ADVERTISEMENT

ಚಿತ್ರದುರ್ಗ: ರೈತರ ಅನುಕೂಲಕ್ಕಾಗಿ ಆನ್‌ಲೈನ್ ತರಬೇತಿ

ಪ್ರತ್ಯೇಕ ವೆಬ್‌ಸೈಟ್ ಅಭಿವೃದ್ಧಿ ಪಡಿಸಲು ತೋಟಗಾರಿಕೆ ಇಲಾಖೆ ಚಿಂತನೆ l ಸಮಸ್ಯೆಗಳಿಗೆ ವಿಜ್ಞಾನಿಗಳಿಂದ ಪರಿಹಾರ

ಕೆ.ಎಸ್.ಪ್ರಣವಕುಮಾರ್
Published 26 ಆಗಸ್ಟ್ 2021, 6:03 IST
Last Updated 26 ಆಗಸ್ಟ್ 2021, 6:03 IST
ತೋಟಗಾರಿಕೆ–ಸಾಂದರ್ಭಿಕ ಚಿತ್ರ
ತೋಟಗಾರಿಕೆ–ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ತೋಟಗಾರಿಕೆ ಇಲಾಖೆಯಿಂದ ಸಮಸ್ಯೆಗಳ ಪರಿಹಾರಕ್ಕಾಗಿ ಆಗಾಗ ನಡೆಯುತ್ತಿದ್ದ ರೈತ ಸಂಪರ್ಕ ತರಬೇತಿ ಶಿಬಿರಗಳು ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳಿಂದಲೂ ಸ್ಥಗಿತಗೊಂಡಿವೆ. ಇದನ್ನು ಸರಿದೂಗಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಆನ್‌ಲೈನ್ ತರಬೇತಿ ಆರಂಭಿಸಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಜಿಲ್ಲೆಯಲ್ಲಿ ಇಲಾಖೆಯಿಂದ ಇದೇ ಪ್ರಥಮ ಬಾರಿಗೆ ಆನ್‌ಲೈನ್ ತರಬೇತಿ ಆರಂಭಿಸುತ್ತಿದ್ದು, ಮೈಸೂರು ಮತ್ತು ಚಿತ್ರದುರ್ಗ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳು, ತೋಟಗಾರಿಕೆ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ ಯಾವುದೇ ಸಮಸ್ಯೆ ಇದ್ದರೆ ಇದರಲ್ಲಿ ಪಾಲ್ಗೊಂಡು ರೈತರು ಪರಿಹಾರ ಕಂಡುಕೊಳ್ಳಬಹುದಾಗಿದೆ.

ಕೋವಿಡ್‌ಗೂ ಮುನ್ನ ಜಿಲ್ಲೆಯ ಆಯಾ ತಾಲ್ಲೂಕುಗಳಲ್ಲಿ ನಡೆಯುತ್ತಿದ್ದ ರೈತ ತರಬೇತಿ ಶಿಬಿರಗಳಲ್ಲಿ 200ಕ್ಕೂ ಅಧಿಕ ರೈತರು ನೇರವಾಗಿ ಭಾಗವಹಿಸುತ್ತಿದ್ದರು. ತೆಂಗು, ಅಡಿಕೆ, ಈರುಳ್ಳಿ, ಟೊಮೆಟೊ, ಮಾವು, ಬದನೆಕಾಯಿ ಸೇರಿ ತೋಟಗಾರಿಕೆ ಬೆಳೆಗಳಾದ ಹಣ್ಣು–ತರಕಾರಿ ಬೆಳೆಗಳಲ್ಲಿ ರೋಗ ಕಾಣಿಸಿಕೊಂಡಲ್ಲಿ ಪರಿಹಾರ ಕಂಡುಕೊಳ್ಳುತ್ತಿದ್ದರು. ಬೆಳೆ ಸಂರಕ್ಷಣೆ, ಕೀಟಬಾಧೆಗಳ ಕುರಿತು ಮಾಹಿತಿ ಪಡೆಯುತ್ತಿದ್ದರು. ಕೋವಿಡ್‌ ಇರುವುದರಿಂದ ಗುಂಪು ಸೇರುವಂತಿಲ್ಲ. ಹೀಗಾಗಿ ಇಲಾಖೆ ಯಾವ ತಾಲ್ಲೂಕಿನಲ್ಲೂ ಶಿಬಿರ ಆಯೋಜಿಸಲು ಮುಂದಾಗುತ್ತಿಲ್ಲ.

ADVERTISEMENT

ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸುರಿದ ಮುಂಗಾರು ಮತ್ತು ಹಿಂಗಾರು ಮಳೆಯಿಂದಾಗಿ ಈರುಳ್ಳಿ, ಟೊಮೆಟೊ ಹಾಗೂ ಇತರ ಬೆಳೆಗಳಲ್ಲಿ ರೋಗ ಕಾಣಿಸಿಕೊಂಡಿತ್ತು. ಬೆಳೆ ಉಳಿಸಿಕೊಳ್ಳಲು ರೈತರೇ ನೇರವಾಗಿ ಇಲಾಖೆಗೆ ಅದರ ಮಾದರಿಯನ್ನು ತಂದು ಪರಿಹಾರ ಕಂಡುಕೊಳ್ಳುತ್ತಿದ್ದರು. ಎಲ್ಲ ರೈತರಿಗೂ ಇದು ಸಾಧ್ಯ
ವಾಗುವುದಿಲ್ಲ. ಹೀಗಾಗಿ ಆನ್‌ಲೈನ್‌ ತರಬೇತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

‘ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಜಿಲ್ಲೆಯಲ್ಲಿ ಈಗಾಗಲೇ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಈ ನಡುವೆಯೂ ಮಾಹಿತಿ ಕೊರತೆ, ಗೊಂದಲ ಇದ್ದರೆ ಅದನ್ನು ಕೂಡ ಪರಿಹರಿಸಿಕೊಳ್ಳಲು ಇದು ವೇದಿಕೆ ಆಗಲಿದೆ. ಒಂದೇ ರೀತಿಯ ಸಮಸ್ಯೆ ಉಂಟಾಗಿದ್ದಲ್ಲಿ ಆನ್‌ಲೈನ್‌ನಲ್ಲಿ ಭಾಗವಹಿಸಿದವರು ಅಕ್ಕಪಕ್ಕದ ತೋಟದ ಮಾಲೀಕರಿಗೆ, ಸ್ನೇಹಿತರಿಗೆ, ಸಂಬಂಧಿಕರ ಬಳಿಯೂ ಪಡೆದ ಮಾಹಿತಿ ಹಂಚಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೂ ತೋಟಗಾರಿಕೆ ಬೆಳೆಗಾರರ ನೆರವಿಗಾಗಿ ಇಲಾಖೆಯಲ್ಲಿ ಇರುವ ಮಾಹಿತಿ ಮತ್ತು ಸಲಹಾ ಕೇಂದ್ರ ದಶಕದಿಂದಲೂ ಕಾರ್ಯನಿರ್ವಹಿಸುತ್ತಿದೆ. ಬೆಳೆಗಳು, ನಿರ್ವಹಣೆ, ಅವುಗಳಿಗೆ ಬರುವ ರೋಗಗಳು, ಅದರ ನಿವಾರಣೆ, ಆಧುನಿಕ ತಂತ್ರಜ್ಞಾನಗಳ ಬಳಕೆ ಕುರಿತು ಅರಿವು ಮೂಡಿಸುತ್ತಿದೆ.

ತೋಟಗಾರಿಕಾ ಬೆಳೆಗಳಿಗೆ ರೋಗಗಳು ಬಂದರೆ ಅದರ ಮಾಹಿತಿಯನ್ನು ಈ ಕೇಂದ್ರಕ್ಕೆ ರೈತರು ನೀಡಿದರೆ ಯಾವ ರೋಗ ಎಂದು ಕಂಡು ಹಿಡಿದು ಅದರ ನಿಯಂತ್ರಣದ ಕುರಿತು ತಿಳಿಸಿಕೊಡಲಿದ್ದಾರೆ. ಒಂದು ವೇಳೆ ಹೊಸ ರೋಗವಾಗಿದ್ದು, ಸಿಬ್ಬಂದಿಗೆ ಗೊತ್ತಾಗದಿದ್ದರೆ, ಕೃಷಿ ವಿಜ್ಞಾನಿಗಳಿಗೆ ಶಿಫಾರಸು ಮಾಡಲಾಗುತ್ತಿದೆ.

‘ಹಾರ್ಟಿ ಕ್ಲಿನಿಕ್‌ ಕೇಂದ್ರಗಳಲ್ಲೂ ರೈತರಿಗೆ ತರಬೇತಿ ನೀಡಲಾಗುತ್ತಿದೆ. ಕೇವಲ ಮಾಹಿತಿ ನೀಡುವುದಷ್ಟೇ ಅಲ್ಲ. ಅವರ ಜಮೀನಿಗೆ ಹೋಗಿ ಅಲ್ಲಿಗೆ ಸರಿಯಾದ ಬೆಳೆಗಳ ಬಗ್ಗೆಯೂ ತಿಳಿಸಲಾಗುತ್ತಿದೆ. ನೂತನ ರೀತಿಯ ತೋಟಗಳ ವಿನ್ಯಾಸ, ಭೂದೃಶ್ಯ ಚಟುವಟಿಕೆಗೆ ನೆರವು ನೀಡಲಾಗುತ್ತಿದೆ. ಬೆಳೆಗಳ ಮಾರುಕಟ್ಟೆ ಮತ್ತು ಹವಾಮಾನ ಆಧಾರಿತ ಮಾಹಿತಿ ಕೂಡ ನೀಡುತ್ತಿದ್ದಾರೆ. ಇದರ ಜತೆಯಲ್ಲಿ ಆನ್‌ಲೈನ್‌ ತರಬೇತಿ ಆರಂಭದಿಂದ ರೈತರಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಸವಿತಾ.

ಕೀಟಬಾಧೆಗೆ ಮಾತ್ರ ಸೀಮಿತವಲ್ಲ

ಕೀಟಬಾಧೆಗೆ ಮಾತ್ರ ಆನ್‌ಲೈನ್ ತರಬೇತಿ ಶಿಬಿರ ಸೀಮಿತವಲ್ಲ. ತಮ್ಮ ತೋಟದಲ್ಲಿ ಯಾವ ಬೆಳೆ ಬೆಳೆಯುವುದು ಸೂಕ್ತ. ಲಾಭದಾಯದ ಬೆಳೆಗಳ ಮೂಲಕ ಆರ್ಥಿಕವಾಗಿ ಹೇಗೆ ಸಬಲರಾಗಬಹುದು. ಫಸಲು ಕೈಸೇರುವವರೆಗೂ ಬೆಳೆಗಳನ್ನು ಹೇಗೆ ಕಾಪಾಡಿಕೊಳ್ಳಬೇಕು, ಎಷ್ಟು ಪ್ರಮಾಣದಲ್ಲಿ ಗೊಬ್ಬರ, ನೀರು, ಔಷಧ ಸಿಂಪಡಿಸಬೇಕು ಎಂಬ ಇತರ ಮಾಹಿತಿಗಳನ್ನು ಪಡೆಯಬಹುದಾಗಿದೆ.

* ಕೋವಿಡ್‌ನಿಂದಾಗಿ ಸಾಮೂಹಿಕವಾಗಿ ತರಬೇತಿ ನೀಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ವೆಬ್‌ಸೈಟ್‌ ಸಿದ್ಧಪಡಿಸುತ್ತಿದ್ದೇವೆ. ಇದರ ಲಿಂಕ್‌ ಅನ್ನು ಶೀಘ್ರ ಪ್ರಕಟಿಸಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಆನ್‌ಲೈನ್‌ ಬಳಕೆ ಸೂಕ್ತ.

-ಸವಿತಾ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.