ADVERTISEMENT

ಹಿಂದಿ ವಚನ ನೃತ್ಯರೂಪಕ: ಸಾಣೆಹಳ್ಳಿ ಸ್ವಾಮೀಜಿ ಪ್ರಯತ್ನಕ್ಕೆ PM ಮೋದಿ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2023, 10:15 IST
Last Updated 8 ಆಗಸ್ಟ್ 2023, 10:15 IST
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ   ಪ್ರಜಾವಾಣಿ ಚಿತ್ರ

ಹೊಸದುರ್ಗ: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ದೇಶದಾದ್ಯಂತ ಪ್ರದರ್ಶನ ನೀಡುತ್ತಿರುವ ‘ತುಮ್ಹಾರೆ ಸಿವಾ, ಔರ್ ಕೋಯಿ ನಹಿ’ (ನೀನಲ್ಲದೇ ಮತ್ತಾರೂ ಇಲ್ಲವಯ್ಯ) ಹಿಂದಿ ವಚನ ನೃತ್ಯರೂಪಕಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿ, ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಬಸವೇಶ್ವರರ ಹಿಂದಿ ವಚನಗಳನ್ನು ಸಮೂಹ ನೃತ್ಯ ಸಂಯೋಜನೆಯ ರೂಪದಲ್ಲಿ ಪ್ರಸ್ತುತಪಡಿಸಿದ ಬಗ್ಗೆ ತಿಳಿದು ಸಂತೋಷವಾಗಿದೆ. ಮನರಂಜನೆ ಮೂಲಕ ಜಾಗೃತಿ ಮೂಡಿಸುತ್ತಿರುವ ಈ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಆಧ್ಯಾತ್ಮಿಕ ವ್ಯಕ್ತಿಗಳು ಶತಮಾನಗಳಿಂದ ನಮ್ಮ ದೇಶದ ಉದ್ದಗಲಕ್ಕೂ ವ್ಯಾಪಿಸಿದ್ದಾರೆ. ಜವಾಬ್ದಾರಿ ಮತ್ತು ನ್ಯಾಯದ ನಡವಳಿಕೆಯ ಹಾದಿಯಲ್ಲಿ ನಡೆಯಲು ಜನರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜೊತೆಗೆ ತಮ್ಮ ಆಳವಾದ ತಿಳುವಳಿಕೆ ಮತ್ತು ಜ್ಞಾನದ ಮೂಲಕ ಜನರ ಮನಸ್ಸನ್ನು ಪೋಷಿಸುತ್ತಿದ್ದಾರೆ. ಅಂತಹ ಆಧ್ಯಾತ್ಮಿಕ ನಾಯಕರಲ್ಲಿ ಜಗದ್ಗುರು ಬಸವೇಶ್ವರರು ಶ್ರೇಷ್ಠರು. ಅವರ ಜೀವನ ಮತ್ತು ಆದರ್ಶ ಪ್ರಾಯೋಗಿಕವಾಗಿ ಮಾರ್ಗದರ್ಶಿ. ಶತಮಾನಗಳು ಉರುಳಿದಂತೆ ಅವರ ವಚನಗಳು ಹೆಚ್ಚಿನ ಪ್ರಸ್ತುತತೆ ಪಡೆಯುತ್ತಿವೆ’ ಎಂದು ಪ್ರಧಾನಿ ಹೇಳಿದ್ದಾರೆ.

ADVERTISEMENT

‘ಬಸವೇಶ್ವರರು ಸಮಾಜ, ಸಂಸ್ಕೃತಿ ಅಥವಾ ರಾಜಕೀಯ ಅಂಶಗಳನ್ನು ಪ್ರಭಾವಿಸಿದ್ದಾರೆ. ಅವರು ಅನುಭವ ಮಂಟಪದ ಮೂಲಕ ಜನರನ್ನು ಒಗ್ಗೂಡಿಸುವುದಕ್ಕೆ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವುದಕ್ಕೆ, ಮಹಿಳೆಯರು ಮತ್ತು ಸಮಾಜದ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಒತ್ತು ನೀಡಿದರು. ಅವರ ಉದಾತ್ತ ಬೋಧನೆಗಳು ಲಕ್ಷಾಂತರ ಜನರನ್ನು ತಲುಪಿವೆ. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಪ್ರಯತ್ನಗಳಿಂದಾಗಿ ಈ ವಚನಗಳು ಈಗ ನೃತ್ಯದಂತಹ ವಿಭಿನ್ನ ಅಭಿವ್ಯಕ್ತಿ ಕಲೆಯ ಮೂಲಕ ಜನರನ್ನು ತಲುಪುತ್ತಿರುವುದು ವಿಶೇಷ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಧಾನಿ ಪತ್ರಕ್ಕೆ ಪ್ರತಿಕ್ರಿಯಿಸಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಮೋದಿಯವರು ತಮ್ಮ ಕಾರ್ಯಬಾಹುಳ್ಯದ ನಡುವೆಯೂ ನಮ್ಮ ತಂಡದ ಈ ಸಾಹಸದ ಯಾತ್ರೆಯನ್ನು ಮೆಚ್ಚಿ ಶುಭಾಶಯ ಕೋರಿ ಪತ್ರ ಬರೆದಿರುವುದು ಸಂತೋಷ ತಂದಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.