ADVERTISEMENT

ಆನ್‌ಲೈನ್‌ ತರಗತಿಗೆ ನೆಟ್‌ವರ್ಕ್‌ ವಿಘ್ನ

ಜಿ.ಬಿ.ನಾಗರಾಜ್
Published 24 ಮೇ 2020, 19:30 IST
Last Updated 24 ಮೇ 2020, 19:30 IST
ಡಾ.ಕರಿಯಪ್ಪ ಮಾಳಿಗೆ
ಡಾ.ಕರಿಯಪ್ಪ ಮಾಳಿಗೆ   

ಚಿತ್ರದುರ್ಗ: ಲಾಕ್‌ಡೌನ್‌ ಘೋಷಣೆಯಾಗಿ ಶಾಲೆ– ಕಾಲೇಜು ಬಾಗಿಲು ಮುಚ್ಚಿದ್ದರಿಂದ ಶಿಕ್ಷಣ ಸಂಸ್ಥೆಗಳು ಅನಿವಾರ್ಯವಾಗಿ ಆನ್‌ಲೈನ್‌ ಬೋಧನೆಯತ್ತ ವಾಲಿಕೊಂಡಿವೆ. ಆದರೆ, ನೆಟ್‌ವರ್ಕ್‌ ವಿಘ್ನ ವಿದ್ಯಾರ್ಥಿ ಹಾಗೂ ಬೋಧಕರನ್ನು ನಿತ್ಯವೂ ಕಾಡುತ್ತಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಿವೆ. ಡಿಪ್ಲೊಮಾ, ನರ್ಸಿಂಗ್‌ ಸೇರಿ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಆನ್‌ಲೈನ್‌ ಬೋಧನೆ ಆರಂಭಿಸಿವೆ. ಆದರೆ, ನೆಟ್‌ವರ್ಕ್‌ ಲಭ್ಯವಾಗದೇ ಸಮಸ್ಯೆಯ ಸುಳಿಗೆ ಸಿಲುಕಿವೆ.

ಲಾಕ್‌ಡೌನ್‌ ಅವಧಿಯಲ್ಲಿ ಇಂಟರ್‌ನೆಟ್‌ ಬಳಕೆ ಮಾಡುವವರ ಪ್ರಮಾಣ ಹೆಚ್ಚಾಗಿದ್ದರಿಂದ ನೆಟ್‌ವರ್ಕ್‌ ವೇಗ ಕಡಿಮೆಯಾಗಿದೆ. ಝೂಮ್‌, ಗೂಗಲ್‌ ಮೀಟ್‌, ಸ್ಕೈಪೇ ಸೇರಿ ಹಲವು ಆ್ಯಪ್‌ಗಳು ಕಾರ್ಯನಿರ್ವಹಿಸದಷ್ಟು ಕಳಪೆ ಗುಣಮಟ್ಟದ ನೆಟ್‌ವರ್ಕ್‌ ಗ್ರಾಮೀಣ ಪ್ರದೇಶದಲ್ಲಿದೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಿದ್ಧಪಡಿಸಿದ ಪಿಡಿಎಫ್‌ ಸ್ವರೂಪದ ನೋಟ್ಸ್‌ ಅಪ್‌ಲೋಡ್‌ ಮಾಡಲು ಪ್ರಾಧ್ಯಾಪಕರೊಬ್ಬರು ನಸುಕಿನ 4 ಗಂಟೆಗೆ ಏಳುತ್ತಿದ್ದಾರೆ.

ADVERTISEMENT

‘ಊರಲ್ಲಿ ಮೊಬೈಲ್‌ ನೆಟ್‌ವರ್ಕ್‌ ಅಪರೂಪಕ್ಕೆ ಸಿಗುತ್ತದೆ. ಇತ್ತೀಚೆಗೆ ಅಂತರ್ಜಾಲ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಆನ್‌ಲೈನ್‌ ಬೋಧನೆಯನ್ನು ಕೇಳಲು ಗ್ರಾಮದ ಸಮೀಪದ ಬೆಟ್ಟಕ್ಕೆ ಹೋಗುತ್ತಿದ್ದೆ. ಪ್ರಾಧ್ಯಾಪಕರು ಸಿದ್ಧಪಡಿಸಿದ ನೋಟ್ಸ್‌ ಹಾಗೂ ಧ್ವನಿಮುದ್ರಿಕೆಯನ್ನು ಡೌನ್‌ಲೌಡ್‌ ಮಾಡಿಕೊಳ್ಳಲು ಹರಸಾಹಸ ಪಟ್ಟಿದ್ದೇನೆ’’ ಎನ್ನುತ್ತಾರೆ ಚಿತ್ರದುರ್ಗ ತಾಲ್ಲೂಕಿನ ತಿಪ್ಪಿನಕೆರೆಯ ರಾಕೇಶ್‌. ಇವರು ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ.

ಧ್ವನಿಮುದ್ರಿಕೆ ವಿಧಾನ:ದಾವಣಗೆರೆ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳ ಪಠ್ಯ ಮಾರ್ಚ್‌ 20ರ ವೇಳೆಗೆ ಶೇ 80ರಷ್ಟು ಪೂರ್ಣಗೊಂಡಿತ್ತು. ಸ್ನಾತಕೋತ್ತರ ವಿಭಾಗದ ಪಠ್ಯ ಶೇ 70ರಷ್ಟು ಮುಗಿದಿತ್ತು. ಲಾಕ್‌ಡೌನ್‌ ಘೋಷಣೆಗೂ ಮೊದಲೇ ತರಗತಿ ಸ್ಥಗಿತಗೊಳಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಯಿತು. ಕೊರೊನಾ ಸೃಷ್ಟಿಸಿದ ಭೀತಿಯಿಂದ ತರಗತಿ ಮರು ಆರಂಭವಾಗುವುದು ಅನುಮಾನವಾಗಿತ್ತು. ಆನ್‌ಲೈನ್‌ ತರಗತಿಗೆ ಅವಕಾಶ ಸಿಕ್ಕ ಬಳಿಕ ಪಠ್ಯ ಬೋಧನೆ ಪೂರ್ಣಗೊಂಡಿದೆ.

‘ಆರಂಭದಲ್ಲಿ ಝೂಮ್‌ ಆ್ಯಪ್‌ ಮೂಲಕ ತರಗತಿಗಳನ್ನು ನಡೆಸಲಾಗುತ್ತಿತ್ತು. ಸರ್ಕಾರ ಇದನ್ನು ನಿಷೇಧಿಸಿದ್ದರಿಂದ ತರಗತಿವಾರು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಲಾಯಿತು. ಪಾಠದ ಧ್ವನಿಮುದ್ರಿಕೆಯನ್ನು (ವಾಯ್ಸ್‌ ರೆಕಾರ್ಡಿಂಗ್‌) ಗ್ರೂಪ್‌ಗೆ ಹಾಕುತ್ತಿದ್ದೇವೆ. ಇದಕ್ಕೆ ಪೂರಕವಾದ ನೋಟ್ಸ್‌ ರಚಿಸಿ ಪಿಡಿಎಫ್‌ ಮಾದರಿಯಲ್ಲಿ ಒದಗಿಸುತ್ತಿದ್ದೇವೆ’ ಎನ್ನುತ್ತಾರೆ ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ.

ತೆರೆದ ಪುಸ್ತಕ ಪರೀಕ್ಷೆ:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆನ್‌ಲೈನ್‌ ಮೂಲಕವೇ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಮಾಡುತ್ತಿದೆ. ಲಾಕ್‌ಡೌನ್‌ ಘೋಷಣೆಯಾದ ಬಳಿಕ ಎರಡು ಬಾರಿ ತೆರೆದ ಪುಸ್ತಕ ಪರೀಕ್ಷೆ ನಡೆಸಿದೆ. ಇದಕ್ಕೆ ಅಂಕಗಳನ್ನು ನೀಡಿದೆ.

‘ಬೆಂಗಳೂರಿನ ದಯಾನಂದ ಸರಸ್ವತಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರಿ ಚಂದನಾಗೆ ಎರಡು ತಿಂಗಳಿಂದ ಆನ್‌ಲೈನ್‌ ತರಗತಿ ನಡೆಯುತ್ತಿದೆ. ಕೆಲ ಕೊರತೆಗಳ ಹೊರತಾಗಿಯೂ ವಿದ್ಯಾರ್ಥಿಗಳಿಗೆ ಇದು ಉಪಯುಕ್ತವಾಗಿದೆ. ಆನ್‌ಲೈನ್‌ ಮೂಲಕವೇ ನಡೆದ ಪೋಷಕರ ಸಭೆಯಲ್ಲಿ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದೇವೆ’ ಎನ್ನುತ್ತಾರೆ ಚಿತ್ರದುರ್ಗ ನಿವಾಸಿ ಸತ್ಯನಾರಾಯಣ್‌.

ಆನ್‌ಲೈನ್‌ ತರಗತಿಯ ಮೂಲಕ ವಿದ್ಯಾರ್ಥಿಗಳನ್ನು ಹಿಡಿದಿಡಲು ಅನುಕೂಲವಾಗಿದೆ. ಪಠ್ಯ ಚಟುವಟಿಕೆ ಮುಂದುವರಿಸಲು ಸಾಧ್ಯವಾಗಿದೆ. ಆದರೆ, ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಸರಿಯಾದ ಪಾಠ ಕೇಳಲು ಬಹುತೇಕರಿಗೆ ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳು ಎಷ್ಟರ ಮಟ್ಟಿಗೆ ಪಾಠ ಆಲಿಸುತ್ತಿದ್ದಾರೆ ಎಂಬುದನ್ನು ಅಂದಾಜಿಸಲು ಬೋಧಕರಿಗೂ ಸಾಧ್ಯವಾಗುತ್ತಿಲ್ಲ.

ಪ್ರಾಯೋಗಿಕ ಜ್ಞಾನ ಸಿಗುತ್ತಿಲ್ಲ:ಪರೀಕ್ಷೆಯ ದೃಷ್ಟಿಯಿಂದ ನಡೆಯುತ್ತಿರುವ ಆನ್‌ಲೈನ್‌ ತರಗತಿ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿಲ್ಲ. ಪಠ್ಯದ ಬೋಧನೆಗಷ್ಟೇ ಇದು ಸೀಮಿತವಾಗಿದೆ.

ವಿಜ್ಞಾನ ಹಾಗೂ ಎಂಜಿನಿಯರಿಂಗ್‌ ವಿದ್ಯಾ‌ರ್ಥಿಗಳಿಗೆ ಪ್ರಯೋಗಾಲಯ ತರಗತಿ ಕಡ್ಡಾಯ. ಪಠ್ಯದ ವಿಷಯದಷ್ಟೇ ಪ್ರಯೋಗಾಲಯಕ್ಕೂ ಮಹತ್ವವಿದೆ. ಲಾಕ್‌ಡೌನ್‌ ಘೋಷಣೆಯಾದ ಬಳಿಕ ಪಠ್ಯ ಪೂರ್ಣಗೊಳಿಸಲು ಆನ್‌ಲೈನ್‌ ತರಗತಿಯ ಮೊರೆ ಹೋಗಲಾಗಿದೆ. ಪ್ರಯೋಗಾಲಯದ ಅನುಭವದಿಂದ ವಿದ್ಯಾರ್ಥಿಗಳು ದೂರವಾಗಿದ್ದಾರೆ. ಕಾಲೇಜು ಶುರುವಾಗುವವರೆಗೂ ಪ್ರಯೋಗಾಲಯದ ಜ್ಞಾನ ಪಡೆಯಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.