ADVERTISEMENT

ಮೊಳಕಾಲ್ಮುರು: ವಸತಿ ಶಾಲೆ ವಿದ್ಯಾರ್ಥಿಗಳಿಗಿಲ್ಲ‘ಕಂಪ್ಯೂಟರ್‌ ಭಾಗ್ಯ’

ಕಂಪ್ಯೂಟರ್‌ ಲ್ಯಾಬ್‌, ಡೆಸ್ಕ್‌, ಶಿಕ್ಷಕಿ ಇದ್ದರೂ ಬಾರದ ಗಣಕ ಯಂತ್ರಗಳು, ಪೋಷಕರ ಅಸಮಾಧಾನ

ಕೊಂಡ್ಲಹಳ್ಳಿ ಜಯಪ್ರಕಾಶ
Published 18 ಏಪ್ರಿಲ್ 2025, 7:20 IST
Last Updated 18 ಏಪ್ರಿಲ್ 2025, 7:20 IST
 ಯರೇನಹಳ್ಳಿಯ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಂಪ್ಯೂಟರ್‌ ಡೆಸ್ಕ್‌ ಇದ್ದರೂ ಕಂಪ್ಯೂಟರ್‌ ಇಲ್ಲದಿರುವುದು
 ಯರೇನಹಳ್ಳಿಯ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಂಪ್ಯೂಟರ್‌ ಡೆಸ್ಕ್‌ ಇದ್ದರೂ ಕಂಪ್ಯೂಟರ್‌ ಇಲ್ಲದಿರುವುದು   

ಮೊಳಕಾಲ್ಮುರು: ಖಾಸಗಿ ಶಾಲೆಗಳನ್ನೂ ನಾಚಿಸುವಷ್ಟು ಸುಸಜ್ಜಿತವಾಗಿರುವ  ತಾಲ್ಲೂಕಿನ ಯರೇನಹಳ್ಳಿಯ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಕಂಪ್ಯೂಟರ್‌ ಭಾಗ್ಯ ಇಲ್ಲವಾಗಿದೆ. ಶಾಲೆ ಆರಂಭವಾಗಿ ಒಂದೂವರೆ ದಶಕ ಕಳೆದರೂ ಇಲ್ಲಿವರೆಗೂ ತರಗತಿಗಳು ‘ಸ್ಮಾರ್ಟ್‌’ ಆಗಿಲ್ಲ.

ಪರಿಶಿಷ್ಟ ವರ್ಗದ ವಿದ್ಯಾರ್ಥಿನಿಯರಿಗೆ ಸೀಮಿತವಾಗಿ 2009ರಲ್ಲಿ ಇಲ್ಲಿ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ ಆರಂಭವಾಯಿತು. ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲೆಯನ್ನು ನಂತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳಾಂತರ ಮಾಡಲಾಯಿತು. 2020ರಲ್ಲಿ ಯರೇನಹಳ್ಳಿ ಬಳಿ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಿಸಿ ಸ್ಥಳಾಂತರ ಮಾಡಲಾಗಿದೆ. ಖಾಸಗಿ ಶಾಲೆಗಳ ಕ್ಯಾಂಪಸ್‌ ಮೀರಿಸುವ ರೀತಿಯಲ್ಲಿ ಈ ಶಾಲೆ ನಿರ್ಮಿಸಲಾಗಿದೆ. ಆದರೆ ಅತ್ಯಗತ್ಯವಾಗಿ ಬೇಕಿರುವ ಕಂಪ್ಯೂಟರ್‌ಗಳನ್ನೂ ಇದೂವರೆಗೂ ಒದಗಿಸಿಲ್ಲ.

ಶಾಲೆಯಲ್ಲಿ 6-10 ನೇ ತರಗತಿವರೆಗೆ ತರಗತಿಗಳು ನಡೆಯುತ್ತಿವೆ. ಪ್ರತಿವರ್ಷ 50 ವಿದ್ಯಾರ್ಥಿನಿಯರಂತೆ ಒಟ್ಟು 250 ವಿದ್ಯಾರ್ಥಿನಿಯರು ಪ್ರವೇಶ ಪಡೆಯುತ್ತಾರೆ. ಇಲ್ಲಿ ಕಂಪ್ಯೂಟರ್‌ ಲ್ಯಾಬ್‌, ಕಂಪ್ಯೂಟರ್‌ ಡೆಸ್ಕ್‌ಗಳಿವೆ.  ಕಂಪ್ಯೂಟರ್‌ ಶಿಕ್ಷಕಿಯೂ ಇದ್ದಾರೆ.  ಆದರೆ ಮುಖ್ಯವಾಗಿ ಬೇಕಿರುವ ಕಂಪ್ಯೂಟರ್‌ಗಳೇ ಇಲ್ಲ.

ADVERTISEMENT

‘ಖಾಸಗಿ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ ಎಂಬ ಕಾರಣಕ್ಕೆ ಮೊದಲು ಕಂಪ್ಯೂಟರ್‌ ನೀಡಿರಲಿಲ್ಲ. ಈಗ ಸ್ವಂತ ಕಟ್ಟಡವಿದ್ದರೂ ಕಂಪ್ಯೂಟರ್‌ಗಳು ಪೂರೈಕೆಯಾಗಿಲ್ಲ’ ಎಂದು ಪ್ರಾಂಶುಪಾಲ ಶಿವರಾಜ್‌ ಮಾಹಿತಿ ನೀಡಿದರು.

ಈ ಶಾಲೆ ಕರ್ನಾಟಕ ರಾಜ್ಯ ವಸತಿ ಶಾಲೆ ಮಂಡಳಿ ( ಕ್ರೈಸ್)‌ ಅಡಿಯಲ್ಲಿ ನಡೆಯುತ್ತಿದೆ. ಜಿಲ್ಲಾಮಟ್ಟದಲ್ಲಿ ಇದನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಈಗಿರುವ 2 ಕಂಪ್ಯೂಟರ್‌ ಗಳನ್ನು ಕಚೇರಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ತರಗತಿಗೆ 3ರಂತೆ ಕನಿಷ್ಠ 15 ಕಂಪ್ಯೂಟರ್‌ ಅವಶ್ಯಕತೆ ಇದೆ’ ಎಂದು ಅವರು ಹೇಳಿದರು.

‘ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕಂಪ್ಯೂಟರ್‌ ಜ್ಞಾನ ಕಡ್ಡಾಯವಾಗಿದೆ.  ಅಧಿಕಾರಿಗಳು ಇತ್ತ ಗಮನಹರಿಸಿ ಕಂಪ್ಯೂಟರ್‌ ಒದಗಿಸಬೇಕು’ ಎಂದು ಪೋಷಕರಾದ ಸಿದ್ದಯ್ಯನಕೋಟೆಯ ಪಿ.ಆರ್.‌ ಕಾಂತರಾಜ್‌ ಒತ್ತಾಯಿಸಿದರು.

ವಸತಿ ಶಾಲೆಯಲ್ಲಿ ಕಂಪ್ಯೂಟರ್‌ ಇಲ್ಲದಿರುವುದು ಗಮನಕ್ಕೆ ಬಂದಿಲ್ಲ ಈ ಬಗ್ಗೆ ಪೂರ್ಣ ಮಾಹಿತಿ ಪಡೆದು ಕ್ರೈಸ್‌ಗೆ ವರದಿ ಸಲ್ಲಿಸಿ ಮಂಜೂರಾತಿಗೆ ಕ್ರಮ ವಹಿಸಲಾಗುವುದು
- ದಿವಾಕರ್‌ ಜಿಲ್ಲಾ ಎಸ್‌ಟಿ ಅಧಿಕಾರಿ ಚಿತ್ರದುರ್ಗ ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.