ADVERTISEMENT

ನುಲಿಯ ಚಂದಯ್ಯ ಜಯಂತಿ; ಕಾಯಕ ತತ್ವದ ಮಹತ್ವ ಸಾರಿದ ಶರಣ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:11 IST
Last Updated 10 ಆಗಸ್ಟ್ 2025, 2:11 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ   

ಚಿತ್ರದುರ್ಗ: ‘ಕಾಯಕನಿಷ್ಠ ಯೋಗಿ ಶಿವಶರಣ ನುಲಿಯ ಚಂದಯ್ಯನವರು ಶ್ರೇಷ್ಠ ವಚನಕಾರರು. ತಮ್ಮ ವಚನಗಳ ಮೂಲಕ ಕಾಯಕದ ಮಹತ್ವ ಸಾರಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿಯಲ್ಲಿ ಮಾತನಾಡಿದರು.

‘ಕಾಯಕ ಹಾಗೂ ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದವರಲ್ಲಿ ನುಲಿಯ ಚಂದಯ್ಯರೂ ಒಬ್ಬರಾಗಿದ್ದಾರೆ. ಅವರು ಸುಮಾರು 48 ವಚನಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ’ ಎಂದರು.

ADVERTISEMENT

‘ನುಲಿಯ ಚಂದಯ್ಯ ಚಿತ್ರದುರ್ಗ ಜಿಲ್ಲೆಯಲ್ಲಿ ಓಡಾಡಿದ ಕುರುಹುಗಳು, ಪುರಾವೆಗಳು ಲಭ್ಯವಿದ್ದು, ಸಮಾಜದ ಅಂಕು–ಡೊಂಕು ತಿದ್ದುವಲ್ಲಿ ಹಾಗೂ ಸಮಾಜ ಸುಧಾರಣೆಯಲ್ಲಿ ಅವರ ವಚನಗಳು ದಾರಿದೀಪವಾಗಿವೆ. ತಳವರ್ಗಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮುಖ್ಯವಾಹಿನಿಗೆ ಬರಬೇಕು’ ಎಂದು ಸಲಹೆ ನೀಡಿದರು.

‘ಕಾಯಕನಿಷ್ಠೆ ಹಾಗೂ ಪ್ರಾಮಾಣಿಕತೆಗೆ ದೊಡ್ಡ ಹೆಸರು ನುಲಿಯ ಚಂದಯ್ಯನವರು, ಕೊರಮ ಸಮಾಜದ ಸಾಂಸ್ಕೃತಿಕ ಅಸ್ಮಿತೆಯ ಸಂಕೇತವಾಗಿ, ಆರಾಧಕರಾಗಿ ಜನಮನ್ನಣೆ ಪಡೆದಿದ್ದಾರೆ. ಗುರು, ಲಿಂಗ, ಜಂಗಮ ತತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ವಚನಕಾರ ನುಲಿಯ ಚಂದಯ್ಯನವರು, ಬಸವಣ್ಣನವರ ಕಾಯಕವೇ ಕೈಲಾಸ ಆಶಯವನ್ನು ಅಕ್ಷರಶಃ ತನ್ನ ಬದುಕಿನಲ್ಲಿ ಅನುಸರಿಸಿದ ಅವರ ಬದುಕು ಇಡೀ ಸಮಾಜ ಹಾಗೂ ಜಗತ್ತಿಗೆ ಮಾದರಿಯಾಗಿದೆ’ ಎಂದು ಉಪನ್ಯಾಸಕ ನವೀನ್‌ ಮಸ್ಕಲ್‌ ತಿಳಿಸಿದರು.

‘12ನೇ ಶತಮಾನದಲ್ಲಿ ಕಾಯಕಕ್ಕೆ ಒತ್ತು ನೀಡುವ ಮೂಲಕ ಕೊರಮ ಸಮುದಾಯದ ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದಾರೆ. ಕಾಯಕದ ಮಹತ್ವ ಸಾರಿದ ನುಲಿಯ ಚಂದಯ್ಯನವರು ಕಾಯಕದಲ್ಲಿಯೇ ದೇವರನ್ನು ಕಂಡ ಮಹಾಶರಣರಾಗಿದ್ದಾರೆ’ ಎಂದು ಕೊರಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ ಹೇಳಿದರು.

ಮುಖಂಡರಾದ ಮಹಾದೇವಪ್ಪ, ಅಂಜಿನಮೂರ್ತಿ, ಮಂಜುನಾಥ್‌, ಮಂಜಣ್ಣ, ಮೂರ್ತಪ್ಪ, ಜಯಶೀಲಾ, ಬಸಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.