
ಹೊಳಲ್ಕೆರೆ: ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದಲ್ಲಿ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರ್‌ದಾಸ್ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ಜ. 8ರಿಂದ 11ರವರೆಗೆ ತಿರುಕ ರಂಗೋತ್ಸವ ನಡೆಯಲಿದೆ ಎಂದು ಆಶ್ರಮದ ವ್ಯವಸ್ಥಾಪಕ ಡಿ.ಕೆ.ಚಂದ್ರಪ್ಪ ತಿಳಿಸಿದ್ದಾರೆ.
ಜ. 8ರಂದು ಸಂಜೆ 5ಕ್ಕೆ ಆಶ್ರಮದ ಅಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದು, ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಕೆ.ಪಿ.ಹನುಮಂತಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಎಚ್.ಕೆ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಶೈಕ್ಷಣಿಕ ಸಲಹೆಗಾರ ಕಾಶೇಶ್ವರ ರಾವ್, ಕೆ.ಆರ್.ಮಂಜುಳಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ನಾಗರಾಜ್ ಭಾಗವಹಿಸಲಿದ್ದಾರೆ.
ರಾತ್ರಿ 7ಕ್ಕೆ ಪು.ತಿ.ನರಸಿಂಹಾಚಾರ್ ರಚಿಸಿದ ಬಿ.ವಿ.ಕಾರಂತ ಸಂಗೀತ, ವೈ.ಡಿ.ಬದಾಮಿ ಮತ್ತು ಮಂಜುಳಾ ಬದಾಮಿ ನಿರ್ದೇಶಿಸಿರುವ ‘ಗೋಕುಲ ನಿರ್ಗಮನ’ ನಾಟಕವನ್ನು ಅನಾಥ ಸೇವಾಶ್ರಮದ ರಾಘವೇಂದ್ರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಲಿದ್ದಾರೆ.
ಜ. 9ರಂದು ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಎಂ.ಚಂದ್ರಪ್ಪ, ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಎಸ್.ಬಿ.ಗಂಟಿ, ಬಿ.ಸಿ.ಪ್ರಸನ್ನ ಕುಮಾರ್, ಡಾ.ಎ.ಪಿ.ಲಿಂಗರಾಜು, ಸನಿಲ್ ಕೇಸರಿ, ಪಿ.ಕೆ.ಗೌಡ ಭಾಗವಹಿಸುವರು. ಸಂಜೆ 7ಕ್ಕೆ ಪದ್ಮಶ್ರೀ ಜಿ.ಬಿ.ಜೋಶಿ ರಚಿಸಿದ ಹರಿವಿನಾಯಕ ಸಂಗೀತ ನೀಡಿರುವ ಹುಲಗಪ್ಪ ಕಟ್ಟಿಮನಿ ನಿರ್ದೇಶನದ ‘ಆ ಊರು ಈ ಊರು’ ನಾಟಕ ಪ್ರದರ್ಶನವನ್ನು ತೀರ್ಥಹಳ್ಳಿಯ ನಟಮಿತ್ರ ಹವ್ಯಾಸಿ ಕಲಾ ಸಂಘದವರು ನೀಡಲಿದ್ದಾರೆ.
ಜ. 10ರಂದು ಸಂಜೆ ಬೆಂಗಳೂರಿನ ನಿವೃತ್ತ ಸಹಾಯಕ ಪೊಲೀಸ್ ಕಮಿಷನರ್ ಎನ್.ಡಿ.ಮುಲ್ಲಾ, ಡಿಡಿಪಿಐ ಎಸ್.ಆರ್.ಮಂಜುನಾಥ್, ಚಲನ ಚಿತ್ರ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ, ಕೆ.ಎಂ.ವೀರೇಶ್, ಮನೋಹರ ಮಹೇಶ್ವರಾಚಾರ್, ರವಿಕುಮಾರ್, ಕಲ್ಲೇಶ್ವರಪ್ಪ, ಗಣೇಶಯ್ಯ, ಗಿರೀಶ್, ಮಧುಕೇಶವ, ಮಹೇಶ್ ಈಶ್ವರಯ್ಯ ಭಾಗವಹಿಸುವರು. ಎಂ.ಭೈರೇಗೌಡ ರಂಗರೂಪ ನೀಡಿರುವ ಜೋಸೆಫ್ ನೀನಾಸಂ ನಿರ್ದೇಶನದ, ನಾಗೇಶ್ ಶ್ರೀನಿವಾಸ್ ಇಂದ್ರಜೆ ಸಂಗೀತದ ‘ಸ್ವಪ್ನ ಸಿದ್ಧಿ’ ನಾಟಕವನ್ನು ರಾಷ್ಟ್ರಕವಿ ಕುವೆಂಪು ನಾಟಕ ಗುಚ್ಛ ತಂಡದವರು ಅಭಿನಯಿಸುವರು.
ಜ. 11ರಂದು ರಂಗಭೂಮಿ ನಟ ಬಾಬು ಹಿರಣ್ಣಯ್ಯ ಸಮಾರೋಪ ಭಾಷಣ ಮಾಡಲಿದ್ದು, ಆಶ್ರಮದ ಹಿರಿಯ ವಿದ್ಯಾರ್ಥಿ ಪಿ.ಮುಕುಂದ, ಅಮೃತ್ ಆರ್ಗ್ಯಾನಿಕ್ಸ್ ಮಾಲೀಕ ಕೆ.ನಾಗರಾಜ್, ಚನ್ನಯ್ಯ ಬಿ.ಮಾರನಹಳ್ಳಿ, ಡಾ.ಶೋಭಾ, ಡಿ.ಆರ್.ನಿರ್ಮಲಾ, ರವಿಶಾಸ್ತ್ರಿ, ಎಚ್.ಆರ್.ಶ್ಯಾಮಸುಂದರ್ ಭಾಗವಹಿಸುವರು.
ಜಿ.ಎನ್.ಮಲ್ಲಿಕಾರ್ಜುನಪ್ಪ ರಚಿಸಿರುವ ನಾಗರಾಜ್ ಮತ್ತು ಶರಣಕುಮಾರ ಸಂಗೀತದ ವೈ.ಡಿ.ಬದಾಮಿ ಹಾಗೂ ಮಂಜುಳಾ ಬದಾಮಿ ನಿರ್ದೇಶನದ ‘ತಿರುಕಯಾನ’ ನಾಟಕವನ್ನು ಆಶ್ರಮದ ನೌಕರರು ಮತ್ತು ವಿದ್ಯಾರ್ಥಿಗಳು ಪ್ರದರ್ಶಿಸುವರು. ಮಲ್ಲಾಡಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.