ADVERTISEMENT

ಚಿತ್ರದುರ್ಗ: ರೈಲ್ವೆ ವಿದ್ಯುತ್‌ ಮಾರ್ಗ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 3:15 IST
Last Updated 24 ಅಕ್ಟೋಬರ್ 2021, 3:15 IST
ಚಿತ್ರದುರ್ಗ–ಚಿಕ್ಕಜಾಜೂರು ರೈಲ್ವೆ ಮಾರ್ಗವನ್ನು ರೈಲ್ವೆ ಅಧಿಕಾರಿಗಳು ಶನಿವಾರ ಪರಿಶೀಲನೆ ನಡೆಸಿದರು.
ಚಿತ್ರದುರ್ಗ–ಚಿಕ್ಕಜಾಜೂರು ರೈಲ್ವೆ ಮಾರ್ಗವನ್ನು ರೈಲ್ವೆ ಅಧಿಕಾರಿಗಳು ಶನಿವಾರ ಪರಿಶೀಲನೆ ನಡೆಸಿದರು.   

ಚಿತ್ರದುರ್ಗ: ಚಿಕ್ಕಜಾಜೂರು ಹಾಗೂ ಚಿತ್ರದುರ್ಗ ನಡುವಿನ ರೈಲ್ವೆ ಮಾರ್ಗದ ವಿದ್ಯುದ್ದೀಕರಣದ ಕಾಮಗಾರಿಯನ್ನು ನೈರುತ್ಯ ರೈಲ್ವೆ ಅಧಿಕಾರಿಗಳು ಶನಿವಾರ ಪರಿಶೀಲಿಸಿದರು. ರೈಲ್ವೆ ಸುರಕ್ಷತಾ ವಿಭಾಗ ಅನುಮತಿ ನೀಡಿದರೆ 32 ಕಿ.ಮೀ ವಿದ್ಯುತ್‌ ಮಾರ್ಗದಲ್ಲಿ ರೈಲು ಸಂಚರಿಸಲಿದೆ.

ಚಿಕ್ಕಜಾಜೂರು ಹಾಗೂ ಬಳ್ಳಾರಿಯ 184 ಕಿ.ಮೀ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಗೆ ರೈಲ್ವೆ ಇಲಾಖೆ 2017–18ರಲ್ಲಿ ಮಂಜೂರಾತಿ ನೀಡಿತ್ತು. ಬಳ್ಳಾರಿ, ರಾಯದುರ್ಗ, ಚಳ್ಳಕೆರೆ, ಚಿತ್ರದುರ್ಗದವರೆಗಿನ ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದೆ. ಚಿತ್ರದುರ್ಗ-ಚಿಕ್ಕಜಾಜೂರು ನಡುವಿನ ಮಾರ್ಗ ಮಾತ್ರ ಈವರೆಗೆ ಬಾಕಿ ಇತ್ತು.

ಬೆಂಗಳೂರು ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ವಲಯದ ಆಯುಕ್ತ ಅಭಯಕುಮಾರ್ ರೈ ನೇತೃತ್ವದ ತಂಡ ಚಿಕ್ಕಜಾಜೂರು ನಿಲ್ದಾಣದಿಂದ ಚಿತ್ರದುರ್ಗ ನಿಲ್ದಾಣದವರೆಗೆ ಪ್ರಯಾಣಿಸಿ ಪರಿಶೀಲನೆ ನಡೆಸಿತು. ಮಾರ್ಗದಲ್ಲಿರುವ ಟ್ರಾನ್ಸ್‌ಫಾರ್ಮರ್‌, ರೈಲ್ವೆ ವಿದ್ಯುತ್‌ ಮಾರ್ಗ ಹಾಗೂ ಬೆಸ್ಕಾಂ ಮಾರ್ಗಗಳಿಗೆ ಇರುವ ಅಂತರ ಹಾಗೂ ಸುರಕ್ಷತೆಯ ಬಗ್ಗೆ ತಪಾಸಣೆ ನಡೆಸಲಾಯಿತು. ಬಳ್ಳಾರಿ ಹಾಗೂ ಚಿತ್ರದುರ್ಗ ಮಾರ್ಗದಲ್ಲಿ ಇನ್ನು ಮುಂದೆ ಡೀಸೆಲ್‌ ಬದಲು ವಿದ್ಯುತ್‌ ಬಳಕೆಯಿಂದ ರೈಲು ಸಂಚರಿಸಲಿದೆ.

ADVERTISEMENT

ರೈಲ್ವೆ ವಿದ್ಯುದ್ದೀಕರಣ ಮಾರ್ಗದ ಕಾಮಗಾರಿ ದೇಶದಲ್ಲಿ 2014ರಿಂದ ಚುರುಕುಗೊಂಡಿದೆ. ಪರಿಸರ ಮಾಲಿನ್ಯ ತಡೆಗುಟ್ಟುವ ಉದ್ದೇಶದಿಂದ ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. 2023ರ ವೇಳೆಗೆ ಬ್ರಾಡ್‌ಗೇಜ್‌ ಮಾರ್ಗ ಸಂಪೂರ್ಣ ವಿದ್ಯುದ್ದೀಕರಣ ಆಗಲಿದೆ. ಇದರಿಂದ ರೈಲು ಸಂಚಾರದ ವೆಚ್ಚವೂ ಕಡಿಮೆ ಆಗಲಿದೆ.

ರೈಲ್ವೆ ವಿಕಾಸ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಜೈನ್, ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕ ರಾಹುಲ್ ಅಗರವಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.