆ ಕುರಿತು ಮಾಹಿತಿ ಪಡೆಯಲು ಚಳ್ಳಕೆರೆಯ ಬಿಎಸ್‌ಎನ್‌ಎಲ್ ಕಚೇರಿ ಸಹಾಯಕ ತಾಂತ್ರಿಕ ಅಧಿಕಾರಿಯನ್ನು ಸಂಪರ್ಕಿಸಲು ಕರೆ ಮಾಡಿದರೆ ಅವರು ಸ್ವೀಕರಿಸಲಿಲ್ಲ.
6 ದಿನಗಳಿಂದ ಮೊಬೈಲ್ ಸೇವೆ ಇಲ್ಲದಿರುವುದರಿಂದ ಸಾಕಷ್ಟು ತೊಂದರೆಯಾಗಿದೆ. ಚಳ್ಳಕೆರೆಯ ಬಿಎಸ್‌ಎನ್‌ಎಲ್ ಸಹಾಯಕ ತಾಂತ್ರಿಕ ಅಧಿಕಾರಿಗೆ ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲಪಿ.ಎಂ.ತಿಪೇಸ್ವಾಮಿ ಗ್ರಾಹಕ
ಬಿಎಸ್‌ಎನ್‌ಎಲ್ ಕಚೇರಿಯು ನಿರ್ವಹಣೆ ಇಲ್ಲದೆ ಅವನತಿ ಹಂತ ತಲುಪಿದೆ. ಕಳ್ಳಕಾಕರ ಹಾವಳಿ ಸೇರಿ ಇಡೀ ಕಚೇರಿಯು ಅಕ್ರಮ ಚಟುವಟಿಕೆಗಳ ತಾಣವಾಗಿದೆಪಿ.ರುದ್ರೇಶ್ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.