ನಾಯಕನಹಟ್ಟಿ: ಸಮೀಪದ ತಳಕು ಹೋಬಳಿಯ ಘಟಪರ್ತಿ ಕೆರೆಯಿಂದ ಹೊರಬರುವ ನೀರಿನ ರಭಸಕ್ಕೆ ಭೋಗನಹಳ್ಳಿಯಿಂದ ಬೂದಿಹಳ್ಳಿ ಜಿಲ್ಲಾ ಮುಖ್ಯರಸ್ತೆಯು ಕೊಚ್ಚಿ ಹೋಗಿದ್ದು ವಾಹನ ಸವಾರರು ಅಪಾಯದ ನಡುವೆ ಸಂಚರಿಸುವಂತಾಗಿದೆ.
ವರ್ಷದ ಹಿಂದೆ ಸುರಿದ ಭಾರಿ ಮಳೆಗೆ, ರಭಸವಾಗಿ ಹರಿದ ಹಳ್ಳದ ನೀರಿಗೆ ರಸ್ತೆಯ ಇಕ್ಕೆಲದಲ್ಲಿದ್ದ ಮಣ್ಣು, ರಸ್ತೆ ಮೇಲಿದ್ದ ಡಾಂಬಾರ್ ಕೊಚ್ಚಿಹೋಗಿದೆ. ಇದರಿಂದಾಗಿ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ಭೋಗನಹಳ್ಳಿ ಬೂದಿಹಳ್ಳಿ ಮಧ್ಯೆ ಜೀವ ಭಯದಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.
ಆಂಧ್ರಪ್ರದೇಶದ ಕಲ್ಯಾಣದುರ್ಗ, ರಾಯದುರ್ಗದಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ಅತೀ ಕಡಿಮೆ ಅಂತರದಲ್ಲಿ ಸಂಪರ್ಕ ಸಾಧಿಸಲು ಭೋಗನಹಳ್ಳಿ– ಬೂದಿಹಳ್ಳಿ ರಸ್ತೆಯು ಏಕೈಕ ಮಾರ್ಗವಾಗಿದೆ. ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರದಿಂದ ಮೊಳಕಾಲ್ಮುರು ಭಾಗಕ್ಕೆ ತೆರಳಲು ಇದೇ ಮಾರ್ಗದಲ್ಲಿ ಸಂಚರಿಸಬೇಕಿದೆ.
ಹಾಗೇ ತಳಕು ಓಬಳಾಪುರ, ರೇಣುಕಾಪುರ, ಬಸಾಪುರ, ಮೈಲನಹಳ್ಳಿ, ಯಾದಲಗಟ್ಟೆ, ಗುಡಿಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಈ ರಸ್ತೆಯಿಂದಲೇ ಸಂಪರ್ಕ ಸಾಧಿಸಬೇಕಿದೆ. ಭೋಗನಹಳ್ಳಿಯಿಂದ ಬೂದಿಹಳ್ಳಿಗೆ 3 ಕಿ.ಮೀ ಅಂತರವಿದ್ದು, ಬೂದಿಹಳ್ಳಿಯಿಂದ 2 ಕಿ.ಮೀ.ವರೆಗೂ ಡಾಂಬರ್ ರಸ್ತೆ ಇದ್ದು, ಒಂದು ಕಿ.ಮೀ.ಯಷ್ಟು ರಸ್ತೆಯಲ್ಲಿ ತಗ್ಗುಗುಂಡಿಗಳು ಮತ್ತು ಮಣ್ಣು ಕುಸಿದಿದೆ.
ಒಂದೂವರೆ ವರ್ಷದ ಹಿಂದೆ ಭೋಗನಹಳ್ಳಿ– ಬೂದಿಹಳ್ಳಿ ಮಧ್ಯೆ ರಸ್ತೆ ನಿರ್ಮಾಣ ಮಾಡಲಾಗಿತ್ತು. ವರ್ಷದ ಹಿಂದೆ ಸುರಿದ ಭಾರಿ ಮಳೆಗೆ ಘಟಪರ್ತಿ ಕೆರೆಯಿಂದ ಹರಿದು ಬಂದ ಅಪಾರ ಪ್ರಮಾಣದ ನೀರು ಭೋಗನಹಳ್ಳಿ– ಬೂದಿಹಳ್ಳಿ ಮುಖ್ಯ ರಸ್ತೆಯ ಪಕ್ಕದಲ್ಲಿ ರಭಸವಾಗಿ ಹರಿದು ವೇದಾವತಿ ನದಿ ಸೇರಿದೆ. ಇದರಿಂದಾಗಿ ರಸ್ತೆಯ ಪಕ್ಕದಲ್ಲಿದ್ದ ಮಣ್ಣು ಸವೆದು 100 ಮೀಟರ್ ಉದ್ದದವರೆಗೂ ರಸ್ತೆ ಕುಸಿದು ಡಾಂಬರ್ ಸಮೇತ ನೀರಿನಲ್ಲಿ ಕೊಚ್ಚಿಹೋಗಿದೆ.
‘ರಸ್ತೆಯ ಮಧ್ಯೆ ಕಂದಕ ಮತ್ತು ಕೊರಕಲು ಆರಂಭವಾಗಿ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ನಿತ್ಯ ನೂರಾರು ವಾಹನಗಳು ಇಲ್ಲಿ ಓಡಾಡುತ್ತವೆ. ಸ್ವಲ್ಪ ವಾಹನಗಳ ನಿಯಂತ್ರಣ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಭೋಗನಹಳ್ಳಿ ಗ್ರಾಮಸ್ಥರಾದ ಆಂಜನೇಯ, ಮಲ್ಲಜ್ಜಪ್ಪ, ನಾಗರಡ್ಡಿ, ಗೌರಣ್ಣ, ಕೃಷ್ಣರೆಡ್ಡಿ, ಲಿಂಗರಾಜ, ರಂಗಪ್ಪ ವಿವರಿಸಿದರು.
‘ಭೋಗನಹಳ್ಳಿ– ಬೂದಿಹಳ್ಳಿ ಮಧ್ಯೆ ರಸ್ತೆ ಹದಗೆಟ್ಟಿರುವುದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅತೀ ಶೀಘ್ರದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಸೃಜಿಸಲಾಗುವುದು’ ಎಂದು ಪಿಡಬ್ಲ್ಯುಡಿ ಎ.ಇ. ರಾಘವೇಂದ್ರ ನಾಯ್ಕ್ ಡಿ. ಹೇಳಿದರು.
ಕೊಚ್ಚಿಹೋಗಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಈ ರಸ್ತೆಯಲ್ಲಿ ಒಂದು ವರ್ಷದಿಂದ ಜೀವಭಯದಿಂದ ಸಂಚರಿಸುತ್ತಿದ್ದೇವೆ. ದುರಸ್ತಿಗಾಗಿ ಒತ್ತಾಯಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ಬಿ.ಪ್ರಹ್ಲಾದ, ಗ್ರಾ.ಪಂ ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.