ADVERTISEMENT

PV Web Exclusive| ಮೊಳಕಾಲ್ಮುರು ತಾಲ್ಲೂಕಿಗೆ ಬಳ್ಳಾರಿಯ ಕನವರಿಕೆ

ಜಿ.ಬಿ.ನಾಗರಾಜ್
Published 11 ಡಿಸೆಂಬರ್ 2020, 12:25 IST
Last Updated 11 ಡಿಸೆಂಬರ್ 2020, 12:25 IST
ಮೊಳಕಾಲ್ಮುರು ಪಟ್ಟಣ ಪಂಚಾಯಿತಿ
ಮೊಳಕಾಲ್ಮುರು ಪಟ್ಟಣ ಪಂಚಾಯಿತಿ   

ಚಿತ್ರದುರ್ಗ: ಬಳ್ಳಾರಿ ಜಿಲ್ಲೆಯ ವಿಭಜನೆಯ ಪರಿಣಾಮಗಳು ಚಿತ್ರದುರ್ಗ ಜಿಲ್ಲೆಯ ಮೇಲೂ ಉಂಟಾಗುವ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿವೆ. ಭೌಗೋಳಿಕವಾಗಿ ಬಳ್ಳಾರಿಯ ಸಾಮೀಪದಲ್ಲಿರುವ ಮೊಳಕಾಲ್ಮುರು ಜನರಲ್ಲಿ ತಳಮಳ ಶುರುವಾಗಿದೆ. ಮೊಳಕಾಲ್ಮುರು ತಾಲ್ಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಿ ಸಂವಿಧಾನದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನ ಕಲ್ಪಿಸಿ ಎಂಬ ಕೂಗು ಬಲವಾಗಿ ಕಳಿಬರುತ್ತಿದೆ.

ಬಳ್ಳಾರಿ–ವಿಜಯನಗರ ಜಿಲ್ಲೆಯ ವಿಭಜನೆಗೆ ಅಧಿಕೃತ ಮುದ್ರೆ ಬಿದ್ದ ಬಳಿಕ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಪರ–ವಿರೋಧ ಹೋರಾಟಗಳು ಜೋರಾಗಿವೆ. ರಾಂಪುರ, ಮೊಳಕಾಲ್ಮುರು ಭಾಗದ ಜನರು ಬಳ್ಳಾರಿಗೆ ಹಾಗೂ ಬಿ.ಜಿ.ಕೆರೆ ಭಾಗದ ಜನರು ಚಿತ್ರದುರ್ಗದಲ್ಲೇ ಉಳಿಸುವಂತೆ ಬೇಡಿಕೆ ಮುಂದಿಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ವಿಶೇಷ ಸ್ಥಾನಕ್ಕೆ ಬಳ್ಳಾರಿ ಸೇರ್ಪಡೆಗೆ ಉತ್ಸುಕರಾಗಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿದ್ದರಿಂದ ಹೋರಾಟ ಕೊಂಚ ತಣ್ಣಗಾಗಿದೆ.

ಸ್ವಾತಂತ್ರ್ಯ ಪೂರ್ವದಿಂದಲೂ ಮೊಳಕಾಲ್ಮುರು ತಾಲ್ಲೂಕು ಚಿತ್ರದುರ್ಗ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡಿದೆ. 739 ಚದರ ಕಿ.ಮೀ. ಭೌಗೋಳಿಕ ವಿಸ್ತೀರ್ಣ ಹೊಂದಿರುವ ತಾಲ್ಲೂಕಿನಲ್ಲಿ 2011ರ ಜನಗಣತಿ ಪ್ರಕಾರ 1,41,284 ಜನಸಂಖ್ಯೆ ಇದೆ. ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಮೊಳಕಾಲ್ಮುರು ತಾಲ್ಲೂಕಿನ ಪ್ರಮಾಣ ಶೇ 8 ಮಾತ್ರ. ಜಿಲ್ಲೆಯ ಇತರ ತಾಲ್ಲೂಕಿಗೆ ಹೋಲಿಸಿದರೆ ಮೊಳಕಾಲ್ಮುರು ಚಿಕ್ಕದು. ಆದರೆ, ಐತಿಹಾಸಿಕವಾಗಿ ಮಹತ್ವ ಪಡೆದಿರುವ ಊರು. ಶಿಲಾಯುಗದ ಪಳಯುಳೆಕೆಗಳು ಗೋಚರವಾಗುತ್ತವೆ. ಇಲ್ಲಿಯ ಜನರು ಭಾವನಾತ್ಮಕವಾಗಿ ಚಿತ್ರದುರ್ಗ ಜಿಲ್ಲೆಯೊಂದಿಗೆ ಬೆರೆತುಕೊಂಡಿದ್ದಾರೆ.

ADVERTISEMENT

ತೀರಾ ಹಿಂದುಳಿದಿರುವ ಮೊಳಕಾಲ್ಮುರು ತಾಲ್ಲೂಕು ಸತತ ಬರ ಪರಿಸ್ಥಿತಿಗೆ ತುತ್ತಾಗುತ್ತಿದೆ. 2018ರಲ್ಲಿ ಕೇವಲ 260 ಮಿ.ಮೀ ಮಳೆಯಾಗಿದೆ. ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆಯಾದರೂ ರೈತರ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುತ್ತಿಲ್ಲ. ಗ್ರಾಮೀಣ ಪ್ರದೇಶದ ಬಹುತೇಕರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಸುಮಾರು 55 ಕಿ.ಮೀ ದೂರದಲ್ಲಿರುವ ಬಳ್ಳಾರಿಯೊಂದಿಗೆ ವ್ಯವಹಾರಿಕ ನಂಟು ಬೆಳೆಸಿಕೊಂಡಿದ್ದಾರೆ. 85 ಕಿ.ಮೀ ದೂರದ ಚಿತ್ರದುರ್ಗದ ನಂಟು ಸರ್ಕಾರಿ ಕಚೇರಿಯ ಕೆಲಸಕ್ಕೆ ಮಾತ್ರ ಸೀಮಿತ.

ನಂಜುಂಡಪ್ಪ ವರದಿಯಲ್ಲಿ ಮೊಳಕಾಲ್ಮುರು ತಾಲ್ಲೂಕು ಅತ್ಯಂತ ಹಿಂದುಳಿದಿರುವ ಪಟ್ಟಿಯಲ್ಲಿದೆ. ಹಲವು ದಶಕಗಳ ಬಳಿಕವೂ ಮೊಳಕಾಲ್ಮುರು ಅಭಿವೃದ್ಧಿಯತ್ತ ಮುಖ ಮಾಡಿಲ್ಲ. ಶಿಕ್ಷಣ, ಸಾರಿಗೆ ಸಂಪರ್ಕ, ಅಭಿವೃದ್ಧಿ, ಆರ್ಥಿಕತೆಯಲ್ಲಿ ಕಲ್ಯಾಣ ಕರ್ನಾಟಕಕ್ಕೂ ಹಾಗೂ ಮೊಳಕಾಲ್ಮುರು ತಾಲ್ಲೂಕಿಗೂ ಹೆಚ್ಚು ವ್ಯತ್ಯಾಸ ಕಾಣಿಸುವುದಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ 371 (ಜೆ) ಅಡಿಯಲ್ಲಿ ಕಲ್ಪಿಸಿದ ವಿಶೇಷ ಸ್ಥಾನವನ್ನು ಮೊಳಕಾಲ್ಮುರು ತಾಲ್ಲೂಕಿಗೂ ವಿಸ್ತರಿಸಬೇಕು ಎಂಬ ಹೋರಾಟ ಹಲವು ವರ್ಷಗಳ ಹಿಂದೆಯೇ ಹುಟ್ಟಿಕೊಂಡಿದೆ. ಬಳ್ಳಾರಿ ಜಿಲ್ಲಾ ವಿಭಜನೆಯ ಬಳಿಕ ಈ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.

ವಿಜಯನಗರ ಜಿಲ್ಲೆಯ ಹುಟ್ಟಿನೊಂದಿಗೆ ಬಳ್ಳಾರಿಯ ವಿಸ್ತೀರ್ಣ ಕಡಿಮೆಯಾಗಿದೆ. ಮೊಳಕಾಲ್ಮುರು ತಾಲ್ಲೂಕು ಸೇರ್ಪಡೆ ಮಾಡಿದರೆ ಅನುಕೂಲ ಎಂಬ ಲೆಕ್ಕಾಚಾರಗಳು ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿವೆ. ಬಳ್ಳಾರಿ ಜಿಲ್ಲೆಯವರೇ ಆಗಿರುವ ಬಿ.ಶ್ರೀರಾಮುಲು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮೊಳಕಾಲ್ಮುರು ತಾಲ್ಲೂಕು ಬಳ್ಳಾರಿಗೆ ಸೇರ್ಪಡೆಗೊಂಡರೆ ರಾಜಕೀಯಕ್ಕೆ ಅನುಕೂಲವಾಗುವ ಸಾಧ್ಯತೆಗಳಿವೆ. ಇದನ್ನು ನೇರವಾಗಿ ಹೇಳದ ಶ್ರೀರಾಮುಲು ‘371 (ಜೆ) ವಿಶೇಷ ಸ್ಥಾನವನ್ನು ಮೊಳಕಾಲ್ಮುರು ತಾಲ್ಲೂಕಿನ ಜನರಿಗೂ ನೀಡಬೇಕು’ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

‘ಮೊಳಕಾಲ್ಮುರು ತಾಲ್ಲೂಕಿನ ರೈತರು ಬೆಳೆಗಳನ್ನು ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ ತರುವುದಿಲ್ಲ. ಬಳ್ಳಾರಿ ಮಾರುಕಟ್ಟೆಯೊಂದಿಗೆ ವ್ಯವಹಾರ ಹೊಂದಿದ್ದಾರೆ. ಸ್ನೇಹ, ಸಂಬಂಧದ ನಂಟು ಬಳ್ಳಾರಿ ಜಿಲ್ಲೆಯೊಂದಿಗೆ ಹೆಚ್ಚಿದೆ. ತಾಲ್ಲೂಕಿನ 105 ಕಂದಾಯ ಗ್ರಾಮ, ನಾಲ್ಕು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಬಳ್ಳಾರಿಗೆ ಸೇರಿಸಿದರೆ ಆರೋಗ್ಯ, ಶಿಕ್ಷಣ, ಉದ್ಯೋಗದಿಂದ ವಂಚಿತರಾದವರಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡ ಜಿ.ಕುಮಾರಗೌಡ.

ಜಿಲ್ಲಾ ಪಂಚಾಯಿತಿ ಸದಸ್ಯರೂ ಆಗಿರುವ ಕಾಂಗ್ರೆಸ್‌ ಮುಖಂಡ ಯೋಗೇಶಬಾಬು ಸೇರಿ ಅನೇಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ಸಂಘ–ಸಂಸ್ಥೆಗಳು, ರಾಜಕೀಯ ಮುಖಂಡರು ಮೊಳಕಾಲ್ಮುರು ತಾಲ್ಲೂಕು ಬಳ್ಳಾರಿಗೆ ಸೇರ್ಪಡೆ ಮಾಡುವುದು ಬೇಡ ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲೇ ಉಳಿದರೆ ಅನುಕೂಲ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಆದರೆ, ಸಂವಿಧಾನದ 371 (ಜೆ) ಸೌಲಭ್ಯಕ್ಕೆ ಹೋರಾಟ ಮಾಡೋಣ ಎಂಬ ಕರೆ ನೀಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯ ಬಳಿಕ ಈ ಹೋರಾಟ ಮತ್ತೆ ಆರಂಭವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.