ADVERTISEMENT

ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡಬೇಡಿ: ಶ್ರೀನಾಥ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 7:12 IST
Last Updated 3 ಜನವರಿ 2026, 7:12 IST
ಹಿರಿಯೂರು ತಾಲ್ಲೂಕಿನ ಕಸವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ಶಾಲೆಯ ಹಳೆಯ ವಿದ್ಯಾರ್ಥಿ ಶ್ರೀನಾಥ್ ಶುಕ್ರವಾರ ಕುಟುಂಬದವರೊಂದಿಗೆ ಭೇಟಿ ನೀಡಿದ್ದರು 
ಹಿರಿಯೂರು ತಾಲ್ಲೂಕಿನ ಕಸವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ಶಾಲೆಯ ಹಳೆಯ ವಿದ್ಯಾರ್ಥಿ ಶ್ರೀನಾಥ್ ಶುಕ್ರವಾರ ಕುಟುಂಬದವರೊಂದಿಗೆ ಭೇಟಿ ನೀಡಿದ್ದರು    

ಹಿರಿಯೂರು: ‘ಅಮೆರಿಕಾಗೆ ಹೋಗುವಷ್ಟು ಅಕ್ಷರ ಜ್ಞಾನ ನೀಡಿರುವ ನನ್ನೂರಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಚ್ಚಲು ನನ್ನೂರ ಜನ ಅವಕಾಶ ಕೊಡಬೇಡಿ’ ಎಂದು ಅಮೆರಿಕದಲ್ಲಿ ನೆಲೆಸಿರುವ ಶ್ರೀನಾಥ್ ಕಳಕಳಿಯ ಮನವಿ ಮಾಡಿದರು.

ತಾಲ್ಲೂಕಿನ ಕಸವನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಶುಕ್ರವಾರ ಕುಟುಂಬದವರೊಟ್ಟಿಗೆ ಭೇಟಿ ನೀಡಿದ್ದ ಅವರು ಹೊಸವರ್ಷದ ಶುಭಾಶಯ ಕೋರಿ, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಜೊತೆ ಭೋಜನ ಸವಿದರು.

‘ಕನ್ನಡ ಕೇವಲ ಮಾತೃಭಾಷೆಯಲ್ಲ. ಅದು ನಮಗೆಲ್ಲ ಅನ್ನದ ಭಾಷೆ. ನನ್ನಂತಹ ಲಕ್ಷಾಂತರ ಜನರಿಗೆ ಅಕ್ಷರದ ಅರಿವು ಮೂಡಿಸಿದ್ದು ಇದೇ ಸರ್ಕಾರಿ ಕನ್ನಡ ಶಾಲೆಗಳು. ಕನ್ನಡದ ಮಹತ್ವ, ಸರ್ಕಾರಿ ಶಾಲೆಗಳ ಕೊಡುಗೆಯನ್ನು ಹೊರನಾಡು–ಹೊರದೇಶಗಳಲ್ಲಿರುವ ಕನ್ನಡಿಗರು ಸ್ಮರಿಸದೇ ಇರುವ ದಿನಗಳಿಲ್ಲ’ ಎಂದು ಹೇಳಿದರು.

ADVERTISEMENT

‘ನಾವು ಅಟ್ಲಾಂಟಾದಲ್ಲಿದ್ದರೂ ಕರ್ನಾಟಕ ರಾಜ್ಯೋತ್ಸವ, ಕನ್ನಡ ಕಾರ್ಯಕ್ರಮಗಳು, ಅಕ್ಕ ಸಮ್ಮೇಳನ ಇತ್ಯಾದಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇವೆ. ಕನ್ನಡದವರೆಲ್ಲ ಒಟ್ಟಾಗಿ ಹಬ್ಬ, ಹರಿದಿನಗಳನ್ನು ಆಚರಿಸುತ್ತೇವೆ. ಕನ್ನಡದಲ್ಲಿ ಚರ್ಚಾಗೋಷ್ಠಿ, ಹಾಡುಗಳು, ಸಂವಾದ ಕಾರ್ಯಕ್ರಮಗಳನ್ನು ನಡೆಸುತ್ತೇವೆ’ ಎಂದು ಅವರು ತಿಳಿಸಿದರು.

‘ನಮ್ಮೂರಿನ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಲು ಸದಾ ಸಿದ್ದನಿದ್ದೇನೆ. ಸರ್ಕಾರಿ ಶಾಲೆಗಳು ನಮ್ಮ ನಾಡಿನ ಅಸ್ಮಿತೆ ಇದ್ದಂತೆ. ಖಾಸಗಿ ಲಾಬಿಗೆ ಮಣಿದು ಕೋಟ್ಯಂತರ ಜನರಿಗೆ ಬದುಕು ಕಟ್ಟಿಕೊಟ್ಟಿರುವ ಕನ್ನಡ ಶಾಲೆಗಳ ಬಾಗಿಲು ಹಾಕಲು ಬಿಡಬಾರದು’ ಎಂದು ಶ್ರೀನಾಥ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್, ಮುಖ್ಯ ಶಿಕ್ಷಕ ರಂಗನಾಥ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ರಾಮಚಂದ್ರ ಕಸವನಹಳ್ಳಿ, ಶ್ರೀನಿವಾಸ್, ಸಹಶಿಕ್ಷಕ ಬಸವರಾಜ್, ಗ್ರಾಮಸ್ಥರು, ಅಂಗನವಾಡಿ ಶಿಕ್ಷಕಿ ಹಾಗೂ ಮಕ್ಕಳು ಹಾಜರಿದ್ದರು.