ADVERTISEMENT

‘ಪೋಷಕರೇ ಸರ್ಕಾರಿ ಶಾಲೆಗಳ ಜೀವಾಳ’

ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ತರಗತಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 9:01 IST
Last Updated 30 ಡಿಸೆಂಬರ್ 2025, 9:01 IST
ನಾಯಕನಹಟ್ಟಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನೂತನವಾಗಿ ಆರಂಭವಾದ ಎಲ್‌ಕೆಜಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ.ಪಂ.ಅಧ್ಯಕ್ಷೆ ಟಿ.ಮಂಜುಳಾ ಶ್ರೀಕಾಂತ್ ಮಾತನಾಡಿದರು
ನಾಯಕನಹಟ್ಟಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನೂತನವಾಗಿ ಆರಂಭವಾದ ಎಲ್‌ಕೆಜಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ.ಪಂ.ಅಧ್ಯಕ್ಷೆ ಟಿ.ಮಂಜುಳಾ ಶ್ರೀಕಾಂತ್ ಮಾತನಾಡಿದರು   

ನಾಯಕನಹಟ್ಟಿ: ಸರ್ಕಾರಿ ಶಾಲೆಗಳ ಪ್ರಗತಿಗೆ ಗ್ರಾಮೀಣ ಪ್ರದೇಶದ ಪೋಷಕರೇ ಜೀವಾಳ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನೂತನವಾಗಿ ಆರಂಭವಾದ ಎಲ್‌ಕೆಜಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳು ಹೆಚ್ಚಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಪೋಷಕರು ಇಂಗ್ಲಿಷ್ ಶಿಕ್ಷಣದ ವ್ಯಾಮೋಹಗೆ ಒಳಗಾಗಿ ದುಬಾರಿ ಶುಲ್ಕ ಕಟ್ಟಿ ತಮ್ಮ ಮಕ್ಕಳನ್ನು ನಗರದ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಶುಲ್ಕದ ಹೊರೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದನ್ನು ಗಮನಿಸಿದ ಸರ್ಕಾರ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಿದೆ ಎಂದರು. 

ADVERTISEMENT

‘ಈ ಶೈಕ್ಷಣಿಕ ವರ್ಷದಿಂದ ಚಳ್ಳಕೆರೆ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 6, ನಾಯಕನಹಟ್ಟಿ ಹೋಬಳಿಯಲ್ಲಿ 7, ಪರಶುರಾಂಪುರ ಹೋಬಳಿಯಲ್ಲಿ 10, ತಳಕು ಹೋಬಳಿಯಲ್ಲಿ 9 ಶಾಲೆಗಳು ಸೇರಿ ಒಟ್ಟು 32 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ನಾಯಕನಹಟ್ಟಿ ಪಟ್ಟಣದ ಶತಮಾನೋತ್ಸದ ಅಂಚಿನಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಗತಿ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಟಿಕೆ, ಕಲಿಕಾ ಸಾಮಗ್ರಿಯನ್ನು ಸರ್ಕಾರ ಒದಗಿಸಲಿದೆ. ತರಬೇತಿ ಪಡೆದ ಶಿಕ್ಷಕರ ಜತೆಗೆ ಪ್ರತಿ ತರಗತಿಗೂ ಒಬ್ಬ ಸಹಾಯಕಿಯನ್ನು ನೇಮಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಹಾಗಾಗಿ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಿ ಸರ್ಕಾರಿ ಶಾಲೆಗಳ ಉಳಿವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪ.ಪಂ.ಅಧ್ಯಕ್ಷೆ ಟಿ.ಮಂಜುಳಾ ಶ್ರೀಕಾಂತ್, ಸ್ಥಾಯಿಸಮಿತಿ ಅಧ್ಯಕ್ಷ ಸೈಯದ್‌ ಅನ್ವರ್, ಪ.ಪಂ.ಸದಸ್ಯರಾದ ಜೆ.ಆರ್.ರವಿಕಮಾರ್, ಎಂ.ಪಿ. ಮಂಜುನಾಥ, ಮುಖ್ಯಶಿಕ್ಷಕಿ ಎನ್.ಇಂದಿರಮ್ಮ ಮಾತನಾಡಿದರು. ಶಿಕ್ಷಕರಾದ ಮಂಜುಳಾ, ಎನ್.ಸಮಿತ್ರಮ್ಮ, ಜಿ.ಗಾಯಿತ್ರಿದೇವಿ, ಕೃಷ್ಣಾರೆಡ್ಡಿ, ಕೆ.ಎನ್.ಉಷಾ, ರಾಮಕೃಷ್ಣಪ್ಪ, ಲಕ್ಷ್ಮಿ, ಎಸ್.ಆರ್.ಗಂಗಣ್ಣ, ಮಲ್ಲಿಕಾ ಭಾರಿ, ಮಂಜುನಾಥ, ಚಂದನ, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯರಾದ ಓಬಮ್ಮ, ತಿಪ್ಪಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.