ADVERTISEMENT

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ: ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ನಗರಸಭೆ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 8:26 IST
Last Updated 6 ಡಿಸೆಂಬರ್ 2025, 8:26 IST
ಚಳ್ಳಕೆರೆ ನಗರಸಭೆ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿದರು
ಚಳ್ಳಕೆರೆ ನಗರಸಭೆ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿದರು   

ಚಳ್ಳಕೆರೆ: ‘ಸಮಸ್ಯೆ ಹೊತ್ತು ತರುವ ಸಾರ್ವಜನಿಕರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಬೇಕು. ಅಸಭ್ಯವಾಗಿ ವರ್ತಿಸುವುದು ವೃತ್ತಿಗೆ ಶೋಭೆ ತರುವುದಿಲ್ಲ’ ಎಂದು ಪೌರಾಯುಕ್ತರು ಹಾಗೂ ಸಿಬ್ಬಂದಿಯನ್ನು ಟಿ.ರಘುಮೂರ್ತಿ ತರಾಟೆಗೆ ತೆಗೆದುಕೊಂಡರು.

ನಗರಸಭೆ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ನಾಗರಿಕರ ಸಮಸ್ಯೆಗೆ ಸ್ಪಂದಿಸುವುದನ್ನು ಮೊದಲು ಕಲಿಯಬೇಕು. ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು  ಸಾರ್ವಜನಿಕರ ಕೆಲಸ ಮಾಡಿಕೊಡುವ ಸಾಮರ್ಥ್ಯ ಇಲ್ಲದ ಕಾರಣ, ಸಣ್ಣಪುಟ್ಟ ಕೆಲಸಕ್ಕಾಗಿ ಜನರು ನಿತ್ಯ ಕಚೇರಿಗೆ ಅಲೆದಾಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರು ಬಂದಿವೆ. ಇದೇ ರೀತಿ ಮುಂದುವರಿದರೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಪೌರಾಯುಕ್ತರಿಗೆ ಎಚ್ಚರಿಕೆ ನೀಡಿದರು.

ADVERTISEMENT

ನಗರಸಭೆಯಲ್ಲಿ ಜನಪ್ರತಿನಿಧಿಗಳು ಇಲ್ಲದ ಕಾರಣ, ಪ್ರತಿದಿನ ಅಧಿಕಾರಿಗಳೇ ವಿವಿಧ ವಾರ್ಡ್‍ಗಳಿಗೆ ತಪ್ಪದೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಸೂಚಿಸಿದರು.

‘ನಗರದಲ್ಲಿ ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ಮುಖ್ಯರಸ್ತೆ ಬದಿಯಲ್ಲಿರುವ ಅಕ್ರಮ ಗೂಡಂಗಡಿ, ಸಂಚಾರಿ ಹೋಟೆಲ್, ಇನ್ನಿತರ ಅಂಗಡಿಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಆರೋಗ್ಯ ನಿರೀಕ್ಷಕರ ವಿರುದ್ಧ ಹರಿಹಾಯ್ದರು.

ನಗರದ ಜ್ವಲಂತ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು 15-20 ದಿನದೊಳಗೆ ಬಗೆಹರಿಸಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ಸೇರಿದಂತೆ ನಗರಸಭೆ ಎಲ್ಲ ಸಿಬ್ಬಂದಿಯ ವರ್ಗಾವಣೆಗೆ ಆದೇಶಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ರೇಹಾನ್‍ಪಾಷ, ಡಿವೈಎಸ್ಪಿ ಸತ್ಯನಾರಾಯಣ ರಾವ್, ಪೌರಾಯುಕ್ತ ಜಗೆಡ್ಡಿ, ಎಂಜಿನಿಯರ್ ಲೋಕೇಶ್, ವಿನಯ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.