
ರೇಣುಕಸ್ವಾಮಿ
ಚಿತ್ರದುರ್ಗ: ‘ನಮ್ಮ ಪುತ್ರ ರೇಣುಕಸ್ವಾಮಿಯ ಸಮಾಧಿ ಧ್ವಂಸವಾಗಿಲ್ಲ. ವೀರಶೈವ ಸಮಾಜದ ರುದ್ರಭೂಮಿಯಲ್ಲಿದ್ದ ಎಲ್ಲಾ ಸಮಾಧಿಗಳನ್ನು ಕಿತ್ತು ಜಾಗ ಸಮತಟ್ಟು ಮಾಡಲಾಗಿದೆ. ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ’ ಎಂದು ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್ ಬುಧವಾರ ಸ್ಪಷ್ಟನೆ ನೀಡಿದರು.
ರೇಣುಕಸ್ವಾಮಿ ಸಮಾಧಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಈ ಸಂಬಂಧ ಕುಟುಂಬ ಸದಸ್ಯರು ಪ್ರತಿಕ್ರಿಯೆ ನೀಡಿದ್ದಾರೆ.
2024, ಜೂನ್ 8ರಂದು ರೇಣುಕಸ್ವಾಮಿ ಬೆಂಗಳೂರಿನಲ್ಲಿ ಕೊಲೆಯಾಗಿದ್ದರು. ನಟ ದರ್ಶನ್ ಹಾಗೂ ಸಹಚರರು ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ. ರೇಣುಕಸ್ವಾಮಿ ಮೃತದೇಹವನ್ನು ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಸಮಾಧಿ ನಿರ್ಮಿಸಲಾಗಿತ್ತು.
‘ರುದ್ರಭೂಮಿಯಲ್ಲಿ ಜಾಗದ ಕೊರತೆ ಇದ್ದ ಕಾರಣ ಸಮಾಜದವರು ಜಾಗವನ್ನು ಮಟ್ಟ ಮಾಡಿದ್ದಾರೆ. ಸಮಾಜದ ಮುಖಂಡರು ಕೈಗೊಂಡಿರುವ ಕ್ರಮದ ಬಗ್ಗೆ ನಮ್ಮ ತಕರಾರು ಇಲ್ಲ’ ಎಂದು ಕಾಶಿನಾಥಯ್ಯ ಶಿವನಗೌಡರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.