ADVERTISEMENT

ಮೊಳಕಾಲ್ಮುರು: ಸರ್ಕಾರಿ ಬಾಲಕಿಯರ ಶಾಲೆ ನವೀಕರಣಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:57 IST
Last Updated 16 ಸೆಪ್ಟೆಂಬರ್ 2025, 4:57 IST
ಮೊಳಕಾಲ್ಮುರಿನಲ್ಲಿ ಸೋಮವಾರ ನೂತನ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಕಟ್ಟಡಕ್ಕೆ ವಿಧಾನ ಪರಿಷತ್‌ ಮುಖ್ಯ ಸಚೇತಕ ಎಂ. ರವಿಕುಮಾರ್‌ ಶಂಕುಸ್ಥಾಪನೆ ಮಾಡಿದರು
ಮೊಳಕಾಲ್ಮುರಿನಲ್ಲಿ ಸೋಮವಾರ ನೂತನ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಕಟ್ಟಡಕ್ಕೆ ವಿಧಾನ ಪರಿಷತ್‌ ಮುಖ್ಯ ಸಚೇತಕ ಎಂ. ರವಿಕುಮಾರ್‌ ಶಂಕುಸ್ಥಾಪನೆ ಮಾಡಿದರು   

ಮೊಳಕಾಲ್ಮುರು: ಬರಪೀಡಿತ, ಆಂಧ್ರಗಡಿಯಲ್ಲಿರುವ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆಯಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್.‌ ನವೀನ್‌ ಹೇಳಿದರು.

ಇಲ್ಲಿನ ಬಿಇಒ ಕಚೇರಿ ಹಿಂಭಾಗದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಸೋಮವಾರ ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಸಂಸತ್‌ ಸದಸ್ಯ ಗೋವಿಂದ ಕಾರಜೋಳ, ಶಾಸಕ ಎನ್.ವೈ. ಗೋಪಾಲಕೃಷ್ಣ, ವಿಧಾನ ಪರಿಷತ್‌ ಮುಖ್ಯ ಸಚೇತಕ ಸದಸ್ಯರಾದ ಎಂ. ರವಿಕುಮಾರ್‌,  ಡಿ.ಟಿ. ಶ್ರೀನಿವಾಸ್‌, ಕೇಶವ ಪ್ರಸಾದ್‌, ಎಸ್.‌ ಹೇಮಲತಾ ನಾಯಕ್‌ ಅವರು ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ತಲಾ ₹ 25 ಲಕ್ಷ ಮಂಜೂರು ಮಾಡಿದ್ದಾರೆ. ಒಟ್ಟು ₹ 2.50 ಕೋಟಿ ವೆಚ್ಚದಲ್ಲಿ ನವೀಕರಣ ಕೈಗೆತ್ತಿಕೊಳ್ಳಲಾಗಿದ್ದು ಸಿಎಸ್‌ಆರ್‌ ನಿಧಿ ಮತ್ತು ದಾನಿಗಳ ದೇಣಿಗೆ ಬಳಸಿಕೊಳ್ಳಲಾಗುವುದು. ಒಂದೂವರೆ ವರ್ಷದ ಒಳಗಾಗಿ ಕಟ್ಟಡ ಪೂರ್ಣಗೊಳಿಸಲು ಸೂಚಿಸಲಾಗಿದೆ. ನಿರ್ಮಿತಿ ಕೇಂದ್ರಕ್ಕೆ ಹೊಣೆ ವಹಿಸಲಾಗಿದೆ ಎಂದರು.

ಇದು ರಾಜ್ಯದಲ್ಲಿ ಪ್ರಥಮ ಯತ್ನವಾಗಿದ್ದು, ಜಿಲ್ಲೆಯಲ್ಲಿ ಮಾದರಿ ಶಾಲೆಯಾಗಿ ಈ ಶಾಲೆ ಹೊರಹೊಮ್ಮಲಿದೆ. ಒಟ್ಟು 14 ಕೊಠಡಿಗಳು, ಪ್ರತ್ಯೇಕ ಶೌಚಾಲಯ, ಆಟದ ಮೈದಾನ, ಆಡಿಟೋರಿಯಂ, ಸ್ಮಾರ್ಟ್‌ ಕ್ಲಾಸ್‌ ನಿರ್ಮಿಸಲಾಗುವುದು. ಶಾಲೆ ಮುಂಭಾಗದಲ್ಲಿರುವ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಹಳೆ ಕೊಠಡಿಗಳು, ಬಿಇಒ ವಾಹನ ನಿಲುಗಡೆ ಕಟ್ಟಡ, ಬಿಇಒ ಕಚೇರಿ ನೆಲಸಮ ಮಾಡಿ ‘ಎಲ್‌’ ಮಾದರಿಯಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಮುಖ್ಯ ಸಚೇತಕ ಎಂ. ರವಿಕುಮಾರ್‌ ಮಾತನಾಡಿದರು.

ಪರಿಷತ್‌ ಸದಸ್ಯರಾದ ಡಿ.ಟಿ. ಶ್ರೀನಿವಾಸ್‌, ಕೇಶವ ಪ್ರಸಾದ್‌, ಹೇಮಲತಾ ನಾಯಕ, ರಾಜ್ಯ ದ್ರಾಕ್ಷಾರಸ ಮತ್ತು ವೈನ್‌ ಬೋರ್ಡ್‌ ಅಧ್ಯಕ್ಷ ಬಿ. ಯೋಗೇಶ್‌ಬಾಬು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಸಿದ್ದಣ್ಣ, ಉಪಾಧ್ಯಕ್ಷ ಕೆ. ತಿಪ್ಪೇಸ್ವಾಮಿ, ಬಿಇಒ ನಿರ್ಮಲಾದೇವಿ, ಬಿಜೆಪಿ ಮುಖಂಡರಾದ ಡಾ.ಪಿ.ಎಂ. ಮಂಜುನಾಥ್‌, ಕಿರಣ್‌ ಗಾಯಕವಾಡ್‌, ಆರ್.‌ ರಾಮರೆಡ್ಡಿ, ಕೆ.ಟಿ. ಶ್ರೀರಾಮರೆಡ್ಡಿ, ರೂಪಾ ವಿನಯ್‌, ಬಾಳೆಕಾಯಿ ರಾಮದಾಸ್‌ ಇದ್ದರು.

‌ದೇಶದ ಅಭಿವೃದ್ಧಿಗೆ ಶಿಕ್ಷಣ ರಹದಾರಿಯಾಗಿದೆ ಇದೊಂದು ಉತ್ತಮ ಶಾಲೆಯಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ. ಸೌಲಭ್ಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುಲು ಮುಂದಾಗಬೇಕು.
ಎಂ. ರವಿಕುಮಾರ್ ವಿಧಾನ ಪರಿಷತ್‌ ಮುಖ್ಯ ಸಚೇತಕ
ದಶಕ ಹಿಂದಕ್ಕೆ ಹೋಲಿಸಿದರೆ ಎಲ್ಲಾ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ. ಸದ್ಭಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರುವ ಹೊರೆ ವಿದ್ಯಾರ್ಥಿಗಳ ಮೇಲಿದೆ.
 ಡಿ.ಟಿ. ಶ್ರೀನಿವಾಸ್‌ ವಿಧಾನ ಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.