ಚಿತ್ರದುರ್ಗ: ‘ವೈದ್ಯರಿಗಿಂತ ಶುಶ್ರೂಷಕಿಯರ ಸೇವೆ ಅಮೂಲ್ಯ. ನೀವುಗಳು ಕಣ್ಣಿಗೆ ಕಾಣುವ ದೇವರು. ರೋಗಿಗಳಿಗೆ ನಿಮ್ಮ ಮೇಲೆ ಹೆಚ್ಚಿನ ವಿಶ್ವಾಸವಿರುತ್ತದೆ. ಅದನ್ನು ಉಳಿಸಿಕೊಂಡು ಹೋಗಬೇಕು’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಶಿವಕುಮಾರ್ ತಿಳಿಸಿದರು.
ನಗರದ ಕೋಟೆ ಮುಂಭಾಗದ ಮದರ್ ತೆರೆಸಾ ನರ್ಸಿಂಗ್ ಸ್ಕೂಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಜ್ಯೋತಿ ಬೆಳಗಿಸುವ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ನರ್ಸಿಂಗ್ ಅತ್ಯಂತ ಪವಿತ್ರ ವೃತ್ತಿ. ಪ್ರಾಣ ಉಳಿಸುವುದರ ಜೊತೆ ಆತ್ಮವಿಶ್ವಾಸ ತುಂಬುವ ಅಮೂಲ್ಯವಾದ ಸೇವೆ’ ಎಂದರು.
‘ಚಿಕಿತ್ಸೆಗೆ ಬರುವ ರೋಗಿಗಳಿಗೆ ನಿಸ್ವಾರ್ಥ ಮನಸ್ಸಿನಿಂದ ಸೇವೆ ಸಲ್ಲಿಸಿ. ಸೇವಾ ಮನೋಭಾವವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ನಮ್ಮ ಸಂಸ್ಥೆಯಲ್ಲಿ ನರ್ಸಿಂಗ್ ಕಲಿತವರು ದೇಶ– ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಹೇಳಿದರು.
‘ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ಸಂದರ್ಭದಲ್ಲಿ ವೈದ್ಯರು ಹಾಗೂ ನರ್ಸ್‌ಗಳು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಬದ್ಧತೆ, ಕಠಿಣ ಪರಿಶ್ರಮವಿದ್ದಾಗ ವೃತ್ತಿಯಲ್ಲಿ ಯಶಸ್ಸು ಕಂಡುಕೊಳ್ಳಬಹುದು’ ಎಂದರು.
‘ರಾಮಾಯಣ, ಮಹಾಭಾರತ, ಪುರಾಣ ಕಾಲದಿಂದಲೂ ಆಯುರ್ವೇದ, ಗಿಡಮೂಲಿಕೆ, ನಾಟಿ ವೈದ್ಯ ಪದ್ಧತಿಯಿದೆ. ಸಾವಿರಾರು ವರ್ಷಗಳಿಂದಲೂ ಈ ವೈದ್ಯಕೀಯ ಚಿಕಿತ್ಸೆ ಅನೇಕ ಕಾಯಿಲೆಗಳ ನಿವಾರಣೆಗೆ ನೆರವಾಗುತ್ತಿದೆ. ಒಂದು ತಲೆಮಾರಿನಿಂದ ಮತ್ತೊಂದು ಪೀಳಿಗೆಗೆ ನಾಟಿ ವೈದ್ಯ ಪದ್ದತಿಯನ್ನು ಹೇಳಿಕೊಡದ ಕಾರಣ ನಶಿಸುತ್ತಿದೆ’ ಎಂದು ವಿಷಾಧಿಸಿದರು.
‘ರೋಗಿಗಳನ್ನು ಉಪಚರಿಸುವಲ್ಲಿ ವೈದ್ಯರಿಗಿಂತ ನರ್ಸ್‌ಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಶಿಕ್ಷಣ ಕಲಿತವರು ಮಾತ್ರ ದೇಶವನ್ನು ಸಮರ್ಥವಾಗಿ ಆಳಬಲ್ಲರು. ಜೀವನಕ್ಕೆ ಆಹಾರ ಎಷ್ಟು ಮುಖ್ಯವೋ ಆಧ್ಯಾತ್ಮಿಕತೆಯೂ ಅಷ್ಟೇ ಮುಖ್ಯ’ ಎಂದು ಮದಕರಿ ನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಸಂದೀಪ್ ತಿಳಿಸಿದರು.
ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಸ್.ಸಾಗರ್, ಪ್ರಾಂಶುಪಾಲರಾದ ಆರ್.ಮಂಜುಳಾ, ಎಂ.ಎಂ.ಮಹಂತೇಶ್, ಉಪನ್ಯಾಸಕಿ ವಿ.ಎಸ್.ಪೋತದಾರ್ ಇದ್ದರು.