ಮೊಳಕಾಲ್ಮುರು: ‘ಇಲ್ಲಿಗೆ ಮಂಜೂರಾಗಿರುವ ನೂತನ 200 ಹಾಸಿಗೆಗಳ ಆಸ್ಪತ್ರೆಯನ್ನು ಎಲ್ಲಿ ನಿರ್ಮಿಸಬೇಕು ಎಂಬ ಬಗ್ಗೆ ಬೆಂಗಳೂರಿನಲ್ಲಿ ಶಾಸಕರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ ನಂತರ ಅಂತಿಮಗೊಳಿಸಲಾಗುವುದು’ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮೊಳಕಾಲ್ಮುರಿನಲ್ಲಿ ನೂತನ ಆಸ್ಪತ್ರೆ ನಿರ್ಮಿಸಲು ಸ್ಥಳ ವೀಕ್ಷಣೆಗಾಗಿ ಶುಕ್ರವಾರ ಬಂದಿದ್ದ ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
‘ಈಗಿರುವ 100 ಹಾಸಿಗೆ ಆಸ್ಪತ್ರೆಗೆ ಹೊಂದಾಣಿಕೆ ಮಾಡಿಕೊಂಡು ಹೆಚ್ಚುವರಿ ಕಟ್ಟಡ ನಿರ್ಮಿಸಲು ಸ್ಥಳದ ಕೊರತೆ ಕಾಡುತ್ತಿದೆ. ಒಂದು ವೇಳೆ ನಿರ್ಮಿಸಿದಲ್ಲಿ ಕಿಷ್ಕಿಂದೆ ಸಮಸ್ಯೆ ಜತೆ ಭವಿಷ್ಯದಲ್ಲಿ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು ಸೇರಿ ಯಾವುದೇ ಉನ್ನತೀಕರಣ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲದಂತಾಗುತ್ತದೆ. ಹಾನಗಲ್ ರಸ್ತೆಯಲ್ಲಿ 5 ಎಕರೆಯಷ್ಟು ಸ್ಥಳ ನಿಗದಿ ಮಾಡಲಾಗಿದ್ದು, ಇಲ್ಲಿ ಆಸ್ಪತ್ರೆ ನಿರ್ಮಿಸಲು ಸೂಕ್ತವಾಗಿದೆ. ಸಿಬ್ಬಂದಿ ವಸತಿಗೃಹ ನಿರ್ಮಿಸಲೂ ಸಾಧ್ಯವಿದೆ. ಎರಡೂ ಸ್ಥಳಗಳನ್ನು ವೀಕ್ಷಿಸಲಾಗಿದೆ’ ಎಂದು ಹೇಳಿದರು.
‘ಈ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಮಾಡಿದ್ದ ಮನವಿಗೆ ಸ್ಪಂದಿಸಿ ಸರ್ಕಾರ ಆಸ್ಪತ್ರೆ ಮಂಜೂರು ಮಾಡಿದೆ. ಕಾಮಗಾರಿ ವಿಳಂಬ ಮಾಡುವಂತಿಲ್ಲ. ₹ 100 ಕೋಟಿಗೂ ಹೆಚ್ಚು ಅನುದಾನ ಮಂಜೂರು ಮಾಡಲಾಗಿದೆ. ಇದರಲ್ಲಿ ಕಟ್ಟಡ, ವೈದ್ಯಕೀಯ ಉಪಕರಣ, ಸಿಬ್ಬಂದಿ ವೇತನ, ಸಿಬ್ಬಂದಿ ವಸತಿಗೃಹ ನಿರ್ಮಾಣ ಸೇರಿಸಲಾಗಿದೆ. ಭವಿಷ್ಯಕ್ಕೆ ಉತ್ತಮ ಆಸ್ಪತ್ರೆಯೊಂದನ್ನು ಕೊಡುಗೆ ನೀಡುವ ನಿಟ್ಟಿನಲ್ಲಿ ಉತ್ತಮ ತೀರ್ಮಾನ ಮಾಡಬೇಕಿದೆ’ ಎಂದು ಹೇಳಿದರು.
‘ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿ ಸಮಸ್ಯೆ ಸೇರಿ ಕೆಲ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. 3 ದಿನಗಳ ಒಳಗಾಗಿ ಆರ್ಥೋಪಿಡಿಕ್ ವೈದ್ಯರ ವ್ಯವಸ್ಥೆ ಮಾಡಲಾಗುವುದು. ಉಳಿಕೆ ಸಮಸ್ಯೆ ಸರಿಪಡಿಸಲು ಸೂಚಿಸಲಾಗಿದೆ. ರಾಜ್ಯದ ತಾಲ್ಲೂಕು ಆಸ್ಪತ್ರೆಗಳಲ್ಲಿ ಕಾಡುತ್ತಿರುವ ಸಿಬ್ಬಂದಿ ಮತ್ತು ತಂತ್ರಜ್ಞರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಇದೇ ವೇಳೆ ಸಚಿವರು ಸಾರ್ವಜನಿಕ ಆಸ್ಪತ್ರೆ ಒಳರೋಗಿಗಳ ವಿಭಾಗಕ್ಕೆ ಭೇಟಿ ನೀಡಿ ರೋಗಿಗಳಿಂದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಸಾರ್ವಜನಿಕರು ಸಮಸ್ಯೆ ಮತ್ತು ಕೈಗೊಳ್ಳಬೇಕಿರುವ ವ್ಯವಸ್ಥೆ ಕುರಿತು ಮನವಿ ಮಾಡಿದರು.
ಕೆಲ ಮುಖಂಡರು, ‘ಉನ್ನತೀಕರಣ ಆಸ್ಪತ್ರೆಯನ್ನು ಈಗಿರುವ ಸ್ಥಳದಲ್ಲಿ ನಿರ್ಮಿಸಬೇಕು. ಹಾನಗಲ್ ಬಳಿ ನಿರ್ಮಿಸಿದಲ್ಲಿ ಹೋಗಿ ಬರಲು ದೂರವಾಗುತ್ತದೆ’ ಎಂದು ಕೋರಿದರು.
ಶಾಸಕ ಎನ್.ವೈ. ಗೋಪಾಲಕೃಷ್ಣ, ರಾಜ್ಯ ದ್ರಾಕ್ಷಾರಸ ಹಾಗೂ ವೈನ್ ಬೋರ್ಡ್ ಅಧ್ಯಕ್ಷ ಬಿ.ಯೋಗೇಶ್ ಬಾಬು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೇಣುಕಾಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಕೆ. ಕಲೀಂವುಲ್ಲಾ, ನಾಗೇಶ್ ರೆಡ್ಡಿ, ಮುಖಂಡರಾದ ಜಿ. ಪ್ರಕಾಶ್, ಬಿ.ಟಿ. ನಾಗಭೂಷಣ, ಮೊಗಲಹಳ್ಳಿ ಜಯಣ್ಣ, ರಾಂಪುರ ವಿಜಯಕುಮಾರ್, ದಾದಾಪೀರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಅಭಿನವ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.