
ಚಿತ್ರದುರ್ಗ: ‘ಈ ಹಿಂದೆ ಪರೀಕ್ಷಾ ಅಕ್ರಮ ನಡೆದರೆ ಕೇವಲ ಇಲಾಖಾ ವಿಚಾರಣೆ ನಡೆಸಿ ಅಮಾನತು ಮಾಡಲಾಗುತ್ತಿತ್ತು. ಆದರೆ, ಈಗ ಪರೀಕ್ಷಾ ಅಕ್ರಮ ತಡೆಗೆ ಹೊಸ ಕಾನೂನು ಜಾರಿಗೆ ಬಂದಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಹೊಸ ಕಾನೂನಿನಂತೆ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ’ ಎಂದು ಸೂಚಿಸಿದರು.
‘ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಸುಗಮ ಹಾಗೂ ಗೊಂದಲ ರಹಿತವಾಗಿ ಪರೀಕ್ಷೆ ನಡೆಸಬೇಕು. ಮುಕ್ತ ಮತ್ತು ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸುವ ಉದ್ದೇಶದಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿಯೂ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸುವುದರೊಂದಿಗೆ ವೆಬ್‌ಕಾಸ್ಟಿಂಗ್ ಮೂಲಕ ಬೆಂಗಳೂರಿನಿಂದಲೂ ನೇರ ನಿಗಾ ಇಡಲಾಗುತ್ತಿದೆ’ ಎಂದು ತಿಳಿಸಿದರು.
‘ಪರೀಕ್ಷಾ ಭದ್ರತೆಯ ದೃಷ್ಟಿಯಿಂದ ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಿಂದ ಕೇಂದ್ರಗಳಿಗೆ ಸಾಗಿಸುವಾಗ ಮತ್ತು ಉತ್ತರ ಪತ್ರಿಕೆಗಳನ್ನು ಅಂಚೆ ಕಚೇರಿಗೆ ತಲುಪಿಸುವಾಗ ಶಸ್ತ್ರಸಜ್ಜಿತ ಪೊಲೀಸ್ ಭದ್ರತೆ ಇರಬೇಕು. ಪರೀಕ್ಷಾ ಕೇಂದ್ರಗಳಲ್ಲಿ ತಹಶೀಲ್ದಾರ್ ನೇತೃತ್ವದ ತ್ರಿಸದಸ್ಯ ಸಮಿತಿ ಕಡ್ಡಾಯವಾಗಿ ಹಾಜರಿರಬೇಕು. ಯಾವುದೇ ಅಡೆತಡೆಯಿಲ್ಲದಂತೆ ಸಿ.ಸಿ.ಟಿ.ವಿ. ಕಾರ್ಯನಿರ್ವಹಿಸಲು ಇನ್ವರ್ಟರ್ ಅಥವಾ ಯುಪಿಎಸ್ ಬ್ಯಾಕಪ್ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದರು.
‘ಫೆ. 28 ರಿಂದ ಮಾರ್ಚ್ 17ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ–1 ನಡೆಯಲಿದೆ. ಜಿಲ್ಲೆಯಲ್ಲಿ 14,281 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇದರಲ್ಲಿ 12,371 ಹೊಸ ವಿದ್ಯಾರ್ಥಿಗಳು, 1,645 ಪುನರಾವರ್ತಿತ, 173 ಖಾಸಗಿ ಹಾಗೂ 5 ಅಭ್ಯರ್ಥಿಗಳು ಫಲಿತಾಂಶ ಸುಧಾರಣೆಗಾಗಿ ನೋಂದಾಯಿಸಿಕೊಂಡಿದ್ದಾರೆ. 26 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ತಿಮ್ಮಯ್ಯ ತಿಳಿಸಿದರು.
‘ಚಿತ್ರದುರ್ಗ ತಾಲ್ಲೂಕಿನಲ್ಲಿ 10 ಪರೀಕ್ಷಾ ಕೇಂದ್ರಗಳು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ ತಾಲ್ಲೂಕಿನಲ್ಲಿ ತಲಾ 4 ಹಾಗೂ ಮೊಳಕಾಲ್ಮುರು ಮತ್ತು ಹೊಳಲ್ಕೆರೆ ತಾಲ್ಲೂಕಿನಲ್ಲಿ ತಲಾ 2 ಪರೀಕ್ಷಾ ಕೇಂದ್ರಗಳಿವೆ. ಜಿಲ್ಲಾ ಖಜಾನೆಯಲ್ಲಿ ಪ್ರಶ್ನೆ ಪತ್ರಿಕೆಗಳ ಬಂಡಲ್‌ಗಳ ವೀಕ್ಷಣೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಿ.ಸಿ.ಟಿ.ವಿ. ವೀಕ್ಷಣೆ 24 ಗಂಟೆಯೂ ಇರುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದರು.
ಉಪವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್, ಡಿವೈಎಸ್‌ಪಿ ಅನಿಲ್ ನಾಗೇಗೌಡ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್. ಮಂಜುನಾಥ್ ಇದ್ದರು.
ಮೂಲಸೌಕರ್ಯ ಒದಗಿಸಿ
‘ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಿದ್ದು ಇವು ಸುಸ್ಥಿತಿಯಲ್ಲಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಕುಡಿಯುವ ನೀರು ಶೌಚಾಲಯ ಬೆಳಕಿನ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅಗತ್ಯವಿರುವ ಬೆಂಚ್‌ಗಳ ಲಭ್ಯತೆ ಪರಿಶೀಲಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು. ‘ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪರೀಕ್ಷಾ ಮೇಲ್ವಿಚಾರಕರಿಗೂ ಅನ್ವಯಿಸುತ್ತದೆ. ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಮಾತ್ರ ಸಂವಹನಕ್ಕಾಗಿ ಬೇಸಿಕ್ ಕೀಪ್ಯಾಡ್ ಫೋನ್ ಬಳಸಲು ಅವಕಾಶ ನೀಡಲಾಗಿದೆ’ ಎಂದರು.
ಜಿಲ್ಲೆಯ ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳ ಬಗ್ಗೆ ವಿಶೇಷ ನಿಗಾ ವಹಿಸಬೇಕು. ಪರೀಕ್ಷಾ ಕೇಂದ್ರದ ಒಳಗೆ ಕೊಠಡಿ ಮೇಲ್ಚಿಚಾರಕರನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.-ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.