ADVERTISEMENT

ಪರಶುರಾಂಪುರ: 6 ತಿಂಗಳಿಂದ ಸ್ಥಗಿತಗೊಂಡ ರಸ್ತೆ ಕಾಮಗಾರಿ: ಆಕ್ರೋಶ

ಕೊರ್ಲಕುಂಟೆ, ಪಗಡಲಬಂಡೆ, ಜಾಜೂರು, ಬೊಮ್ಮನಕುಂಟೆ, ವೃಂದವನಹಳ್ಳಿ, ಕಾಮಸಮುದ್ರ ಸಂಪರ್ಕ ಮಾರ್ಗ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 6:08 IST
Last Updated 1 ಜನವರಿ 2023, 6:08 IST
ಪರಶುರಾಂಪುರದಿಂದ ಜಾಜೂರಿಗೆ ಹೋಗುವ ರಸ್ತೆಯನ್ನು ಜೂನ್‌ ತಿಂಗಳಲ್ಲಿ ಅಗೆದ ಸಂದರ್ಭ
ಪರಶುರಾಂಪುರದಿಂದ ಜಾಜೂರಿಗೆ ಹೋಗುವ ರಸ್ತೆಯನ್ನು ಜೂನ್‌ ತಿಂಗಳಲ್ಲಿ ಅಗೆದ ಸಂದರ್ಭ   

ಪರಶುರಾಂಪುರ: ಇಲ್ಲಿಂದ ಜಾಜೂರಿಗೆ ಹೋಗುವ ರಸ್ತೆ ಅಗೆದು 6 ತಿಂಗಳು ಕಳೆದಿವೆ. ದಾರಿಯಲ್ಲಿ ದೊಡ್ಡ ಗಾತ್ರದ ವಾಹನಗಳು ಓಡಾಡಿದರೆ ರಸ್ತೆ ತುಂಬೆಲ್ಲ ದೂಳು ಎದ್ದು ದಾರಿಹೋಕರಿಗೆ ಮತ್ತು ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಕಣ್ಣುಮುಚ್ಚಿ ಕುಳಿತಿದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಪರಶುರಾಂಪುರ ದಿಂದ ಕೊರ್ಲಕುಂಟೆ, ಪಗಡಲಬಂಡೆ, ಜಾಜೂರು, ಬೊಮ್ಮನಕುಂಟೆ, ವೃಂದವನಹಳ್ಳಿ, ಕಾಮಸಮುದ್ರ, ಮೊದೂರುಗಳನ್ನು ಸಂಪರ್ಕಿಸುವ ಜೊತೆಗೆ ನೆರೆಯ ಸಿಮಾಂಧ್ರದಿಂದಲೂ ನಿತ್ಯ ವಾಹನಗಳು ಈ ದಾರಿಯಲ್ಲಿ
ಸಂಚರಿಸುತ್ತವೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಜೂನ್ ತಿಂಗಳಲ್ಲಿ ₹ 4.20 ಕೋಟಿಯ ಈ ಕಾಮಗಾರಿಗಾಗಿ ಬೆಂಗಳೂರಿನ ಗುತ್ತಿಗೆದಾರರು ಓಡಾಡಲು ಸುಸ್ಥಿತಿಯಲ್ಲಿದ್ದ ರಸ್ತೆಯನ್ನು ಅಗೆಯಲು ಆರಂಭ ಮಾಡಿದಾಗ ಅನೇಕರು ಪ್ರಶ್ನೆ ಮಾಡಿದ್ದುಂಟು. ಆದರೆ ಗುತ್ತಿಗೆದಾರರು ಮತ್ತು ಲೋಕೋಪಯೋಗಿ ಇಲಾಖೆಯವರು ಈ ರಸ್ತೆ ಜಿಲ್ಲಾ ಹೆದ್ದಾರಿಯಿಂದ ರಾಜ್ಯ ಹೆದ್ದಾರಿಯಾಗಿ ಮೆಲ್ದರ್ಜೆಗೆ ಏರಿದೆ. ಆದ್ದರಿಂದ ಹೊಸದಾಗಿ ಮತ್ತು ವೇಗವಾಗಿ ಮಾಡುವುದಾಗಿ ತಿಳಿಸಿದ್ದರು. ಆದರೆ ರಸ್ತೆಯನ್ನು ಅಗೆದು ಅದಕ್ಕೆ ಜಲ್ಲಿ ಹಾಕಿ ಡಾಂಬರ್‌ ಹಾಕದೇ 6 ತಿಂಗಳು ಕಳೆದಿವೆ. ಕಾಮಗಾರಿಯನ್ನು ಸ್ಥಗಿತ ಗೊಳಿಸಿರುವುದು ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದೆ.

ADVERTISEMENT

ರಸ್ತೆಯಲ್ಲಿ ಹರಡಿರುವ ಜಲ್ಲಿ ಮೇಲೆದ್ದು ವಾಹನಗಳು ಓಡಾಡುವಾಗ ಜನರಿಗೆ ಬಂದು ಬೀಳುತ್ತಿವೆ. ಜೊತೆಗೆ ಅಪಘಾತಕ್ಕೆ ಇದು ದಾರಿ ಮಾಡಿಕೊಡುತ್ತಿದೆ. ಅನೇಕ ಬೈಕ್ ಸವಾರರು ಬಿದ್ದು ಗಾಯಗಳಾಗಿವೆ. ದೊಡ್ಡ ಗಾತ್ರದ ವಾಹನಗಳು ಬಂದಾಗ ಅದರ ಹಿಂದೆ ಸುನಾಮಿಯಂತೆ ದೂಳು ಬರುತ್ತದೆ. ಅಕ್ಕಪಕ್ಕದಲ್ಲಿ ಓಡಾಡುವವರಿಗೆ ಮತ್ತು ಬೈಕ್ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಇಲಾಖೆಯವರು ಎಚ್ಚೆತ್ತು ರಸ್ತೆ ನಿರ್ಮಾಣ ಕಾಮಗಾರಿ ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ಮಾಡಲಾಗುವುದು ಎಂದು ಇಲ್ಲಿಯ ಚಿತ್ರಲಿಂಗಪ್ಪ, ಯರ್‍ರಪ್ಪ, ಮಂಜುನಾಥ, ಕೆಂಗಜ್ಜ ಮುಂತಾದವರು ಎಚ್ಚರಿಕೆ
ನೀಡಿದ್ದಾರೆ.

ರಸ್ತೆ ಓಡಾಡಲು ಚೆನ್ನಾಗಿತ್ತು. ಅದನ್ನು ಕಿತ್ತು ಸಾರ್ವಜನಿಕರಿಗೆ ತೊಂದರೆ ಕೊಡುವ ಅವಶ್ಯಕತೆ ಇರಲಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಕಡೆ ಗಮನ ನೀಡಬೇಕು. ಕೂಡಲೇ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಅವರು
ಆಗ್ರಹಿಸಿದರು.

------

ಈ ಭಾಗದ ವಾಹನ ಸವಾರರಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿದ್ದು, ಕೂಡಲೇ ಸಂಬಂಧ ಪಟ್ಟ ಇಲಾಖೆಯು ಎಚ್ಚೆತ್ತು ಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಬೇಕು.
–ಪಿಲ್ಲಹಳ್ಳಿ ಚಿತ್ರಲಿಂಗಪ್ಪ

............

ಈಗಾಗಲೇ 4 ಬಾರಿ ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದೇವೆ. ಕೊನೆಯದಾಗಿ ಇನ್ನೂ ಒಂದು ಕಾಲಾವಕಾಶ ನೀಡಿದ್ದೇವೆ. ಅದನ್ನು ಮೀರಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ.

ವಿಜಯ ಕುಮಾರ, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.