ADVERTISEMENT

ಚಿತ್ರದುರ್ಗ | ಪ್ರಜಾವಾಣಿ ಬಳಗದಿಂದ ಜಿಲ್ಲೆಯ ಪತ್ರಿಕಾ ವಿತರಕರಿಗೆ ಆರೋಗ್ಯ ತಪಾಸಣೆ

ಇ.ಎಸ್.ಸುಧೀಂದ್ರ ಪ್ರಸಾದ್
Published 25 ಸೆಪ್ಟೆಂಬರ್ 2023, 12:29 IST
Last Updated 25 ಸೆಪ್ಟೆಂಬರ್ 2023, 12:29 IST
<div class="paragraphs"><p>‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪತ್ರಿಕಾ ವಿತರಕರು ಮತ್ತು ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು</p></div>

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪತ್ರಿಕಾ ವಿತರಕರು ಮತ್ತು ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು

   

ಚಿತ್ರದುರ್ಗ: 'ಪ್ರಜಾವಾಣಿ' ಮತ್ತು 'ಡೆಕ್ಕನ್ ಹೆರಾಲ್ಡ್' ಪತ್ರಿಕೆಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ ಪತ್ರಿಕಾ ವಿತರಕರಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಸೋಮವಾರ ಯಶಸ್ಸು ಪಡೆಯಿತು.

ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಇಂಡಿಯಾನ ಹಾರ್ಟ್‌ ಸೆಂಟರ್‌, ದೃಷ್ಟಿ ಕಣ್ಣಿನ ಆಸ್ಪತ್ರೆ ಹಾಗೂ ಎಸ್‌ಜೆಎಂ ದಂತ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆವರಣದಲ್ಲಿ ನಡೆದ ಶಿಬಿರದಲ್ಲಿ ಪತ್ರಿಕಾ ವಿತರಕರು ಹಾಗೂ ಅವರ ಕುಟುಂಬದ ಸದಸ್ಯರು ಆರೋಗ್ಯ ತಪಾಸಣೆಗೆ ಒಳಪಟ್ಟರು.

ADVERTISEMENT

ಬೆಳಿಗ್ಗೆ 11ಕ್ಕೆ ಆರಂಭವಾದ ಶಿಬಿರ ಮಧ್ಯಾಹ್ನ 2 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆಗೆ ಎಲ್ಲರೂ ಒಳಪಟ್ಟರು. ಹೃದ್ರೋಗಕ್ಕೆ ಸಂಬಂಧಿಸಿದಂತೆ ಇಸಿಜಿ ಹಾಗೂ ಇಕೋ ಪರೀಕ್ಷೆ ನಡೆಸಲಾಯಿತು. ಹೆಚ್ಚಿನ ಆರೋಗ್ಯ ಪರೀಕ್ಷೆ ಅಗತ್ಯ ಇರುವವರಿಗೆ ಆಸ್ಪತ್ರೆಗೆ ಬರಲು ಸಲಹೆ ನೀಡಲಾಯಿತು. ದಂತ ತಪಾಸಣೆ, ಕಣ್ಣು ತಪಾಸಣೆ, ರಕ್ತ ಪರೀಕ್ಷೆ ಸೇರಿ ಹಲವು ರೀತಿಯ ಆರೋಗ್ಯ ತಪಾಸಣೆ ನಡೆಸಲಾಯಿತು.

ದೇಹದ ಅಂಗಾಂಶಗಳಲ್ಲಿ ಕಣ್ಣು ಬಹಳ ಮುಖ್ಯ. ಕಣ್ಣಿನ ಸಮಸ್ಯೆಯನ್ನು ಅನೇಕರು ನಿರ್ಲಕ್ಷಿಸುತ್ತಾರೆ. ನಿಯಮಿತವಾಗಿ ಕಣ್ಣು ತಪಾಸಣೆ ಮಾಡಿಸಿಕೊಂಡರೆ ಅನುಕೂಲ.
ಸಂದೀಪ್ ಐತಾಳ್, ವ್ಯವಸ್ಥಾಪಕರು, ದೃಷ್ಟಿ ಕಣ್ಣಿನ ಆಸ್ಪತ್ರೆ

ಇದಕ್ಕೂ ಮುನ್ನ ನಡೆದ ಸಮಾರಂಭದಲ್ಲಿ ಮಾತನಾಡಿದ ಇಂಡಿಯಾನ ಹಾರ್ಟ್ ಸೆಂಟರ್ ಹೃದ್ರೋಗ ತಜ್ಞ ಡಾ.ಸುಜಯ್, ಬದಲಾದ ಜೀವನಶೈಲಿಯ ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗುತ್ತಿವೆ. ಇದಕ್ಕೆ ಒತ್ತಡದಿಂದ ಕೂಡಿದ ಜೀವನವೇ ಕಾರಣವಾಗಿದೆ. ವಿಶೇಷವಾಗಿ ರಾತ್ರಿ ಪಾಳಿ ಮಾಡುವವರಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಜೀವನಶೈಲಿ ಸುಧಾರಣೆ ಮಾಡಿಕೊಳ್ಳುವ ಮೂಲಕ ಹೃದ್ರೋಗ ಸಮಸ್ಯೆಯಿಂದ ಪಾರಾಗಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಹೃದ್ರೋಗ ತಪಾಸಣೆ, ಶಸ್ತ್ರಚಿಕಿತ್ಸೆ ತುಂಬಾ ದುಬಾರಿ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದ ನೆರವಿನಿಂದ ಜನಸಾಮಾನ್ಯರಿಗೂ ಚಿಕಿತ್ಸೆ ಸುಲಭವಾಗಿ ಸಿಗುತ್ತಿದೆ. ಈ ಸೌಲಭ್ಯಗಳನ್ನು ಜನಸಾಮಾನ್ಯರು ಬಳಸಿಕೊಳ್ಳಬೇಕು. ನಸುಕಿನಲ್ಲಿ ಕೆಲಸ ಮಾಡುವ ಪತ್ರಿಕಾ ವಿತರಕರ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದು ಶ್ಲಾಘನೀಯ ಎಂದು ಹೇಳಿದರು.

ಪತ್ರಿಕಾ ವಿತರಕರ ಆರೋಗ್ಯದ ಬಗ್ಗೆ ಕಾಳಜಿ ತೋರಿದ ಪ್ರಜಾವಾಣಿ ಬಳಗಕ್ಕೆ ಧನ್ಯವಾದಗಳು. ಇದರಿಂದ ಹಲವು ಬಡ ಕುಟುಂಬಗಳಿಗೆ ಅನುಕೂಲವಾಗಿದೆ. ಪತ್ರಿಕೆಯು ವಿತರಕರ ನೆರವಿಗೆ ನಿಂತಿರುವುದುಕ್ಕೆ ಇದೊಂದು ನಿದರ್ಶನ.
ತಿಪ್ಪೇಸ್ವಾಮಿ, ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ

ಎಸ್.ಜೆ.ಎಂ ದಂತ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಡಾ.ಎಂ.ಜಿ.ಜಯಚಂದ್ರ, ಬಹುತೇಕರ ದೇಹದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಭಾಗ ದಂತ. ದೇಹದ ಇತರ ಅಂಗಾಂಗದಂತೆ ದಂತ ಕೂಡ ಮುಖ್ಯ. ಆರು ತಿಂಗಳು, ವರ್ಷಕ್ಕೊಮ್ಮೆ ದಂತ ತಪಾಸಣೆ ಮಾಡಿಕೊಂಡರೆ ಅನುಕೂಲ. ಬಾಯಿ ಆರೋಗ್ಯ ಕಾಪಾಡಿಕೊಳ್ಳಲು ದಂತಗಳ ಪಾತ್ರ ಮುಖ್ಯ. ಹಲ್ಲು ನೋವು ಬರುವವರಗೆ ಕಾಯಬೇಡಿ. ಬಾಯಿ ಹುಣ್ಣು, ಹಲ್ಲು ನೋವು ಕಾಡಿದರೆ ತಕ್ಷಣ ದಂತ ವೈದ್ಯರನ್ನು ಸಂಪರ್ಕಿಸಿ. ಹಲ್ಲು ತೆಗೆಸಿಕೊಳ್ಳುವ ಹಂತದ ವರೆಗೆ ಆರೋಗ್ಯ ಹದಗೆಡಲು ಬಿಡಬೇಡಿ. ಇದರಿಂದ ಹಣ ಕೂಡ ಪೋಲು ಆಗುತ್ತದೆ ಎಂದು‌ ಕಿವಿಮಾತು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ ‌ಅಧ್ಯಕ್ಷತೆ ವಹಿಸಿದ್ದರು. ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರಾದ ಡಾ.ಚೇತನಾ, ಡಾ.ರಚನಾ, ಡಾ.ಅಶ್ವಿನಿ, ಡಾ.ವಸಂತ್ ಇದ್ದರು.

‘ವಿತರಕರ ಆರೋಗ್ಯ ಮುಖ್ಯ'

ನಿತ್ಯ ನಸುಕಿನಲ್ಲಿ ಪತ್ರಿಕೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪತ್ರಿಕಾ ವಿತರಕರ ಆರೋಗ್ಯ ಮುಖ್ಯ. ವಿತರಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಶಿಬಿರ ನಡೆಸಲಾಗಿದೆ ಎಂದು ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪ್ರಸರಣ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್ ನಾಯಕ್ ತಿಳಿಸಿದರು.

'ಪ್ರಜಾವಾಣಿ' ದಿನಪತ್ರಿಕೆ 1948 ರಿಂದ ಹೊರಬರುತ್ತಿದೆ. ಇಷ್ಟು ಸುದೀರ್ಘ ಅವಧಿಗೆ ಪತ್ರಿಕೆಯೊಂದಿಗೆ ವಿತರಕರದು ಅವಿನಾಭಾವ ಸಂಬಂಧ. ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚು ಗಮನ ಕೇಂದ್ರೀಕರಿಸಿ ಪತ್ರಿಕೆ ಕೆಲಡ ಮಾಡುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.