ADVERTISEMENT

ಕೋವಿಡ್‌ ಗೆದ್ದ 30 ಗರ್ಭಿಣಿಯರು: ಐವರಿಗೆ ಹೆರಿಗೆ, ತಾಯಿ–ಮಗು ಸುರಕ್ಷಿತ

ಜಿ.ಬಿ.ನಾಗರಾಜ್
Published 16 ಸೆಪ್ಟೆಂಬರ್ 2020, 14:40 IST
Last Updated 16 ಸೆಪ್ಟೆಂಬರ್ 2020, 14:40 IST
ಡಾ.ಫಾಲಾಕ್ಷ
ಡಾ.ಫಾಲಾಕ್ಷ   

ಚಿತ್ರದುರ್ಗ: ಕೊರೊನಾ ಸೋಂಕು ಸುಲಭವಾಗಿ ಅಂಟಬಹುದೆಂದು ಗುರುತಿಸಿದ್ದ ಗರ್ಭಿಣಿಯರ ಪೈಕಿ 30 ಮಹಿಳೆಯರು ಕೋವಿಡ್‌–19 ಗೆದ್ದಿದ್ದಾರೆ. ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಐವರಿಗೆ ಹೆರಿಗೆಯಾಗಿದ್ದು, ತಾಯಿ–ಶಿಶು ಆರೋಗ್ಯವಾಗಿದ್ದಾರೆ.

ಸೋಂಕಿನಿಂದ ಬಳಲುತ್ತಿದ್ದ 20 ಗರ್ಭಿಣಿಯರು ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಉಳಿದವರು ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಆರೈಕೆಯಾಗಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ನಾಲ್ವರು ಹಾಗೂ ಸಹಜವಾಗಿ ಒಬ್ಬ ಗರ್ಭಿಣಿಯ ಹೆರಿಗೆಯಾಗಿದೆ. ಇದು ವೈದ್ಯರ ಆತ್ಮವಿಶ್ವಾಸವನ್ನು ವೃದ್ಧಿಸಿದ್ದು, ಸೋಂಕಿತ ಗರ್ಭಿಣಿಯರಿಗೆ ಜನಿಸಿದ ಶಿಶುವಿಗೆ ಸೋಂಕು ಅಂಟದಂತೆ ನೋಡಿಕೊಂಡಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ 12,196 ಗರ್ಭಿಣಿಯರಿದ್ದಾರೆ. ಕೋವಿಡ್‌ ರೋಗಿಗಳ ಪ್ರಾಥಮಿಕ ಸಂಪರ್ಕ, ಅಪಾಯಕಾರಿ ಪ್ರದೇಶ ಹಾಗೂ ರೋಗ ಲಕ್ಷಣ ಕಾಣಿಸಿಕೊಂಡ ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೆಲವರಲ್ಲಿ ಸೋಂಕು ಪತ್ತೆಯಾಗಿದೆ. ಹೆರಿಗೆ ಹಾಗೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಾಗ ಮತ್ತೆ ಕೆಲವರಲ್ಲಿ ಕೋವಿಡ್‌ ದೃಢಪಟ್ಟಿದೆ. ರೋಗ ಲಕ್ಷಣ ಕಾಣಿಸಿಕೊಂಡ ಗರ್ಭಿಣಿಯರ ಆರೈಕೆ ಹಾಗೂ ಹೆರಿಗೆಗೆ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ಮೀಸಲಿಡಲಾಗಿದೆ.

ADVERTISEMENT

ಕೊರೊನಾ ಸೋಂಕಿಗೆ ಸುಲಭವಾಗಿ ತುತ್ತಾಗಬಹುದಾದ (ವಲ್ನರಬಲ್‌) ಗುಂಪುಗಳನ್ನು ಆರೋಗ್ಯ ಇಲಾಖೆ ಗುರುತಿಸಿತ್ತು. ವಿಶೇಷವಾಗಿ ಗರ್ಭಿಣಿಯರು ಎಚ್ಚರಿಕೆಯಿಂದ ಇರುವಂತೆ ಜಾಗೃತಿ ಮೂಡಿಸಲಾಗಿತ್ತು. ಆದರೂ, ಕೆಲವರಲ್ಲಿ ಸೋಂಕು ಪತ್ತೆಯಾಗಿದೆ.

‘28 ವರ್ಷದ ಗರ್ಭಿಣಿ ಹೆರಿಗೆಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಸೋಂಕು ಕಾಣಿಸಿಕೊಂಡಿದ್ದರಿಂದ ವೈದ್ಯರು ಕೈಚೆಲ್ಲಿದರು. ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದ ಗರ್ಭಿಣಿ ಹಲವು ಖಾಸಗಿ ಆಸ್ಪತ್ರೆಯ ಬಾಗಿಲು ಬಡಿದಿದ್ದರು. ಅಂತಿಮವಾಗಿ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸುರಕ್ಷಿತ ಹೆರಿಗೆ ಮಾಡಿಸಿದೆವು’ ಎನ್ನುತ್ತಾರೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸವರಾಜ್‌.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಪ್ರಯಾಣ ಮಾಡುತ್ತಿದ್ದ ಗರ್ಭಿಣಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಪತ್ತೆಯಾಗಿತ್ತು. ಪಿಪಿಇ ಕಿಟ್‌ ಧರಿಸಿ ವೈದ್ಯರು ಹೆರಿಗೆ ಮಾಡಿಸಿದ್ದರು. ಚಳ್ಳಕೆರೆಯ ಗರ್ಭಿಣಿಯೊಬ್ಬರು ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಬಂದಾಗಲೇ ಕೋವಿಡ್‌ ಇರುವುದು ಗೊತ್ತಾಗಿತ್ತು. ಸಹಜ ಹೆರಿಗೆ ಮೂಲಕ ಶಿಶುವಿಗೆ ಜನ್ಮ ನೀಡಿದ್ದಾರೆ.

‘ಶಿಶು ತಾಯಿ ಗರ್ಭದಲ್ಲಿ ಇರುವವರೆಗೂ ಸೋಂಕು ಅಂಟುವುದಿಲ್ಲ. ಹೆರಿಗೆಯಾದ ಬಳಿಕ ತಾಯಿಯ ಪ್ರಾಥಮಿಕ ಸಂಪರ್ಕಕ್ಕೆ ಒಳಗಾಗದ ರೀತಿಯಲ್ಲಿ ಆರೈಕೆ ಮಾಡಬೇಕು. ತಾಯಿ ಗುಣಮುಖರಾಗುವವರೆಗೂ ಎದೆಹಾಲು ಕೂಡ ನೀಡುವುದಿಲ್ಲ’ ಎಂದು ವಿವರಿಸಿದರು ಡಾ.ಬಸವರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.